ಜೀವನದಲ್ಲಿ ಯಶಸ್ಸು ಲಭಿಸಿದಮೇಲೆ ಪ್ರಶಸ್ತಿಗಳು ಆರಸುತ್ತಾ ಬರುತ್ತವೆ. ಐನ್‌ಸ್ಟೀನ್ ಅವರ ಜೀವನದಲ್ಲೂ ಸಹ ಹಲವಾರು ಪ್ರಶಸ್ತಿಗಳು ಅರಸಿ ಬಂದವು, ಅದರಲ್ಲೂ ನೊಬೆಲ್ ಪ್ರಶಸ್ತಿ ದೊರಕಿರುವುದು ಒಂದು ಮಹಾಸಾಧಕತೆಯನ್ನು ಪ್ರತಿನಿದಿಸುತ್ತದೆ.
ಈ ಬರಹವು ಭಾಗ ೧
ಮತ್ತು ಭಾಗ 2 ರ ನಂತರ ಬರೆದಿರುವುದಾಗಿದೆ.
ಭಾಗ ೧ ಓದಲು click here for part 1 ಬಟ್ಟನ್ ಮೇಲೆ
ಒತ್ತಿರಿ.
ಭಾಗ 2 ಓದಲು click here for part 2 ಬಟ್ಟನ್ ಮೇಲೆ
ಒತ್ತಿರಿ.
1921ರಲ್ಲಿ ಐನ್‌ಸ್ಟೀನ್‌ರು,
ಪೌರಾತ್ಯ ರಾಷ್ಟ್ರಗಳಲ್ಲಿ ಪ್ರವಾಸ ಮಾಡುತ್ತಿದ್ದಾಗ
ಸಂತೋಷದ ಸುದ್ದಿಯೊಂದು ಪ್ರಕಟಗೊಂಡಿತು. ಅವರ ಪ್ರಖ್ಯಾತ
ಸಂಶೋಧನೆಗಳಲ್ಲೊಂದಾದ 'ದ್ಯುತಿವಿದ್ಯುತ್
ಪರಿಣಾಮ' (Photo-Electric Effect) ಕಂಡುಹಿಡಿದುದಕ್ಕೆ
“ನೊಬೆಲ್ ಪ್ರಶಸ್ತಿ” ಘೋಷಿಸಲಾಯಿತು. ವಿಶೇಷವೆಂದರೆ ಈ ಸಂಶೋಧನೆಯನ್ನು ಐನ್ ಸ್ಟೀನ್
ಪ್ರಕಟಿಸಿ 17 ವರ್ಷಗಳಾಗಿತ್ತು.
ಆಗಲೇ ಈ ಪ್ರಶಸ್ತಿ ಐನ್ಸ್ಟೀನ್‌ರಿಗೆ ದೊರಕಬೇಕಿತ್ತು. ಆದರೆ, ಅವರೊಬ್ಬ ಯಹೂದಿ ಎಂಬ ಕಾರಣವೋ, ಎಲ್ಲರೂ ಅಸೂಯೆಪಡುವಷ್ಟು ಮೇಧಾವಿ ಎಂಬ ಕಾರಣಕ್ಕೋ ಈ ಪ್ರಶಸ್ತಿ
ದೊರೆಯಲು ಇಷ್ಟು ತಡವಾಗಿಹೋಯಿತು. ಕೊನೆಗೂ ನಿಜವಾದ ಪ್ರತಿಭೆಗೆ, ಮೇಧಾವಿತನಕ್ಕೆ ಪ್ರಶಸ್ತಿ ಅರಸಿ ಬಂದಿತ್ತು. ಆಲ್ಬರ್ಟ್ ಐನ್‌ಸ್ಟೀನ್ ರಿಗೆ ನೊಬೆಲ್ ಪ್ರಶಸ್ತಿ
ಘೋಷಣೆಯಾಗುತ್ತಿದ್ದಂತೆ ವಿಶ್ವದೆಲ್ಲೆಡೆಯಿಂದ ಅಭಿನಂದನೆಯ ಸುರಿಮಳೆಯಾಯಿತು. ಈ ಪ್ರಶಸ್ತಿಗಿಂತ
ಮೊದಲೇ ಸಾಪೇಕ್ಷ ಸಿದ್ಧಾಂತದ ಮೂಲಕ ಅವರ ಹೆಸರು ಪ್ರಖ್ಯಾತಿಗೊಂಡಿತ್ತು. ವಿಶ್ವದ ಎಲ್ಲ
