Jul 6, 2022

The Great Personalities - Albert Einstein PART-1|ಮಹಾನ್ ವ್ಯಕ್ತಿಗಳು - ಅಲ್ಬರ್ಟ್ ಐನ್ ಸ್ಟೀನ್ ಭಾಗ-1|

Posted by ANIL KNOWN on Jul 6, 2022

 


ಪ್ರಪಂಚ ಕಂಡ ಅತ್ಯಧ್ಬುತ ವ್ಯಕ್ತಿಗಳಲ್ಲಿ ಐನ್ಸ್ಟೀನ್ ಕೂಡ ಒಬ್ಬರು. ಇವರ ಜೀವನಗಾತೆ ಅಮೋಘ ರೀತಿಯಲ್ಲಿ ಎಲ್ಲರನ್ನು ಸ್ಪೂರ್ತಿಯ ಚಿಲುಮೆಯಲ್ಲಿ ತೇಲುವಂತೆ ಮಾಡುತ್ತದೆ. ಇವರ ಬಗೆಗಿನ ಈ ಲೇಖನವನ್ನು ಕೇವಲ ಒಂದು ಭಾಗದಲ್ಲಿ ವಿವರಿಸಲಸಾಧ್ಯ. ಬನ್ನಿ ಇವರ ಬಗ್ಗೆ ತಿಳಿದುಕೊಳ್ಳೋಣ.

ಆಲ್ಬರ್ಟ್ ಐನ್ ಸ್ಟೀನ್ ಹುಟ್ಟಿದ್ದು 1876ರ ಮಾರ್ಚ್ 14ರಂದು ಜರ್ಮನಿ ದೇಶದ “ಉಲ್ಮ್” ಎಂಬ ನಗರದಲ್ಲಿ. ಅವರ ತಂದೆ ಹರ್ಮಾನ್, ತಾಯಿ ಪೌಲಿನ್. ಇವರದ್ದು ಯಹೂದಿ ಕುಟುಂಬವಾದರೂ ಕ್ಯಾಥೋಲಿಕರ ಮಧ್ಯೆ ಬೆಳೆದದ್ದರಿಂದ ಪರಮತದವರ ಬಗೆಗೆ ಪ್ರೀತಿ, ಆದರಗಳನ್ನು ಬೆಳೆಸಿಕೊಂಡಿದ್ದರು. ಐಸ್ಟೀನ್‌ಗೆ ಪುಟ್ಟ ತಂಗಿಯೂ ಒಬ್ಬಳಿದ್ದಳು. ಆಕೆಯ ಹೆಸರು ಮಾಜಾ. ಐನ್‌ಸ್ಟೀನ್‌ ಹುಟ್ಟಿದ ಒಂದು ವರ್ಷದಲ್ಲಿಯೇ ತಂದೆ, ತಾಯಿಯರು ಉಲ್ಮ್ ನಗರವನ್ನು ಬಿಟ್ಟು ವ್ಯಾಪಾರಕ್ಕಾಗಿ ಮ್ಯೂನಿಚ್ ನಗರಕ್ಕೆ ವಲಸೆ ಹೋಗಿ ನೆಲೆಸಬೇಕಾಯಿತು. ಅಲ್ಲಿಯೇ ಆಲ್ಬರ್ಟ್ 10 ವರ್ಷ ತುಂಬುವುದರೊಳಗೆ ಪ್ರಾಥಮಿಕ ವಿದ್ಯಾಭ್ಯಾಸವನ್ನು ಮುಗಿಸಿದರು.

