ವಿಶ್ವ ತಂಬಾಕು ರಹಿತ ದಿನ 2021, ಈ ವರ್ಷ ಒಂದು ರೀತಿ ವಿಶೇಷವಾದ ದಿನ. ಕೋವಿಡ್ ಸಾಂಕ್ರಾಮಿಕ ರೋಗದ ನಡುವೆ ಈ ದಿನದ ಮಹತ್ವ ಇಮ್ಮಡಿಯಾಗಿದೆ. ಈ ದಿನದ ಇತಿಹಾಸ, ಈ ವರ್ಷದ ಥೀಮ್ ಮತ್ತು ಮಹತ್ವವನ್ನು ನೀವು ತಿಳಿಯಬೇಕಿದೆ.
ಇಡೀ ವಿಶ್ವವೇ ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಡುತ್ತಿರುವಾಗ ಮತ್ತು ಈ ಸಾಂಕ್ರಾಮಿಕ ರೋಗ ಯಾಕಾದರೂ ಬಂದಿತೋ ಎಂದು ಬೈದುಕೊಳ್ಳುವಾಗ, ನಮಗೆ ಗೊತ್ತಿಲ್ಲದಂತೆ ಹಲವಾರು ಉತ್ತಮ ಬೆಳವಣಿಗೆಗಳು ಕೂಡ ನಡಿಯುತ್ತಿವೆ. ವಿಶ್ವದಲ್ಲಿದ್ದ ಮಾಲಿನ್ಯದ ಪ್ರಮಾಣ ಕಡಿಮೆಯಾಗುತ್ತಿದೆ, ಎಲ್ಲರೂ ತಮ್ಮ ಕುಟುಂಬದ ಜೊತೆ ಹೆಚ್ಚಿನ ಸಮಯ ಕಳೆಯುತ್ತಿದ್ದಾರೆ, ತಂತ್ರಜ್ಞಾನದ ಬಳಕೆ ಹೆಚ್ಚಾಗುತ್ತಿದೆ, ಎಲ್ಲೂ ನಿಲ್ಲದೆ ಓದುತ್ತಿದ್ದ ಮಾನವನ ವರ್ಗಕ್ಕೆ ಕಡಿವಾಣ ಹಾಕಿದೆ, ಮನುಷ್ಯನಲ್ಲಿ ಸಹಕಾರ ಭಾವ, ಸಹಾಯ ಮಾಡುವ ಗುಣ ಎಲ್ಲವನ್ನು ಪ್ರೇರೇಪಿಸುತ್ತಿದೆ, ಹೀಗೆ ಹಲವಾರು ವಿಶೇಷಗಳೂ ಕೂಡ ನಡಿಯುತ್ತಿದೆ. ಇದರಲ್ಲಿ ವಿಶೇಷವಾದ ಅಂಶ ಎಂದರೆ ಹಲವು ಮಂದಿ ತಂಬಾಕು ಸೇವನೆ ನಿಲ್ಲಿಸಿರುವುದು. ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ, ಕೋವಿಡ್ -19 ಸಾಂಕ್ರಾಮಿಕ ರೋಗವು ಲಕ್ಷಾಂತರ ತಂಬಾಕು ಬಳಕೆದಾರರು ವಿಶೇಷವಾಗಿ ಧೂಮಪಾನ ತ್ಯಜಿಸಲು ಪ್ರೇರೇಪಿಸುತ್ತದೆ ಎಂದು ನಂಬಿದೆ. ಪ್ರಪಂಚದಾದ್ಯಂತ ಸುಮಾರು 60% ತಂಬಾಕು ಬಳಕೆದಾರರು ಧೂಮಪಾನವನ್ನು ತ್ಯಜಿಸಲು ಬಯಸುತ್ತಾರೆ ಎಂದಿದೆ.
ವಿಶ್ವ ತಂಬಾಕು ರಹಿತ ದಿನವನ್ನು ಆಚರಿಸಲು "ತ್ಯಜಿಸಲು ಬದ್ಧರಾಗಿರಿ" ಎಂಬ ಘೋಷಣೆಯಡಿಯಲ್ಲಿ WHO ಜಾಗತಿಕ ಅಭಿಯಾನವನ್ನು ಪ್ರಾರಂಭಿಸಿದೆ.
