Jul 11, 2022

Build reliable quality in children| ಮಕ್ಕಳಲ್ಲಿ ವಿಶ್ವಾಸಾರ್ಹತೆ ಮೂಡಿಸಿ|

Posted by ANIL KNOWN on Jul 11, 2022


ಮೊನ್ನೆ ನಮ್ ಪಕ್ಕದ ಮನೆ ಮಗು ಪರೀಕ್ಷೇಲಿ ಒಳ್ಳೆ ಮಾರ್ಕ್ಸ್ ತಗೊಂಡಿದಾನೆ ಅಂತಾ ಸಿಹಿ ಕೊಡಕ್ ಬಂದಿದ್ರು ಅವರಪ್ಪ. ಆದ್ರೆ ಅವನ್ ಟೀಚರ್ ಒಂದ್ ತಿಂಗಳು ಹಿಂದೆ ಬಂದು ನಿಮ್ ಮಗನ್ನ ನಮ್ಬೇಡಿ ಮಾಡ್ಬಾರ್ದ್ ಕೆಲಸ ಮಾಡ್ತಾನೆ. ಬರಿ ಸುಳ್ಳು ಹೇಳ್ತಾನೆ, ಓದ್ತೀನಿ ಅನ್ನೋ ಒಂದೇ ಕಾರಣಕ್ಕೆ ಅದುನ್ನ ಬಳುಸ್ಕೊಂಡು ಒಳ್ಳೆ ಹುಡ್ಗನ್ ತರ ನಟುಸ್ತಾನೆ, ಇವನನ್ನ ನಾನು ನಂಬೋದೆ ಇಲ್ಲಾ ಅಂತ ಮಾರುದ್ದ ಕಂಪ್ಲೈಂಟ್ ಹೇಳಿದ್ರು. ಅವಾಗ ನಂಗ್ ಅನ್ಸಿದ್ದು ಈಗಿನ ಯುವ ಪೀಳಿಗೆಯ ಮಕ್ಕಳಿಗೆ ಶಿಕ್ಷಣದ ಜೊತೆಗೆ ವಿಶ್ವಾಸಾರ್ಹತೆ ಗಳಿಸುವ ಪರಿ ತಿಳಿಸಬೇಕು ಅಂತ. ನಿಮಗೆಲ್ಲ ಅಂದ್ರೆ ನಮಗೆಲ್ಲ ಚಿಕ್ಕವಯಸ್ಸಲ್ಲಿ  ಹೇಳಿದ ಕಥೆಗಳು, ಸನ್ನಿವೇಶಗಳನ್ನು ಬಳಸಿಕೊಂಡು ಮಕ್ಕಳಲ್ಲಿ ವಿಶ್ವಾಸಾರ್ಹತೆ ಬೆಳೆಸುವ ಪರಿಯನ್ನು ವಿವರಿಸಲು ಪ್ರಯತ್ನಿಸಿದ್ದೇನೆ. ಓದಿ ಹರಸಿ ಹಾರೈಸಿ.