ಪ್ರಾಥಮಿಕ ಶಾಲೆಯಲ್ಲಿ ಆಲ್ಬರ್ಟ್ ಐನ್‌ಸ್ಟೀನ್ ಒಬ್ಬ ಸಾಧಾರಣ ವಿದ್ಯಾರ್ಥಿಯಾಗಿದ್ದರು. ಸಾಧಾರಣ ಎನ್ನುವುದಕ್ಕಿಂತ ಅವರು ತೀರಾ ದಡ್ಡರೆಂದೇ ಅವರ ಶಿಕ್ಷಕರು ತೀರ್ಮಾನಿಸಿದ್ದರು. ಕಲಿಕೆಯಲ್ಲಿ ಆಲ್ಬರ್ಟ್ ಎಲ್ಲ ಹುಡುಗರಿಗಿಂತ ಹಿಂದುಳಿದಿದ್ದರು. ಯಾರೊಂದಿಗೂ ಮಾತನಾಡದೆ ಮೌನವಾಗಿರುವುದೇ ಅವರ ಗುಣವಾಗಿತ್ತು. ಶಿಕ್ಷಕರು ಕೇಳಿದ ಪ್ರಶ್ನೆಗಳಿಗೆ ತುಂಬಾ ತಡವಾಗಿ ತಡವರಿಸುತ್ತಾ ಉತ್ತರ ಕೊಡುತ್ತಿದ್ದರು. ಇವರೆಂದರೆ ಶಿಕ್ಷಕರಿಗೆ ಕಿರಿಕಿರಿ ಉಂಟಾಗುತ್ತಿತ್ತು.

ಆದರೆ ಐನ್ ಸ್ಟೀನ್ ಅವರು ಎಂದೂ ಉದ್ದೇಶಪೂರ್ವಕವಾಗಿ ಗುರುಗಳಲ್ಲಿ ಅವಿಧೇಯರಾಗಿ ನಡೆದುಕೊಳ್ಳುತ್ತಿರಲಿಲ್ಲ. ಅವರದು ಏಕಾಂಗಿ ಸ್ವಭಾವ ತನಗೆ ತಿಳಿದದ್ದನ್ನು ಮಾತ್ರ ಹೇಳುವವರು, ಚುರುಕುತನವಿಲ್ಲದ ಮಂದಮತಿ, ಹೀಗಾಗಿಯೇ ಉಳಿದ ವಿದ್ಯಾರ್ಥಿಗಳಿಗೆ ಇವರು ಗೇಲಿಯ ಮಸ್ತುವಾಗಿಬಿಟ್ಟಿದ್ದರು ಪಾಠದಲ್ಲಷ್ಟೇ ಅಲ್ಲ, ಆಟದಲ್ಲೂ ಅವರಿಗೆ ಆಸಕ್ತಿ ಇರಲಿಲ್ಲ. ಎಲ್ಲ ಮಕ್ಕಳೂ ಬಯಲಲ್ಲಿ ಆಡುತ್ತಿದ್ದರೆ ಇವರೊಬ್ಬರೇ ದೂರದಲ್ಲಿ ಕುಳಿತಿರುತ್ತಿದ್ದರು. ಪೊಲೀಸರು, ಸೈನಿಕರ ಕವಾಯತುಗಳು ಬಂದರಂತೂ ಕಿರುಚಿಕೊಂಡು ಮನೆಯ ಕಡೆ ಓಡುತ್ತಿದ್ದರು.

ಆಲ್ಬರ್ಟ್ ಐನ್‌ಸ್ಟೀನ್‌ ಅವರಿಗೆ ಮನೆಯೆಂದರೆ ತುಂಬಾ ಇಷ್ಟ. ಅಮ್ಮನ ಮಮತೆ, ಅಪ್ಪನ ಪ್ರೀತಿ, ಅವರಿಗೆ ಆನಂದ ತರುತ್ತಿದ್ದವು. ತಮ್ಮ ಪ್ರೀತಿಯ ಪುಟ್ಟ ತಂಗಿ ಮಾಜಾಳ ಕೈ ಹಿಡಿದು ಮನೆಯ ಸುತ್ತಲಿನ ಉದ್ಯಾನದಲ್ಲಿ ಓಡಾಡುವುದೆಂದರೆ ಅವರಿಗೆ ಖುಷಿಯೋ ಖುಷಿ. ಮನೆಯ ಸುತ್ತಲಿನ ಪ್ರಕೃತಿಯಲ್ಲಿ ಗಿಡ ಮರಗಳು, ಪ್ರಾಣಿ ಪಕ್ಷಿಗಳು, ಸೂರ್ಯೋದಯ, ಸೂರ್ಯಾಸ್ತ, ನಕ್ಷತ್ರಗಳಿಂದ ತುಂಬಿದ ಆಕಾಶ ಎಲ್ಲವೂ ಅವರಿಗೆ ಆಸಕ್ತಿಯ ವಿಷಯಗಳಾಗಿದ್ದವು.