ವಿಶ್ವವಿದ್ಯಾನಿಲಯಗಳಲ್ಲಿ ದಿನನಿತ್ಯ ಅವರ ಸಿದ್ಧಾಂತದ ಪ್ರಸ್ತಾಪ ನಡೆಯುತ್ತಿತ್ತು. ನೊಬೆಲ್
ಪ್ರಶಸ್ತಿಯನ್ನು ಐನ್‌ಸ್ಟೀನ್ ರಿಗೆ ನೀಡಿದ್ದರಿಂದಾಗಿ, ಆ ಪ್ರಶಸ್ತಿಗೆ ಹೆಚ್ಚಿನ ಮೌಲ್ಯ ಸಂದಂತಾಗಿತ್ತು. ಐನ್‌ಸ್ಟೀನ್‌ರ ಹೆಸರು ವಿಶ್ವದೆಲ್ಲೆಡೆ
ಮನೆಮಾತಾಯಿತು.
ಅಮೆರಿಕಾದ ಕ್ಯಾಲಿಫೋರ್ನಿಯಾ
ವಿಶ್ವವಿದ್ಯಾನಿಲಯವು ತನ್ನಲ್ಲಿ ಕಾರ್ಯ ನಿರ್ವಹಿಸಲು ಅಲ್ಬರ್ಟ್ ಐನ್‌ಸ್ಟೀನ್‌ರಿಗೆ ಆಹ್ವಾನ
ನೀಡಿತ್ತು. ಸರ್ಕಾರದ ಕಿರುಕುಳದಿಂದ ತೀವ್ರವಾಗಿ ನೊಂದಿದ್ದ ಐನ್‌ಸ್ಟೀಸ್‌ರು, ತಮ್ಮ ಕುಟುಂಬಸಮೇತ ತಾಯ್ನಾಡನ್ನು
ತೊರೆದು ಅಮೆರಿಕಾಗೆ ತೆರಳಿದರು. ಜರ್ಮನಿಯನ್ನು ತೊರೆದ ಐನ್‌ಸ್ಟೀನ್ ಬಗ್ಗೆ ಹಲವು ವಿಜ್ಞಾನಿಗಳೇ
ಅಪಪ್ರಚಾರ ಮಾಡತೊಡಗಿದರು. ಐನ್‌ಸ್ಟೀನ್‌ರ ಸಂಶೋಧನೆಗಳೆಲ್ಲಾ ಕಟ್ಟುಕತೆಗಳೆಂದು, ಜರ್ಮನಿಯಲ್ಲೇ ಉಳಿದಿದ್ದರೆ ಗೆಲಿಲಿಯೋನಂತೆ ಐನ್
ಸ್ಟೀನ್ ನನ್ನು ಜೈಲಿಗೆ ತಳ್ಳಬೇಕಾಗಿತ್ತೆಂದು ಆಡಿಕೊಂಡರು. ಅದೇ ವೇಳೆಗೆ 1933ರಲ್ಲಿ ಜರ್ಮನಿಯಲ್ಲಿ ನಾಜೀ ಪಕ್ಷದ ಸರ್ವಾಧಿಕಾರಿ
ಹಿಟ್ಲರ್ ಅಧಿಕಾರಕ್ಕೆ ಬಂದಿದ್ದ. ಕ್ಯಾಲಿಫೋರ್ನಿಯಾದಲ್ಲಿ
ತಮ್ಮ ಕೆಲಸ ಮುಗಿಸಿ ಯುರೋಪಿಗೆ ಹಿಂದಿರುಗಿದ ಐನ್ ಸ್ಟೀನ್ ಬೆಲ್ಲಿಯಂನ ಲಾಕಾಕ್ ಪಟ್ಟಣಕ್ಕೆ
ಬಂದು ನೆಲೆಸಿದಾಗಲೂ ಅವರಿಗೆ ನಾಜೀಗಳ ಕಿರುಕುಳ ತಪ್ಪಲಿಲ್ಲ. ಬೆಲ್ಲಿಯಂನ ರಾಣಿ ಐನ್ ಸ್ಟೀನ್‌ರ
ಪ್ರಾಣರಕ್ಷಣೆಗಾಗಿ ಸದಾ ಎಚ್ಚರಿಕೆ ವಹಿಸಿದಳು. ಆ ಹೊತ್ತಿಗೆ ಪುನಃ ಅಮೆರಿಕಾದಿಂದ ಐನ್ ಸ್ಟೀನ್
ರಿಗೆ ಆಹ್ವಾನ ಬಂದಿತ್ತು.