ವಿಶ್ವಾಸಾರ್ಹತೆ ವ್ಯಕ್ತಿತ್ವದ ಪ್ರಧಾನ ಅಂಶ, ವಿಶ್ವಾಸಕ್ಕೆ ಅರ್ಹನಲ್ಲದ ವ್ಯಕ್ತಿಯನ್ನು ಸಮಾಜ ಹೇಗೆ ನೋಡುತ್ತದೆ ಎಂಬುದರ ಬಗ್ಗೆ ವಿವರಣೆ ಬೇಕಿಲ್ಲ. ಸಮಾಜದಲ್ಲಿ ಪ್ರಚಾರ ಗಿಟ್ಟಿಸಿಕೊಂಡವರೆಲ್ಲರೂ ವಿಶ್ವಾಸಾರ್ಹ ವ್ಯಕ್ತಿಗಳಾಗಿರಲಿಕ್ಕಿಲ್ಲ. ಓರ್ವ ಸಭ್ಯನೆನಿಸಿಕೊಳ್ಳಬೇಕಾದರೆ ಅವನು ಮೊದಲು ವಿಶ್ವಾಸಾರ್ಹನಾಗಬೇಕು, ಆದರೆ ವಿಶ್ವಾಸಾರ್ಹನಾಗುವುದು ಸುಲಭದ ವಿಷಯವಲ್ಲ. ಆ ಗುಣ ದೇಹದ ನರನಾಡಿಗಳಲ್ಲಿ ಹರಿಯಬೇಕಾದರೆ ಬಾಲ್ಯದಿಂದಲೇ ಮಗುವನ್ನು ಅಂತಹ ವ್ಯವಸ್ಥೆಗೆ ಒಳಪಡಿಸಬೇಕು. ಮೊದಲು ತಂದೆ ತಾಯಂದಿರು, ಪೋಷಕರು, ವಿಶ್ವಾಸಾರ್ಹರಿರಬೇಕು, ತರಗತಿಯ ಶಿಕ್ಷಕರು, ಶಾಲೆಯ ಮುಖ್ಯೋಪಾಧ್ಯಾಯರು ವಿಶ್ವಾಸಾರ್ಹ ವ್ಯಕ್ತಿಗಳಾಗಿರಬೇಕು, ಮಕ್ಕಳ ಮೇಲೆ ಬಲವಾದ ಪರಿಣಾಮವನ್ನು ಬೀರಬಲ್ಲ ವಿಶ್ವಾಸಾರ್ಹ ವ್ಯಕ್ತಿಗಳು ಪರಿಸರದಲ್ಲಿರಬೇಕು.

ಮಗು ಶಾಲೆಗೆ ಹೊರಡುವಾಗ ಅಮ್ಮ ಸಂಜೆಗೆ ಯಾವುದೋ ತಿಂಡಿಯನ್ನು ಮಾಡಿಡುತ್ತೇನೆ, ಎಂದು ಹೇಳುತ್ತಾಳೆ. ಶಾಲೆ ಬಿಟ್ಟ ನಂತರ ಅದರ ಬಗ್ಗೆಯೇ ಮನಸ್ಸಿನಲ್ಲಿ ಮೆಲುಕು ಹಾಕುತ್ತಾ ಮಗು ಮನೆಗೆ ಹಿಂದಿರುಗುತ್ತದೆ. ಆದರೆ, ಅಮ್ಮ ಸಲೀಸಾಗಿ ಅದನ್ನು ಮಾಡಲು ಸಾಧ್ಯವಾಗದುದಕ್ಕೆ ಸಬೂಬು ನೀಡುತ್ತಾಳೆ. ಮಗು ಶಾಲೆಗೆ ಹೋಗಿದ್ದಾಗ ತಾಯಿ ಸ್ನೇಹಿತರ ಮನೆಗೋ, ಮಾರುಕಟ್ಟೆಗೋ ಹೋಗಿಬರುತ್ತಾಳೆ. ಆದರೆ ಮಗುವಿನಿಂದ ಆ ವಿಷಯವನ್ನು ಮುಚ್ಚಿಡುತ್ತಾಳೆ, ಮಗು ಮಾತ್ರ ಅದನ್ನು ಹೇಗೋ ತಿಳಿದುಕೊಂಡುಬಿಡುತ್ತದೆ. ಮನೆಯಲ್ಲಿರುವ ತಿಂಡಿತಿನಿಸುಗಳನ್ನು ಕಪಾಟಿನಲ್ಲಿಟ್ಟು ಮಕ್ಕಳು ತೆಗೆದಾರೆಂದು ಬೀಗ ಹಾಕಿ ಇಡುವ ಪೋಷಕರಿದ್ದಾರೆ. ಮಕ್ಕಳ ಶಾಲಾ ಕಾರ್ಯಕ್ರಮಗಳಾದ ವರ್ಧಂತ್ಯುತ್ಸವ, ವಸ್ತುಪ್ರದರ್ಶನ, ಸಾಂಸ್ಕೃತಿಕ ಕಾರ್ಯಕ್ರಮ ಮೊದಲಾದವುಗಳಿಗೆ ಬರುತ್ತೇವೆ ಎಂದು ಹೇಳಿ ನಂತರ ಗೈರುಹಾಜರಾಗುವ ಪೋಷಕರಿದ್ದಾರೆ. ಮಕ್ಕಳು ತಪ್ಪು ಮಾಡಿದಾಗಲೆಲ್ಲ, “ಹೋಗು, ನೀನು ನನ್ನ ಮಗನಲ್ಲ/ಮಗಳಲ್ಲಎಂದು ಅವರ ಮೇಲೆ ತಂದೆತಾಯಂದಿರು ಮಾನಸಿಕ ಒತ್ತಡ ತರುವುದಿದೆ. ಮಕ್ಕಳನ್ನು ದಾರಿಗೆ ತರಲು ಎರಡು ಮೂರು ದಿನ ಅವರೊಂದಿಗೆ ಮೌನವ್ರತ ಆಚರಿಸುವ ತಂತ್ರಗಳನ್ನು ಬಳಸುವುದೂ ಇದೆ.