ಒಬ್ಬಂಟಿಗನಾಗಿ ನದಿಯ ದಡದಲ್ಲಿ ಹೊಲಗದ್ದೆಗಳ ಬದುಗಳ ಮೇಲೆ ತಿರುಗಾಡುವು ದಂದರೆ ಐನ್ ಸ್ಟೀನ್‌ ಅವರಿಗೆ ಬಹಳ ಇಷ್ಟ. ಹೀಗೆ ತಿರುಗಾಡುವಾಗ ಕಾಲುಹಾದಿಯಲ್ಲಿ ದೊಡ್ಡ ಒಣಗಿದ ಎಲೆಗಳು, ಉದುರಿದ ಹೂಗಳು, ಕಾಯಿ, ಹಣ್ಣು, ಬೀಜಗಳನ್ನು ನೋಡುತ್ತಾ ಮೈ ಮರೆತುಬಿಡುತ್ತಿದ್ದರು. ಹಣ್ಣೆಲೆಯೊಂದರಲ್ಲಿ ಕಂಡುಬರುವ ನರನಾಳಗಳನ್ನು ನೋಡಿ ಅಚ್ಚರಿಗೊಳ್ಳುತ್ತಿದ್ದರು. ಬಾಲಕ ಐನ್‌ಸ್ಟೀನ್‌ ಅವರಿಗೆ ಪ್ರಕೃತಿಯೇ ಪಾಠಶಾಲೆ ಎಂಬಂತಿತ್ತು.

ಒಮ್ಮೆ ಆಲ್ಬರ್ಟ್ ರು ಅನಾರೋಗ್ಯದಿಂದ ಹಾಸಿಗೆ ಹಿಡಿದು ಮಲಗಿದ್ದರು, ಪ್ರೀತಿಯ ಮಗನಾದ ಆಲ್ಬರ್ಟ್‌ರಿಗೆ ತುಸು ನೋವಾದರೂ ತಂದೆತಾಯಿಯರು ಗಾಬರಿ ಗೊಳ್ಳುತ್ತಿದ್ದರು. ಬಳಲಿದ ಮಗನನ್ನು ಖುಷಿಪಡಿಸಲು ತಂದೆ ಹರ್ಮಾನ್ ಒಂದು ಆಟಿಕೆಯೊಂದನ್ನು ತಂದಿದ್ದರು. ಅದೊಂದು ದಿಕ್ಸೂಚಿಯಾಗಿತ್ತು. ಪುಟ್ಟ ಆಲ್ಬರ್ಟರಿಗೆ ಅದನ್ನು ನೀಡಿದ ತಂದೆ, ಅದರೊಳಗಿನ ಸೂಜಿಯು ಹೇಗೆ ಹಿಡಿದರೂ ಉತ್ತರ ದಕ್ಷಿಣ ದಿಕ್ಕಿಗೆ ನಿಲ್ಲುತ್ತಿದ್ದುದನ್ನು ತೋರಿಸಿದರು. ಆಲ್ಬರ್ಟರಿಗೆ ಎಲ್ಲಿಲ್ಲದ ಅಚ್ಚರಿ, ಹಲವು ದಿನಗಳ ಕಾಲ ಈ ಆಟಿಕೆಯೊಂದಿಗೆ ಆಡುತ್ತಲೇ ಕಳೆದರು. ದಿಕ್ಸೂಚಿಯ ಸೂಜಿ ಒಂದೇ ದಿಕ್ಕಿಗೆ ಹೀಗೆ ನಿಲ್ಲುತ್ತಿದ್ದುದು ಆಲ್ಬರ್ಟರನ್ನು ಆನ್ವೇಷಣೆಯ ಜಗತ್ತೊಂದಕ್ಕೆ ಸೆಳೆದುಬಿಟ್ಟಿತು. ತಂದೆಯನ್ನು ವಿಧವಿಧವಾಗಿ ಪ್ರಶ್ನಿಸಿದರು. ಭೂಮಿಯ ಕಾಂತ ಶಕ್ತಿಯಿಂದಾಗಿ ಹೀಗೆ ಸೂಜಿ ಉತ್ತರ ದಕ್ಷಿಣಾಭಿಮುಖವಾಗಿ ನಿಲ್ಲುತ್ತದೆಂಬುದನ್ನು ತಂದೆ ವಿವರಿಸಿದರು. ಬಾಲಕ ಆಲ್ಬರ್ಟ್ ಐನ್‌ಸ್ಟೀನ್‌ರಿಗೆ ಇದ್ಯಾವುದೂ ಅರ್ಥವಾಗಲಿಲ್ಲ. ಆದರೆ, ಇದೊಂದು ನಿಗೂಢ ಅಗೋಚರ ಪ್ರಕೃತಿಯ ಶಕ್ತಿಯೆಂಬುದು ಮಾತ್ರ ಐನ್‌ಸ್ಟೀನ್ ರ ಅರಿವಿಗೆ ಬಂದಿತ್ತು. ಭೂಮಿಯೇ ಒಂದು ಅಯಸ್ಕಾಂತದಂತೆ ಎಂಬ ವಿಷಯವಂತೂ ಐನ್‌ಸ್ಟೀನ್‌ರನ್ನು ಕುತೂಹಲಕರ ಚಿಂತನೆಗೆ ದೂಡಿತ್ತು.