ಈ ದಿನವನ್ನು ಪ್ರತಿ ವರ್ಷ ಮೇ 31 ರಂದು ವಿಶ್ವದಾದ್ಯಂತ ಆಚರಿಸಲಾಗುತ್ತದೆ. ತಂಬಾಕು ಬಳಕೆ ಕೂಡ ಒಂದು ಸಾಂಕ್ರಾಮಿಕ, ಇದನ್ನು ಇಡೀ ಜಗತ್ತಿಗೆ ಮನವರಿಕೆ ಮಾಡಬೇಕು ಮತ್ತು ತಡೆಗಟ್ಟಬಹುದಾದ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು 1987 ರಲ್ಲಿ WHOನ ಸದಸ್ಯ ರಾಷ್ಟ್ರಗಳು ವಿಶ್ವ ತಂಬಾಕು ರಹಿತ ದಿನವನ್ನು ಆಚರಣೆಗೆ ತಂದರು.
ಇತಿಹಾಸ ಮತ್ತು ಪ್ರಾಮುಖ್ಯತೆ:
- 1987 ರಲ್ಲಿ, ವಿಶ್ವ ಆರೋಗ್ಯ ಅಸೆಂಬ್ಲಿ WHA40.38 ಎಂಬ ನಿರ್ಣಯವನ್ನು ಅಂಗೀಕರಿಸಿತು, ಇದರ ಪ್ರಕಾರ ಏಪ್ರಿಲ್ 7, 1988 ಅನ್ನು "ವಿಶ್ವದ ಧೂಮಪಾನ ರಹಿತ ದಿನ" ಎಂದು ಕರೆಯಿತು.
- 1988 ರಲ್ಲಿ, WHA42.19 ಎಂಬ ನಿರ್ಣಯವನ್ನು ಅಂಗೀಕರಿಸಲಾಯಿತು, ಪ್ರತಿ ವರ್ಷ ಮೇ 31 ರಂದು ವಿಶ್ವ ತಂಬಾಕು ರಹಿತ ದಿನವನ್ನು ಆಚರಿಸಲು ಕರೆ ನೀಡಿತು.
ಈ ವಾರ್ಷಿಕ ಆಚರಣೆಯು ಜಾಗತಿಕ ನಾಗರಿಕರ ನಡುವೆ ತಂಬಾಕು ಬಳಸುವ ಅಪಾಯಗಳ ಬಗ್ಗೆ ಮಾತ್ರವಲ್ಲದೆ, ತಂಬಾಕು ಕಂಪನಿಗಳ ವ್ಯಾಪಾರ ಅಭ್ಯಾಸಗಳ ಬಗ್ಗೆಯೂ ಜಾಗೃತಿ ಮೂಡಿಸುವ ಗುರಿಯನ್ನು ಹೊಂದಿದೆ, ತಂಬಾಕು ಕೂಡ ಒಂದು ಸಾಂಕ್ರಾಮಿಕ, ಇದರ ವಿರುದ್ಧ ಹೋರಾಡಲು, ಆರೋಗ್ಯ ಮತ್ತು ಆರೋಗ್ಯಕರ ಜೀವನ ಮತ್ತು ಭವಿಷ್ಯದ ಪೀಳಿಗೆಗಳನ್ನು ರಕ್ಷಿಸಲು WHO ಏನು ಮಾಡುತ್ತಿದೆ ಮತ್ತು ವಿಶ್ವದಾದ್ಯಂತ ಜನರು ತಮ್ಮ ಹಕ್ಕನ್ನು ಪಡೆಯಲು ಏನು ಮಾಡಬಹುದು ಎಂದೆಲ್ಲ ಜಾಗೃತಿ ಮೂಡಿಸುವ ದಿನ ಇದಾಗಿದೆ.