ಆದರೆ ಇವೆಲ್ಲವೂ ನೆಗೆಟಿವ್ ತಂತ್ರಗಳು, ಇವುಗಳ ಮಾನಸಿಕ ಕ್ರಿಯಾತ್ಮಕತೆ ಋಣಾತ್ಮಕವಾಗಿರುತ್ತದೆ. ಮಕ್ಕಳಲ್ಲಿ ಪ್ರೀತಿ, ವಿಶ್ವಾಸಗಳನ್ನು ಬೆಳೆಸುವುದರ ಬದಲಾಗಿ ದ್ವೇಷ, ಅವಿಶ್ವಾಸಗಳಿಗೆ ಈ ತಂತ್ರಗಳು ನೀರೆರೆಯುತ್ತವೆ. ಮಕ್ಕಳಿಗೆ ಕೊಟ್ಟ ಭರವಸೆಗಳನ್ನು ಈಡೇರಿಸಲೇಬೇಕು. ಅದರಲ್ಲಿ ಸಮಯಪಾಲನೆಯನ್ನು ತೋರಬೇಕು. ಬಲವಾದ ಕಾರಣಗಳಿಂದ ಕೆಲವೊಮ್ಮೆ ಈಡೇರಿಕೆ ಅಸಾಧ್ಯವಾದಾಗ ಮಕ್ಕಳಿಗೆ ತಿಳಿಯುವಂತೆ ವಿವರಿಸಿ ಹೇಳುವ ಸಹನೆ ಬೇಕು.

ಮನೆಯ ಸದಸ್ಯರ ಮಧ್ಯೆ ಉತ್ತಮ ಸಂಬಂಧಗಳು ಬೆಳೆಯಬೇಕಾದರೆ ಮೂಲತಃ ಬೇಕಾದ ಗುಣಾಂಶ ವಿಶ್ವಾಸಾರ್ಹತೆ. ಅದು ಒಬ್ಬನಿಗೆ ತನ್ನಲ್ಲಿ ತನಗೆ ಇರುವ ಗೌರವವನ್ನು ಹೆಚ್ಚಿಸುತ್ತದೆ. ಇಲ್ಲಿ ಒಬ್ಬ ವ್ಯಕ್ತಿ ಹೇಗೆ ಕಾಣಿಸುತ್ತಾನೆ ಎಂಬುದಕ್ಕಿಂತ ಆತ ಏನು ಎಂಬುದು ಅತಿ ಮುಖ್ಯ. ವ್ಯಕ್ತಿಯ ಬಾಹ್ಯ ನೋಟ ನಮ್ಮನ್ನು ಇಲ್ಲದ ನಿರೀಕ್ಷೆಯುತ್ತ ಕೊಂಡೊಯ್ಯಬಹುದು. ಆದರೆ ಆ ವ್ಯಕ್ತಿಯೊಂದಿಗಿನ ಕೆಲದಿನಗಳ ಒಡನಾಟ ಅವನೇನಿದ್ದಾನೆ. ಎಂಬುದನ್ನು ಸ್ಪಷ್ಟಗೊಳಿಸುತ್ತದೆ.