 


ತಂದೆ ತಂದುಕೊಟ್ಟ ಪುಟ್ಟ ದಿಕ್ಸೂಚಿ ಆಲ್ಬರ್ಟ್ ಐನ್ ಸ್ಟೀನ್ ರ ಚಿಂತನಾ ಲಹರಿಯನ್ನು ಕೆದಕಿತ್ತು. ಪ್ರಕೃತಿಯೇ ಒಂದು ಅಗಾಧ ಶಕ್ತಿಯ ನಿಗೂಢ ವಿಸ್ಮಯಗಳ ತಾಣ ಎಂಬ ತೀರ್ಮಾನಕ್ಕೆ ಬರುವಂತೆ ಮಾಡಿತ್ತು. ಹಲವಾರು ದಿನಗಳು, ಹಗಲು ರಾತ್ರಿಗಳನ್ನದೆ ದಿಕ್ಕೂಚಿಯೊಂದಿಗೆ ಆಡುತ್ತಲೇ ಐನ್‌ಸ್ಟೀನ್ ಕಾಲ ಕಳೆದರು. 1894ರಲ್ಲಿ ಐನ್‌ಸ್ಟೀನ್ ಕುಟುಂಬದ ವ್ಯಾಪಾರ ತೀರಾ ಇಳಿಮುಖವಾಗ ತೊಡಗಿತ್ತು. ಐನ್‌ಸ್ಟೀನ್ ತಂದೆ ತನ್ನ ವ್ಯಾಪಾರ ಹೆಚ್ಚಿಸಿಕೊಳ್ಳುವ ಆಕಾಂಕ್ಷೆಯಿಂದ ಇಟಲಿಯ ಆಲ್ಫೆರಾಜಿಗೆ ಕುಟುಂಬ ಸಮೇತ ಹೊರಟರು, ವಿದ್ಯಾಭ್ಯಾಸ ಹಾಳಾಗಬಾರದೆಂಬ ಕಾರಣಕ್ಕಾಗಿ ಐನ್‌ಸ್ಟೀನ್‌ರನ್ನು ಮ್ಯೂನಿಚ್‌ನಲ್ಲೇ ಉಳಿಸಿದರು. ತೇಜಸ್ಸು ತುಂಬಿದ ಆಲ್ಬರ್ಟ್ ಐನ್ ಸ್ಟೀನ್ ತಂದೆ,ತಾಯಿ ಮತ್ತು ಪ್ರೀತಿಯ ತಂಗಿ ಮಾಜಾ ಇಲ್ಲದೆ ಏಕಾಂಗಿಯಾಗಿ ಪರಿತಪಿಸಿದರು. ಅವರ ಶಾಲೆ ಮಾತ್ರ ಅವರಿಗೆ ಬೇಸರ ತಾಣವಾಗಿ ಪರಿಣಮಿಸುತ್ತಲೇ ಹೋಯಿತು. ಶಾಲೆಯಲ್ಲಿ ಕಲಿಯಲೇಬೇಕಾಗಿದ್ದ ಲ್ಯಾಟಿನ್, ಗ್ರೀಕ್ ಭಾಷೆಗಳು ಅವರಿಗೆ ಕಬ್ಬಿಣದ ಕಡಲೆಯಾದವು. ವ್ಯಾಕರಣ ಭೂತವಾಗಿ ಕಾಡತೊಡಗಿತ್ತು. ಶಾಲಾ ಕಲಿಕೆಯ ನಿರುತ್ಸಾಹಕ್ಕೆ ಐನ್‌ಸ್ಟೀನ್‌ಗೆ ಅವರದೇ ಆದ ಕಾರಣಗಳಿದ್ದವು. ಮುದ್ರಿತ ಮಗ್ಗಿ ಪುಸ್ತಕಗಳಿರುವಾಗ ದೊಡ್ಡ ಮಗ್ಗಿಗಳನ್ನೇಕೆ ಕಂಠಪಾಠ ಮಾಡಿ ಮನಸ್ಸಿನಲ್ಲಿಟ್ಟುಕೊಳ್ಳಬೇಕು? ಬೇಕಾದಾಗ ನೋಡಿಕೊಂಡು ಲೆಕ್ಕ ಮಾಡಬಹುದಲ್ಲವೇ ಎಂಬ ಯೋಚನೆ ಅವರದು. ಶಾಲೆಯಲ್ಲಿ ಪ್ರಶ್ನೆಗಳ ಸುರಿಮಳೆ ಸುರಿಸುತ್ತಿದ್ದ ಐನ್ ಸ್ಟೀನ್ ರನ್ನು ಶಿಕ್ಷಕರು ತಲೆಹರಟೆ, ಎಷ್ಟು ಹೇಳಿದರೂ ಕಲಿಯದ ಮುಠ್ಠಾಳ ಎಂದು ತೀರ್ಮಾನಿಸಿದ್ದರು.