ಥೀಮ್-2021
ವಿಶ್ವ ತಂಬಾಕು ರಹಿತ ದಿನ 2021 ರ ವಿಷಯವೆಂದರೆ "ಕಮಿಟ್ ಟು ಕ್ವಿಟ್"(ತ್ಯಜಿಸಲು ಬದ್ಧನಾಗು). ಈ ವಿಷಯದ ಅಡಿಯಲ್ಲಿ, ದೃಢವಾದ ತಂಬಾಕು ನಿಲುಗಡೆ ನೀತಿಗಳನ್ನು ಬೆಂಬಲಿಸುವ ಮೂಲಕ, ತಂಬಾಕು ಉದ್ಯಮದ ತಂತ್ರಗಳ ಬಗ್ಗೆ ಜಾಗೃತಿ ಮೂಡಿಸುವ ಮೂಲಕ ಮತ್ತು ತಂಬಾಕು ತ್ಯಜಿಸಲು ಬಯಸುವ ಜನರಿಗೆ ಕ್ವಿಟ್ ಮತ್ತು ವಿನ್ ಉಪಕ್ರಮಗಳ ಮೂಲಕ ಬೆಂಬಲಿಸುವ ಮೂಲಕ ತಂಬಾಕು ನಿಲುಗಡೆಗೆ ಉತ್ತೇಜನ ನೀಡುವ ಉದ್ದೇಶವನ್ನು WHO ಹೊಂದಿದೆ.
ಕೋವಿಡ್ -19 ರ ನಡುವೆ ಇದರ ಮಹತ್ವ
- WHO ಮಹಾನಿರ್ದೇಶಕ ಡಾ. ಟೆಡ್ರೊಸ್ ಅಧಾನೊಮ್ ಘೆಬ್ರೆಯೆಸಸ್, “ಧೂಮಪಾನಿಗಳು ಕೋವಿಡ್ -19 ನಿಂದ ತೀವ್ರವಾದ ಕಾಯಿಲೆ ಮತ್ತು ಇತರ ಜನರಿಗೆ ಹೋಲಿಸಿದರೆ 50% ರಷ್ಟು ಹೆಚ್ಚಿನ ಸಾವಿನ ಅಪಾಯವನ್ನು ಹೊಂದಿದ್ದಾರೆ, ಆದ್ದರಿಂದ ಧೂಮಪಾನಿಗಳು ಕರೋನವೈರಸ್ ಅಪಾಯವನ್ನು ಕಡಿಮೆ ಮಾಡಲು ತ್ಯಜಿಸಬೇಕಾಗಿದೆ. ಕೇವಲ ಇದೊಂದು ಕಾರಣಕ್ಕೆ ತ್ಯಜಿಸಿದರೆ ಸಾಕು, ಜೊತೆಗೆ ಕ್ಯಾನ್ಸರ್, ಹೃದ್ರೋಗ ಮತ್ತು ಉಸಿರಾಟದ ಕಾಯಿಲೆಗಳು ಬೆಳೆಯುವ ಅಪಾಯ ಕೂಡ ಕಡಿಮೆಯಾಗುತ್ತದೆ.” ಎಂದು ಹೇಳಿದ್ದಾರೆ.
- "WHO ಅಭಿಯಾನಕ್ಕೆ ಸೇರ್ಪಡೆಗೊಳ್ಳುವ ಮೂಲಕ ಮತ್ತು ತಂಬಾಕು ಮುಕ್ತ ವಾತಾವರಣವನ್ನು ಸೃಷ್ಟಿಸುವ ಮೂಲಕ ಎಲ್ಲಾ ದೇಶಗಳು ತಮ್ಮ ಪಾತ್ರವನ್ನು ವಹಿಸಬೇಕೆಂದು ನಾವು ಒತ್ತಾಯಿಸುತ್ತೇವೆ, WHO ತಂಬಾಕು ತೊರೆಯಲು ಜನರಿಗೆ ಅಗತ್ಯವಿರುವ ಮಾಹಿತಿ, ಬೆಂಬಲ ಮತ್ತು ಸಾಧನಗಳನ್ನು ನೀಡುತ್ತದೆ." ಎಂದೂ ಹೇಳಿದ್ದಾರೆ.