ವಿಶ್ವಾಸಾರ್ಹತೆ ಪರೀಕ್ಷೆಯ ಅಂಕಪಟ್ಟಿಗಳಲ್ಲಿ ಸ್ಪಷ್ಟವಾಗುವುದಿಲ್ಲ ಅಥವಾ ವ್ಯಕ್ತಿಯ ಹೆಸರು, ಜಾತಿ, ರಾಷ್ಟ್ರೀಯತೆಗಳು ಅವನ ವಿಶ್ವಾಸಾರ್ಹತೆಯನ್ನು ತಿಳಿಸುವುದು ಸಾಧ್ಯವಿಲ್ಲ. ಮಗು ಕಾಪಿ ಮಾಡಿ ಪರೀಕ್ಷೆಯಲ್ಲಿ ಕೈತುಂಬ ಅಂಕಗಳನ್ನು ಪಡೆದಿರಬಹುದು. ಆದರೆ ಆತನ ಆತ್ಮ ಆವನೋರ್ವ ಪಾತಕಿ ಎಂಬುದನ್ನು ಚುಚ್ಚಿ ಹೇಳುತ್ತಿರುತ್ತದೆ.

ಅಲ್ಲೊಬ್ಬ ರೈತ ದಿನವೂ ಬೇಕರಿಯಾತನಿಗೆ, ಒಂದು ಕಿಲೋ ಬೆಣ್ಣೆ ತಂದುಕೊಡುತ್ತಿದ್ದ, ಒಂದು ದಿನ ಬೇಕರಿಯಾತ ಬೆಣ್ಣೆಯನ್ನು ತೂಗಿ ನೋಡಲು ನಿರ್ಧರಿಸಿದ. ತೂಗಿದಾಗ ತೂಕ ಕಡಿಮೆಯಿರುವುದು ಸ್ಪಷ್ಟವಾಯಿತು. ಸಿಟ್ಟಿಗೆದ್ದ ಬೇಕರಿಯ ಮಾಲಿಕ ಆತನನ್ನು ನ್ಯಾಯಾಲಯಕ್ಕೆಳದ, ನ್ಯಾಯಾಧೀಶ ಬೆಣ್ಣೆಯನ್ನು ರೈತ ಹೇಗೆ ತೂಗುತ್ತಿರುವನೆಂಬುದನ್ನು ಪ್ರಶ್ನಿಸಿದ. ಆಗ ರೈತ ಹೇಳಿದ, "ಸ್ವಾಮಿ, ನಾನು ಹಳ್ಳಿ ಜೀವಿ, ನನ್ನ ಹತ್ತಿರ ತೂಕದ ಪಡಿಗಳಿಲ್ಲ. ಬದಲಾಗಿ ಒಂದು ಹಳೆಯ ತಕ್ಕಡಿ ಇದೆ.'' ನ್ಯಾಯಾಧೀಶ ಮರುಪ್ರಶ್ನಿಸಿದ. "ಹಾಗಾದರೆ ನೀನು ಹೇಗೆ ತೂಗುತ್ತೀಯಾ?" ಆಗ ರೈತನು, "ಸ್ವಾಮಿ, ಇವರು ನನ್ನಿಂದ ಬೆಣ್ಣೆಯನ್ನು ಕೊಳ್ಳುವುದಕ್ಕಿಂತ ಮೊದಲೇ ನಾನು ಇವರಿಂದ ಬ್ರೆಡ್ ತೆಗೆದುಕೊಳ್ಳಲು ಆರಂಭಿಸಿದ್ದೆ. ಪ್ರತಿದಿನ ಅವರು ನನಗೆ ನೀಡುತ್ತಿದ್ದ ಒಂದು ಕೆ.ಜಿ ಬ್ರೆಡ್‌ನ್ನು ಒಂದು ತಕ್ಕಡಿಯ ತಟ್ಟೆಯಲ್ಲಿರಿಸಿ, ಇನ್ನೊಂದರಲ್ಲಿ ಸಮಾನತೂಕದ ಬೆಣ್ಣೆಯನ್ನು ತೂಗುತ್ತಿದ್ದೆ. ಬೆಣ್ಣೆಯ ತೂಕ ಕಡಿಮೆಯಿದ್ದರೆ ಅದಕ್ಕೆ ನಾನು ಕಾರಣನಲ್ಲ, ಈ ಬೇಕರಿಯ ಮಾಲಿಕರೇ... ನೀವೇನಿದ್ದರೂ ಅವರನ್ನೇ ಶಿಕ್ಷಿಸಬೇಕು'' ಎಂದುತ್ತರಿಸಿದನು.