ಐನ್‌ ಸ್ಟೀನ್‌ರನ್ನು ಕಾಡುತ್ತಿದ್ದ ಮತ್ತೊಂದು ಸಮಸ್ಯೆಯೆಂದರೆ, ಜರ್ಮನಿಯಲ್ಲಿ 17 ವರ್ಷ ತುಂಬಿದವರೆಲ್ಲ ಸೈನ್ಯಕ್ಕೆ ಸೇರಿ ಕೆಲಕಾಲ ಸೇವೆ ಸಲ್ಲಿಸಬೇಕಾದ್ದು ಕಡ್ಡಾಯವಾಗಿದ್ದುದು. ಐನ್‌ಸ್ಟೀನ್‌ ಅವರಿಗೆ ಹಿಂಸೆ ಎಂದರೆ ಆಗುತ್ತಿರಲಿಲ್ಲ, ಮತ್ತೊಬ್ಬ ಮನುಷ್ಯನನ್ನು ಕೊಲ್ಲುವುದು, ಸ್ವಾತಂತ್ರ್ಯ ಕಳೆದುಕೊಂಡು ಮತ್ತೋರ್ವರ ಆಜ್ಞೆ ಪಾಲಿಸುವುದರ ಬಗೆಗೆ ಐನ್‌ಸ್ಟೀನ್ ರು ವಿರೋಧಿಯಾಗಿದ್ದರು ಸೈನ್ಯಕ್ಕೆ ಸೇರುವುದು ಸುತಾರಾಂ ಅವರಿಗೆ ಇಷ್ಟವಿರಲಿಲ್ಲ. ಜೊತೆಗೆ ಶಿಕ್ಷಕರಿಂದ ಆಗುತ್ತಿದ್ದ ಅವಮಾನ, ಬೈಗುಳಗಳನ್ನು ನುಂಗಿಕೊಳ್ಳಲಾಗದೇ ಐನ್ ಸ್ಟೀನ್‌ ತಮ್ಮ ಪ್ರೌಢಶಾಲೆಯ ವಿದ್ಯಾಭ್ಯಾಸವನ್ನೇ ಬಿಟ್ಟುಬಿಟ್ಟರು ಆ ವೇಳೆಗೆ ಇಟಲಿಯ ದೂರದ ಊರಿನಲ್ಲಿದ್ದ ತಂದೆ ತಾಯಿಯರ ಬಳಿಗೆ ಓಡಿಹೋದರು. ಆಗ ಆಲ್ಬರ್ಟ್ ಐನ್ ಸ್ಟೀನ್‌ಗೆ 15 ವರ್ಷ ವಯಸ್ಸು, ಮುಖದಲ್ಲಿ ಶಾಲೆಯ ಸಹವಾಸವೇ ಬೇಡವೆಂಬ ಭಾವವಿತ್ತು. ಆಲ್ಬರ್ಟ್ ರು ಶಾಲೆಯ ಹಿಂಸಾಮಯ ವಾತಾವರಣದಿಂದಾಗಿ ಮಾನಸಿಕ ವಾಗಲ್ಲದೇ ದೈಹಿಕವಾಗಿಯೂ ಬಳಲಿಹೋಗಿದ್ದರು, ಶಾಲೆಯಿಂದ ವಾಪಸ್ಸು ಬಂದ ಮಗನನ್ನು ತಾಯಿಯೇ ತಕ್ಷಣ ಗುರುತು ಹಿಡಿಯದ ಮಟ್ಟಿಗೆ ಅವರು ಬದಲಾಗಿಬಿಟ್ಟಿದ್ದರು. ಮಗನ ಸ್ವಭಾವ, ಸಂಕಟ ಅರ್ಥಮಾಡಿಕೊಂಡ ಐನ್‌ ಸ್ಟೀನ್‌ನ ತಾಯಿ ಕೆಲತಿಂಗಳು ಅವರ ಪಾಡಿಗೆ ಅವರನ್ನು ಬಿಟ್ಟು ಪ್ರೀತಿಯಿಂದ ನೋಡಿಕೊಂಡರು. ತಾಯಿಯ ಮಮತೆ ಐನ್ ಸ್ಟೀನ್ ರಲ್ಲಿ ಬದುಕಿನ ಬಗೆಗೆ ಹೊಸ ಆಸೆಗಳನ್ನು ಹುಟ್ಟಿಸಿತು. ಆ ಸಮಯದಲ್ಲಿ ಕಾಲ ಕಳೆಯಲು ತಮಗಿಷ್ಟವಾದ ಗಣಿತದ, ಭೌತಶಾಸ್ತ್ರದ ಪುಟ್ಟ ಪುಸ್ತಕಗಳನ್ನು ಓದಿ ಕಾಲ ಕಳೆಯತೊಡಗಿದರು. ಒಬ್ಬರೇ ಹೊಲಗಳ ಮಧ್ಯೆ, ನದಿಯ ದಡದಲ್ಲಿ ನಡೆದಾಡಿದರು, ಪ್ರಕೃತಿ ಸೌಂದರ್ಯ ಆಸ್ವಾದಿಸುತ್ತಾ ಖುಷಿಗೊಂಡರು. ಶಾಲೆ ಬಿಟ್ಟು ಬಂದ ಮಗನನ್ನು ದಿನವೂ ನೋಡಿ ತಂದೆ ಹರ್ಮಾನ್‌ಗೆ ಒಳಗೇ ಬೇಸರವಾಗಿತ್ತು. ಐನ್‌ ಸ್ಟೀನ್ ಬೆಳೆದು ದೊಡ್ಡವನಾಗಿ ತನ್ನ ಬದುಕನ್ನು ರೂಪಿಸಿಕೊಳ್ಳಬೇಕು, ನಮ್ಮ ಕುಟುಂಬಕ್ಕೂ ನೆರವಾಗಬೇಕು ಎಂಬುದು ಅವರ ಅಭಿಪ್ರಾಯವಾಗಿತ್ತು. ಐನ್ ಸ್ಟೀನ್ ಗಾದರೋ ಶಾಲೆಯ ಸಹವಾಸವೇ ಬೇಡವಾಗಿತ್ತು. ತಂದೆಗೆ ಐನ್‌ಸ್ಟೀನ್‌ನದೇ ಚಿಂತೆಯಾಗಿ ಹೋಯಿತು. ಐನ್‌ಸ್ಟೀನ್‌ನ ತಾಯಿ ಸಮಯ ನೋಡಿ, ಕುಟುಂಬಕ್ಕಾಗಿ ಓದು ಮುಗಿಸಿ ದುಡಿಯಬೇಕಾದ ಅನಿವಾರ್ಯತೆಯನ್ನು ಐನ್‌ಸ್ಟೀನ್‌ಗೆ ವಿವರಿಸಿ ತಿಳಿ ಹೇಳಿದರು.