1926ರಲ್ಲಿ, ಅವರನ್ನು ಅಲ್ಲಿಯವರೆಗೆ ಅತ್ಯಂತ ಪ್ರೀತಿಯಿಂದ ಸಲಹಿದ
ಅವರ ಎರಡನೇ ಪತ್ನಿಯಾಗಿದ್ದ 'ಎಲ್ಸಾ’ ತೀರಿಕೊಂಡಳು. ಅವರಿಗದು
ತೀವ್ರ ನೋವಿನ ಸಂಗತಿಯಾಗಿತ್ತು, ಈ ನೋವು
ಮರೆಯಾದದ್ದು, ತಮ್ಮ ಬಾಲ್ಯದ
ಪ್ರೀತಿಯ ತಂಗಿ 'ಮಾಜಾ' ಬಂದು ಆ ಇಳಿ ವಯಸ್ಸಿನಲ್ಲಿ ಅವರ ಜೊತೆ ಸೇರಿಕೊಂಡಾಗ. 1934ರಲ್ಲಿ ಐನ್ ಸ್ಟೀನ್ ರು ಪುನಃ ಅಮೆರಿಕಾದ ಪ್ರಿನ್ಸ್‌ಟನ್
ವಿಶ್ವವಿದ್ಯಾನಿಲಯದಲ್ಲಿ ಪ್ರಾಧ್ಯಾಪಕ ವೃತ್ತಿ ಪ್ರಾರಂಭಿಸಿದರು. ಆ ದಿನಗಳಲ್ಲಿ ಐನ್ಸ್ಟೀನ್ ನೆಮ್ಮದಿಯಿಂದಿದ್ದರು.
ಆಲ್ಬರ್ಟ್ ಐನ್ಸ್ಟೀನ್
ಅವರ ಜೀವನಗಾಥೆಯಲ್ಲಿ ಸರಳತೆ
ಆಲ್ಬರ್ಟ್
ಐನ್ಸ್ಟೀಸ್ ರು ಪ್ರಖ್ಯಾತಿಯ ಉತ್ತುಂಗಕ್ಕೇರಿದ್ದರೂ ತಮ್ಮ ಸರಳತೆ, ಸಂಭಾವಿತ ಗುಣ ಮತ್ತು
ಮಾನವೀಯತೆಗಳನ್ನು ಎಂದೂ ಬಿಟ್ಟುಕೊಡಲಿಲ್ಲ. ಅಮೆರಿಕಾದಂತಹ ಶ್ರೀಮಂತ ಜೀವನಶೈಲಿಯ ನೆಲದಲ್ಲಿದ್ದರೂ, ಐನ್‌ಸ್ಟೀನ್, ಸರಳಜೀವನ ಶೈಲಿ
ರೂಪಿಸಿಕೊಂಡಿದ್ದರು. ಸದಾ
ಸೂಟುಬೂಟುಗಳಲ್ಲಿ ಚಾಕುಠೀಕಾಗಿರುತ್ತಿದ್ದ ಜನರ ನಡುವೆ ಐನ್‌ಸ್ಟೀನ್ ಕಾಲುಚೀಲವಿಲ್ಲದೆ ಸಾಧಾರಣ ಚಪ್ಪಲಿ ಹಾಕಿಕೊಂಡು, ತಲೆಗೆ ಹ್ಯಾಟಿಲ್ಲದೆ ಕೆದರಿದ ಕೂದಲಿನಲ್ಲಿ ಒಬ್ಬಂಟಿಯಾಗಿ ತಿರುಗಾಡುತ್ತಿದ್ದರು. ಅವರನ್ನು ಸರಳರು
ಎಂಬುದಕ್ಕೆ ಅಂದಿನ ಎರಡು ಘಟನೆಗಳು
ಇಂದಿಗೂ ಪ್ರಚಲಿತದಲ್ಲಿವೆ.