- ಏಷ್ಯನ್ ಹಾರ್ಟ್ ಇನ್ಸ್ಟಿಟ್ಯೂಟ್ನ ಹಿರಿಯ ಇಂಟರ್ವೆನ್ಷನಲ್ ಕಾರ್ಡಿಯಾಲಜಿಸ್ಟ್ ಡಾ. ತಿಲಕ್ ಸುವರ್ಣ ಅವರ ಪ್ರಕಾರ
“ಕೋವಿಡ್ ಪ್ರಧಾನವಾಗಿ ಶ್ವಾಸಕೋಶದ ಮೇಲೆ ಪರಿಣಾಮ ಬೀರುತ್ತದೆ ಮತ್ತು ಧೂಮಪಾನವು ಶ್ವಾಸಕೋಶವನ್ನು ಹಾನಿಗೊಳಿಸುತ್ತದೆ. ಧೂಮಪಾನಿಗಳಲ್ಲದವರಿಗೆ ಹೋಲಿಸಿದರೆ ಧೂಮಪಾನಿಗಳಲ್ಲಿ ಕೋವಿಡ್ ಇಂದ ತೀವ್ರವಾದ ಶ್ವಾಸಕೋಶದ ತೊಂದರೆಗಳು ಕಂಡುಬರುತ್ತವೆ ಎಂದು ವಿಶ್ವವ್ಯಾಪಿ ಸಂಶೋಧನೆಗಳು ಸೂಚಿಸುತ್ತಿವೆ. ವಿಶ್ವ ಆರೋಗ್ಯ ಸಂಸ್ಥೆ ಈ ವರ್ಷದ ಆರಂಭದಲ್ಲಿ ವೈಜ್ಞಾನಿಕ ಸಂಕ್ಷಿಪ್ತತೆಯನ್ನು ಬಿಡುಗಡೆ ಮಾಡಿತು, ಧೂಮಪಾನಿಗಳು ಕೋವಿಡ್ -19 ನಿಂದ ತೀವ್ರ ಕಾಯಿಲೆ ಮತ್ತು ಸಾವಿನ ಅಪಾಯವನ್ನು ಎದುರಿಸುತ್ತಾರೆ ಎಂದು ಹೇಳಿತ್ತು ಮತ್ತು ಸಾಬೀತುಪಡಿಸಿತ್ತು. ಈ ಸಂಶೋಧನೆಗಳಿಂದ ಧೂಮಪಾನಿಗಳು ಸಾಂಪ್ರದಾಯಿಕವಾಗಿ ಸೋಂಕುಗಳಿಗೆ ಹೆಚ್ಚು ಒಳಗಾಗುತ್ತಾರೆ ಎಂದು ತಿಳಿದುಬಂದಿದೆ, ವಿಶೇಷವಾಗಿ ಜ್ವರ, ನ್ಯುಮೋನಿಯಾ ಮತ್ತು ಕ್ಷಯರೋಗದಂತಹ ಉಸಿರಾಟದ ಸೋಂಕುಗಳು ಹೆಚ್ಚಾಗಿ ಕಾಣಿಸುತ್ತವೆ.” ಎಂದು ಹೇಳಿದ್ದಾರೆ.
- ಧೂಮಪಾನಿಗಳು ಹೃದ್ರೋಗ, ಪಾರ್ಶ್ವವಾಯು, ಕ್ಯಾನ್ಸರ್, ದೀರ್ಘಕಾಲದ ಶ್ವಾಸಕೋಶದ ಕಾಯಿಲೆ ಮತ್ತು ಮಧುಮೇಹದಿಂದ ಬಳಲುತ್ತಿರುವ ಸಾಧ್ಯತೆ ಇರುವುದರಿಂದ, ಇವೆಲ್ಲವೂ ತೀವ್ರವಾದ ಅನಾರೋಗ್ಯವನ್ನು ಅಭಿವೃದ್ಧಿಪಡಿಸುವ ಪ್ರಮುಖ ಕಾರಣಗಳಾಗುತ್ತವೆ ಮತ್ತು ಕೋವಿಡ್ ಪೀಡಿತ ರೋಗಿಗಳಲ್ಲಿನ ವೈದ್ಯಕೀಯ ಫಲಿತಾಂಶದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತವೆ ಎಂಬುದನ್ನು ಗಮನಿಸುವುದು ಅತ್ಯವಶ್ಯಕ.