ಇಂದು ಎಷ್ಟೋ ಜನರು ವಿಶ್ವಾಸಾರ್ಹ ಬದುಕಿಗೆ ತಿಲಾಂಜಲಿ ನೀಡಿ, ಸುಳ್ಳುಗಳನ್ನು ಸಾರಾಸಗಟಾಗಿ ಹೇಳುವುದನ್ನು ಕಾಣುತ್ತೇವೆ, ಇನ್ನೆಷ್ಟೋ ಮಂದಿಗೆ ಸತ್ಯವೆಂದರೆ ಏನೆಂಬುದೇ ತಿಳಿಯದು. ಆದರೆ ಅವರು ಯಾರನ್ನು ಮೋಸಹೋಗಿಸುತ್ತಾರೆ?. ತಮ್ಮನ್ನು ತಾವೇ...ಅಲ್ಲವೇ!

ಒಬ್ಬ ಉತ್ತಮ ಸ್ನೇಹಿತ ಸತ್ಯವಂತನಿರಲೇಬೇಕು, ಸತ್ಯ ನೋವಿನಿಂದ ತುಂಬಿದ್ದರೆ ಅದನ್ನು ಮರೆಮಾಚಿಡುವವರೂ ಇದ್ದಾರೆ. ವಿಶ್ವಾಸಾರ್ಹ ವಿಮರ್ಶೆ ಕಹಿಯಾಗಿರುವುದೇ ಹೆಚ್ಚು. ಸುಳ್ಳು ಹೇಳುವವರು ತಮ್ಮ ಸುಳ್ಳುಹೇಳಿಕೆಗಳನ್ನು ನೆನಪಿಟ್ಟುಕೊಳ್ಳಬೇಕಲ್ಲವೆ? ಸತ್ಯವಂತನಿಗೆ ಒಂದೇ ದಾರಿ, ಆದರೆ ಒಂದು ಸುಳ್ಳನ್ನು ಮರೆಮಾಚಲು ನೂರು ಸುಳ್ಳುಗಳನ್ನು ಹೇಳಬೇಕಾದ ಪ್ರಮಾದದಿಂದ ತನ್ನನ್ನು ತಾನು ರಕ್ಷಿಸಿಕೊಳ್ಳುವುದು ಸಾಧ್ಯವಿಲ್ಲದ ವಿಚಾರ. "ನೀವು ವಿಶ್ವಾಸಾರ್ಹರಾದರೆ, ಜಗತ್ತಿನಲ್ಲಿ ಒಂದು ಕೆಟ್ಟ ಹುಳು ಕಡಿಮೆಯಾದ೦ತೆ'' ಎನ್ನುತ್ತಾನೆ ಚಿಂತಕ ಥಾಮಸ್‌ ಕಾರ್ಲೈಲ್.