ಒಮ್ಮೆ ಪ್ಯಾರಿಸ್
ನ ಪ್ರಖ್ಯಾತ ಸಭಾಂಗಣವೊಂದರಲ್ಲಿ ಅವರ ಉಪನ್ಯಾಸ ಏರ್ಪಾಡಾಗಿತ್ತು. ಈ ವಿಶ್ವವಿಖ್ಯಾತರನ್ನು
ಸ್ವಾಗತಿಸಲು ನೂರಾರು ಜನ ರೈಲು ನಿಲ್ದಾಣದಲ್ಲಿ ಹೂಗುಚ್ಛ ಹಿಡಿದು ಕಾಯುತ್ತಿದ್ದರು. ಇನ್ನೇನು
ರೈಲು ಬಂದು ನಿಂತಿತು. ಕಾದಿದ್ದವರೆಲ್ಲ ಪ್ರಥಮ ದರ್ಜೆಯ ರೈಲು ಡಬ್ಬಿಯ ಕಡೆಗೆ ಐನ್‌ಸ್ಟೀನ್‌ರನ್ನು
ಸ್ವಾಗತಿಸಲು ಓಡಿದರು, ಅಲ್ಲಿ ಐನ್ ಸ್ಟೀನ್
ಇರಲಿಲ್ಲ. ಮೂರನೇ ದರ್ಜೆಯ ಡಬ್ಬಿಯಲ್ಲಿ ಪ್ರಯಾಣಿಸಿ ಬಂದಿದ್ದ ಐನ್‌ಸ್ಟೀನ್ ಆಗಲೇ ರೈಲು
ನಿಲ್ದಾಣದಿಂದ ಹೊರನಡೆದು ಹೋಗಿದ್ದರು!
ವಿಯೆನ್ನಾದಲ್ಲಿ ನಡೆದ
ಇನ್ನೊಂದು ಘಟನೆ ಉಡುಪಿನ ಬಗೆಗೆ ಐನ್‌ಸ್ಟೀನ್ ತುಂಬಾ ಸರಳರು. ಎಲ್ಲಿಗೆ ಹೋದರೂ ಎರಡು ಜೊತೆ
ಉಡುಪನ್ನು ಮಾತ್ರ ತೆಗೆದುಕೊಂಡು ಹೋಗುತ್ತಿದ್ದರು. ವಿಯೆನ್ನಾದಲ್ಲಿ ಬಹಳ ದಿನ ಉಳಿದಿದ್ದರಿಂದ
ಉಡುಪಿನ ಇಸ್ತ್ರಿಯೆಲ್ಲವೂ ಹಾಳಾಗಿಹೋಗಿ ಸುಕ್ಕಾಗಿತ್ತು. ಐನ್‌ಸ್ಟೀನ್ ಉಳಿದುಕೊಂಡಿದ್ದ ಗೆಸ್ಟ್‌ಹೌಸ್‌ನಲ್ಲಿ
ಹೊಸ ಉಡುವನ್ನು ತರಿಸಿ ಅವರಿಗೆ ಕಾಣುವಂತೆ ಇಡಲಾಗಿತ್ತು, ಆದರೆ ಐನ್‌ಸ್ಟೀನ್ ತಮ್ಮದೇ ಬಟ್ಟೆಯಲ್ಲಿ ಉಪನ್ಯಾಸ ನೀಡಲು
ಹೋಗಿಬಿಟ್ಟಿದ್ದರು. ಹೊಸ ಚಪ್ಪಲಿ ತರಿಸಿ ಇಟ್ಟಾಗಲೂ ಐನ್ ಸ್ಟೀನ್ ಅವನ್ನು ಬಳಸಿರಲಿಲ್ಲ.
ಐನ್ ಸ್ಟೀನ್
ಸರಳವಾಗಿದ್ದರೇ ಹೊರತು ಜಿಪುಣರಾಗಿರಲಿಲ್ಲ. ತನ್ನ ಉಪನ್ಯಾಸಗಳಿಂದ, ಸಂಬಳದಿಂದ ಬಂದ ಬಹುತೇಕ ಹಣವನ್ನು ಅಗತ್ಯ ಕಂಡುಬಂದ ಬಡವರಿಗೆ,
ವಿದ್ಯಾರ್ಥಿಗಳಿಗೆ, ಕಷ್ಟದಲ್ಲಿದ್ದ ಯಹೂದಿಗಳಿಗೆ ನೀಡುತ್ತಿದ್ದರು. ತಮಗೆ ನೊಬೆಲ್ ಬಹುಮಾನ
ಬಂದಾಗ ವಿಚ್ಛೇದನ ಪಡೆದಿದ್ದ ತಮ್ಮ ಮೊದಲ ಹೆಂಡತಿಯ ಇಬ್ಬರು ಮಕ್ಕಳಿಗೂ ಬಹುಮಾನದ ಹಣವನ್ನು
ಹಂಚಿದ್ದರು ಐನ್ ಸ್ಟೀನ್.
ಮೊದಲನೇ ಮಹಾಯುದ್ಧದ
ಕಹಿನೆನಪು ಆರುವ ಮೊದಲೇ ಐನ್‌ಸ್ಟೀನ್ ರದೇ ಆದ 'ವಸ್ತು-ಚೈತನ್ಯ ಸಂಬಂಧ’ ಸಿದ್ಧಾಂತವನ್ನು ಬಳಸಿಕೊಂಡು ಬೇರೆ ಬೇರೆ ಸಂಶೋಧನೆಗಳು ನಡೆದವು. ಎನ್ರಿಕೋ
ಫರ್ಮಿ ಮತ್ತು ಲಿಯೋಸಿಲಾಡರ್ ಎಂಬ ವಿಜ್ಞಾನಿಗಳು ಇಟಲಿ ಮತ್ತು ಜರ್ಮನಿಗಳಲ್ಲಿ ಸಂಶೋಧನೆ
ನಡೆಸುತ್ತಿದ್ದವರು. ಇವರು ನಡೆಸಿದ ಪ್ರಯೋಗಗಳಿಂದ “ಅಣು ಬಾಂಬು (Atom Bomb)'' ಸೃಷ್ಟಿಸುವುದು ಸಾಧ್ಯವೆಂದು ಸಾಬೀತಾಯಿತು. ಸರ್ಕಾರಗಳ
ಕಿರುಕುಳ ತಡೆಯಲಾರದೆ ಈ ವಿಜ್ಞಾನಿಗಳು ಅಮೆರಿಕಾಕ್ಕೆ ಓಡಿಹೋದರು. ಅವರು ಐನ್‌ಸ್ಟೀನ್ ರಿಗೆ ಆಟಮ್
ಬಾಂಬಿನ ರಹಸ್ಯ ವಿವರಿಸಿದರು. ಆಲ್ಬರ್ಟ್ ಐನ್‌ಸ್ಟೀನ್ ರಿಗೂ, ಆಗ ಅಮೇರಿಕಾದ ಅಧ್ಯಕ್ಷರಾಗಿದ್ದ ರೂಸ್‌ವೆಲ್ಟರಿಗೂ ಅಪಾರ
ಸ್ನೇಹವಿತ್ತು. ಆಟಂ ಬಾಂಬಿನ ಅದ್ಭುತ ರಹಸ್ಯವನ್ನು ಅಧ್ಯಕ್ಷ ರೂಸ್‌ವೆಲ್ಟಗೆ ವಿಜ್ಞಾನಿ ಐನ್‌ಸ್ಟೀನ್
ರ ಮೂಲಕ ತಿಳಿಸಿ ಮಹಾಯುದ್ಧದಲ್ಲಿ ಮಿತ್ರರಾಷ್ಟ್ರಗಳಿಗೆ ಜಯ ದೊರಕಿಸಬೇಕೆಂಬುದೇ ಈ ವಿಜ್ಞಾನಿಗಳ
ಆಕಾಂಕ್ಷೆಯಾಗಿತ್ತು. ಅಣುಬಾಂಬಿನ ಸೃಷ್ಟಿಯೇ ವಿಜ್ಞಾನಿ ಐನ್ ಸ್ಟೀನ್ ರಿಗೆ ಸರಿಕಾಣಲಿಲ್ಲ.