ಐನ್‌ಸ್ಟೀನ್ ಮನೆಯಲ್ಲೇ ಅಭ್ಯಾಸ ಮಾಡಿ ಸ್ವಿಟ್ಟರ್ ಲೆಂಡಿನ ಜ್ಯೂರಿಕ್ ನ ಫೆಡರಲ್ ತಾಂತ್ರಿಕ ಸಂಸ್ಥೆಯ ಪ್ರವೇಶಕ್ಕೆ ತಯಾರಾಗುವೆ ಎಂದು ತಾಯಿಗೆ ಮಾತುಕೊಟ್ಟರು. ಜೊತೆಗೆ ಜರ್ಮನಿಯ ರಾಷ್ಟ್ರೀಯತೆಯನ್ನು ತೊರೆದು ಸ್ವಿಸ್ ನಾಗರೀಕನಾಗಬೇಕೆಂಬ ಬಯಕೆಯನ್ನೂ ಹೇಳಿಕೊಂಡರು. ಚಿಕ್ಕಪ್ಪನ ಸಹಾಯದಿಂದ ಜ್ಯೂರಿಕ್ ವಿಶ್ವವಿದ್ಯಾನಿಲಯದ ಪದವಿ ವ್ಯಾಸಂಗಕ್ಕೆ ಐನ್‌ ಸ್ಟೀನ್‌ ರನ್ನು ತಾಯಿ ಕಳುಹಿಸಿಕೊಟ್ಟರು. ಆಗ ಐನ್‌ಸ್ಟೀನ್‌ ರಿಗೆ 17 ವರ್ಷಗಳಾಗಿತ್ತು. ಐನ್ ಸ್ಟೀನ್ 1895ರಲ್ಲಿ ಜರ್ಮನ್ ಪೌರತ್ವ ತ್ಯಜಿಸಿದರು. 1901ರಲ್ಲಿ ಸ್ವಿಸ್ ಪೌರತ್ವವನ್ನು ಪಡೆದುಕೊಂಡರು.

 

ಇವರ ಬಗೆಗಿನ ಹೆಚ್ಚಿನ ಮಾಹಿತಿಯನ್ನು ಮುಂದಿನ ಬರಹದಲ್ಲಿ ತಿಳಿದುಕೊಳ್ಳೋಣ.

Previous
« Prev Post

No comments:

Post a Comment