- “ತಂಬಾಕು ಹೊಗೆಯಲ್ಲಿ ವಿಷಕಾರಿ ರಾಸಾಯನಿಕಗಳಿವೆ, ಇದು ವಾಯುಮಾರ್ಗಗಳು ಮತ್ತು ಶ್ವಾಸಕೋಶದ ಅಂಗಾಂಗಗಳಿಗೆ ಹಾನಿಯನ್ನುಂಟು ಮಾಡುತ್ತದೆ. ತಂಬಾಕು ಹೊಗೆಯಲ್ಲಿನ ರಾಸಾಯನಿಕಗಳು ವಿವಿಧ ರೀತಿಯ ರೋಗನಿರೋಧಕ ಕೋಶಗಳ ಚಟುವಟಿಕೆಯನ್ನು ನಿಗ್ರಹಿಸುತ್ತವೆ ಮತ್ತು ಇದು ರೋಗನಿರೋಧಕ ಶಕ್ತಿಯನ್ನು ದುರ್ಬಲಗೊಳಿಸಲು ಕಾರಣವಾಗುತ್ತದೆ ಮತ್ತು ಇದರಿಂದಾಗಿ ಕೋವಿಡ್ ಸೋಂಕಿನ ವಿರುದ್ಧ ಹೋರಾಡುವ ಒಬ್ಬರ ಸಾಮರ್ಥ್ಯವನ್ನು ದುರ್ಬಲಗೊಳಿಸುತ್ತದೆ.
- ಧೂಮಪಾನದ ಕ್ರಿಯೆಯಲ್ಲಿ ಬೆರಳುಗಳು ಮತ್ತು ಕಲುಷಿತ ಸಿಗರೇಟುಗಳು ತುಟಿಗಳೊಂದಿಗೆ ಸಂಪರ್ಕಕ್ಕೆ ಬರುತ್ತವೆ ಮತ್ತು ಇದರಿಂದಾಗಿ ಕೈಯಿಂದ ಬಾಯಿಗೆ ವೈರಸ್ ಹರಡುವ ಅಪಾಯವನ್ನು ಹೆಚ್ಚಿಸುತ್ತದೆ. ಇದಲ್ಲದೆ, ತಂಬಾಕು ಉತ್ಪನ್ನಗಳನ್ನು ಚೂಯಿಂಗ್ ಮಾಡುವುದು ಸಾಮಾನ್ಯವಾಗಿ ಸಾರ್ವಜನಿಕ ಸ್ಥಳಗಳಲ್ಲಿ ಉಗುಳುವುದರೊಂದಿಗೆ ಸಂಬಂಧಿಸಿದೆ, ಇದು ಲಾಲಾರಸದ ಹನಿಗಳ ಮೂಲಕ ಕೋವಿಡ್ ಹರಡುವ ಅಪಾಯವನ್ನು ಹೆಚ್ಚಿಸುತ್ತದೆ.”
ನೋಡಿದಿರಲ್ಲ ಓದುಗರೇ,
ಕೇವಲ ಒಂದು ದಿನದ ಈ ಆಚರಣೆ ಹಿಂದೆ ಎಷ್ಟೆಲ್ಲ ಹಿತಕರ ಚಿಂತನೆಗಳಿವೆ ಅಲ್ಲವೇ.... ಅದಕ್ಕಾಗಿಯೇ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ವಿಶೇಷ ದಿನಗಳ ಬಗ್ಗೆ ಪ್ರಶ್ನೆಗಳನ್ನು ಕೇಳಲಾಗುತ್ತದೆ. ಪೊಲೀಸ್ (PSI), ಐ.ಎ.ಎಸ್., ಐ.ಪಿ.ಎಸ್., ಕೆ.ಎ.ಎಸ್. ಹೀಗೆ ಹಲವಾರು ಪರೀಕ್ಷೆಗಳಲ್ಲಿ ಈ ರೀತಿಯ ವಿಚಾರಗಳ ಬಗ್ಗೆ ಪ್ರಬಂಧ ಬರೆಯಲು ಕೊಡುತ್ತಾರೆ. ಈ ರೀತಿಯ ವಿಚಾರಗಳನ್ನು ನಾವು ತಿಳಿದುಕೊಳ್ಳುವುದು ಬಹಳ ಮುಖ್ಯವಾಗುತ್ತದೆ.
No comments:
Post a Comment