ಆದರೆ, ಯೂರೋಪಿನ ಹಿಟ್ಲರ್ ನಂತಹ
ಸರ್ವಾಧಿಕಾರಿಗಳು ಮೊದಲು ಆಟಂ ಬಾಂಬನ್ನು ಕಂಡುಹಿಡಿದರೆ ಇಡೀ ಜಗತ್ತೇ ಸಾವಿನ ಮನೆಯಾದೀತೆಂದು,
ಆ ಮಾರಕಾಸ್ತ್ರವನ್ನು ಬಳಸದೆಯೇ ನಾಜೀಗಳಿಗೆ
ಗೊಡ್ಡುಬೆದರಿಕೆ ಹಾಕಲೆಂದು ಐನ್‌ಸ್ಟೀನ್, ಅಧ್ಯಕ್ಷ ರೂಸ್‌ವೆಲ್ಟರಿಗೆ ಅಣುಬಾಂಬ್ ಸೃಷ್ಟಿಯ
ಬಗ್ಗೆ ಕಾಗದ ಬರೆದರು. ಆದರೆ, ಐನ್‌ಸ್ಟೀನ್ ಎಣಿಸಿದಂತೆ ಯಾವುದೂ ಆಗಲಿಲ್ಲ. ಹಿರೋಶಿಮಾ,
ನಾಗಸಾಕಿಗಳು ಅಣುಬಾಂಬಿನ ರುದ್ರಪ್ರಳಯಕ್ಕೆ ಬಲಿಯಾದವು.
ಅಲ್ಲಿಗೆ ದ್ವಿತೀಯ ಮಹಾಯುದ್ಧ ಮುಕ್ತಾಯಗೊಂಡಿತು. ಐನ್‌ಸ್ಟೀನರ ಮನಸ್ಸು ತಲ್ಲಣಗೊಂಡಿತು.
ಯುದ್ಧಗಳು ತರುವ ಸಾವು ನೋವುಗಳ ಬಗ್ಗೆ ತಾವು ಕೈಗೊಂಡ ಹೋರಾಟ, ತೋರಿದ ಎಚ್ಚರಿಕೆ ಫಲಿಸದೇ ಹೋದದ್ದನ್ನು ಕಂಡು ಬಹಳ ನೊಂದುಕೊಂಡರು.
ಆನಂತರವೂ ಪ್ರಮುಖ ರಾಷ್ಟ್ರಗಳ ಎಲ್ಲ ಮುಖಂಡರುಗಳಿಗೆ ಐನ್‌ಸ್ಟೀನ್ ಮಾರಕಾಸ್ತ್ರಗಳ ಬಳಕೆಯನ್ನು
ವಿರೋಧಿಸಿ ಪತ್ರ ಬರೆದರು.
ಐನ್ ಸ್ಟೀನ್
ತಮ್ಮ ಇಳಿವಯಸ್ಸಿನಲ್ಲೂ ಸ್ವಾತಂತ್ರ್ಯ ಮತ್ತು ನ್ಯಾಯಕ್ಕಾಗಿ ಆಂದೋಲನ ಮಾಡುವುದನ್ನು
ಮುಂದುವರಿಸಿದರು. ಅತ್ಯಂತ ಸೂಕ್ಷ್ಮ ವಿಚಾರಗಳಾದ ಅಣ್ವಸ್ತ್ರಗಳ ಕುರಿತ ತೀರ್ಮಾನಗಳ ಬಗೆಗೆ
ತಿಳಿದುಕೊಳ್ಳಲು ಸಾರ್ವಜನಿಕರಿಗೆ ಇರುವ ಹಕ್ಕನ್ನು, ಇರಬೇಕಾದ ಜವಾಬ್ದಾರಿಯನ್ನು ಸದಾ ಒತ್ತಿ ಹೇಳುತ್ತಿದ್ದರು. ಐನ್‌ಸ್ಟೀನ್
ರ ಈ ನಡವಳಿಕೆ ಎಷ್ಟೋ ಬಾರಿ ಅಮೇರಿಕಾದ ಅಧಿಕಾರಿಗಳಿಗೆ ಹಿಡಿಸುತ್ತಿರಲಿಲ್ಲ. ಆದರೇನು, ತಮ್ಮ ಜೀವನದ ಕೊನೆಯ ದಿನಗಳವರೆಗೂ ಯುದ್ಧವಿರೋಧಿ
ನಿಲುವು, ಆಂದೋಲನ ರೂಪಿಸಲು ಐನ್
ಸ್ಟೀನ್ ಶ್ರಮಿಸಿದರು. ಆಲ್ಬರ್ಟ್
ಐನ್ಸ್ಟೀನ್ 1955ರ ಏಪ್ರಿಲ್ 18ರಂದು ಅನಾರೋಗ್ಯದಿಂದ ಕೊನೆಯುಸಿರೆಳೆದರು. ಮರುದಿನ
ಎಲ್ಲ ಪತ್ರಿಕೆಗಳಲ್ಲೂ ಐನ್‌ಸ್ಟೀನ್ ತೀರಿಕೊಂಡದ್ದೇ ಮುಖ ಪುಟದ ಪ್ರಮುಖ ಸುದ್ದಿಯಾಯಿತು. ಎಲ್ಲ
ಪತ್ರಿಕೆಗಳೂ “20 ನೇ ಶತಮಾನದ
ಅತ್ಯಂತ ಮೇಧಾವಿಯ ಮರಣ '' ಎಂದು
ದಾಖಲಿಸಿದ್ದವು.
ವಿಜ್ಞಾನಿ
ಆಲ್ಬರ್ಟ್ ಐನ್‌ಸ್ಟೀನ್‌ರ ಜೀವನ ಇಂದಿಗೂ ಮನುಕುಲಕ್ಕೆ ಕುತೂಹಲದ, ವಿಸ್ಮಯದ ಸಂಗತಿ. ಅವರ ಸಾಧನೆ ಎಲ್ಲರಿಗೂ ಮಾರ್ಗದರ್ಶಿ, ಅವರು ತೋರಿದ ಮಾನವೀಯತೆ ಇಡೀ ಮನುಕುಲಕ್ಕೆ ದಾರಿದೀಪ.
ಅವರ ಜೀವನದ ಸಂಕ್ಷಿಪ್ತ ಮಾಹಿತಿ ತಿಳಿದಿರಿ. ನನ್ನ ಮುಂದಿನ ಬರಹದಲ್ಲಿ ಅವರ ಅನ್ವೇಷಣೆಗಳ ಬಗ್ಗೆ
ತಿಳಿಸಲಿಚ್ಚಿಸುತ್ತೇನೆ.
ಭಾಗ ೧ ಓದಲು click here for part 1 ಬಟ್ಟನ್ ಮೇಲೆ ಒತ್ತಿರಿ.
ಭಾಗ 2 ಓದಲು click here for part 2 ಬಟ್ಟನ್ ಮೇಲೆ ಒತ್ತಿರಿ.
No comments:
Post a Comment