"ತೋಳ, ತೋಳ, ಸಹಾಯಕ್ಕೆ ಬನ್ನಿ' ಎಂದು ಸುಮ್ಮಸುಮ್ಮನೆ ಕೂಗಿ ಕರೆಯುತ್ತಿದ್ದ ಕುರಿಗಾಹಿಯ ಕಥೆ ನಮಗೆಲ್ಲ ತಿಳಿದೇ ಇದೆ. ಹುಡುಗನಿಗೇನೋ ಸ್ವಲ್ಪ ತಮಾಷೆ ಬೇಕಿತ್ತು, ಹಳ್ಳಿಯ ಜನ ಅವನ ಕೂಗಿಗೆ ಸ್ಪಂದಿಸಿ ಓಡೋಡಿ ಬರುತ್ತಿದ್ದರು. ಬಂದಾಗಲೆಲ್ಲ ಅಲ್ಲಿ ತೋಳ ಇರುತ್ತಿರಲಿಲ್ಲ, ಬಾಲಕ ಗಹಗಹಿಸಿ ನಗುತ್ತಿದ್ದ, ಅವರೆಲ್ಲ ಹೊರಟುಹೋಗುತ್ತಿದ್ದರು. ಕೊನೆಗೊಂದು ದಿನ ಬಾಲಕ ಕುರಿಗಳನ್ನು ಕಾಯುತ್ತಿದ್ದಾಗ ನಿಜವಾಗಿಯೂ ತೋಳವೊಂದು ಅಲ್ಲಿಗೆ ಬಂತು, ಬಾಲಕ ಸಹಾಯಕ್ಕಾಗಿ ಕೂಗಿಕೊಂಡ. ಆದರೆ, ಈ ಬಾರಿ ಯಾರೂ ಬರಲಿಲ್ಲ. ಅವರೆಲ್ಲ 'ಇದೂ ಕೂಡಾ ತಮಾಷೆಯಿರಬೇಕು, ವಿನಾಕಾರಣ ಹುಡುಗ ಕೂಗುತ್ತಿದ್ದಾನೆ' ಎಂದುಕೊಂಡರು, ಹುಡುಗ ನಿಸ್ಸಹಾಯಕನಾದ, ಕುರಿಯನ್ನು ಕಳೆದುಕೊಂಡ.

ಪ್ರತಿ ಬಾರಿ ಸುಳ್ಳು ಹೇಳಿದಾಗಲೂ ನೀವು ಒಂದಂಶ ವಿಶ್ವಾಸಾರ್ಹತೆಯನ್ನು ಕಳೆದುಕೊಳ್ಳುತ್ತೀರಿ. ಮುಂದೆ ಸತ್ಯವನ್ನೇ ಹೇಳಿದಾಗಲೂ ಅದಕ್ಕೆ ಬೆಲೆಯಿರುವುದಿಲ್ಲ. ಮಕ್ಕಳೊಂದಿಗೆ ಎಂದೂ ಸುಳ್ಳಾಡದಿರಿ. ನೀವಾಡುವ ಸುಳ್ಳುಗಳನ್ನು ಗ್ರಹಿಸದಿರುವಷ್ಟು ಮಕ್ಕಳು ದಡ್ಡರಲ್ಲ. ಇಂದಲ್ಲ ನಾಳೆ ಎಲ್ಲ ಸತ್ಯವೂ ಪ್ರಚುರಗೊಳ್ಳುತ್ತದೆ. ನಿಮ್ಮನ್ನು ನೋಡಿ ಸುಳ್ಳು ಹೇಳುವುದನ್ನು ಮಕ್ಕಳು ತಮ್ಮ ನಡವಳಿಕೆಯಲ್ಲಿ ಅಳವಡಿಸಿಕೊಳ್ಳುತ್ತಾರೆ. ಸುಳ್ಳು ಹೇಳುವುದರ ಬಗ್ಗೆ ಅವರಿಗೆ ಇನಿತು ನಾಚಿಕೆಯೂ ಇರುವುದಿಲ್ಲ. ಸಟೆಯಾಡುವುದು, ಅಸಭ್ಯ ನಡವಳಿಕೆ, ವಿಶ್ವಾಸದ್ರೋಹ ಈ ಎಲ್ಲಾ ನಾಣ್ಯಗಳು ಅವರ ದೃಷ್ಟಿಯಲ್ಲಿ ಸಂಪೂರ್ಣವಾಗಿ ಮೌಲ್ಯವನ್ನು ಕಳೆದುಕೊಳ್ಳುತ್ತವೆ. ಮುಂದೆ ತಂಡದಲ್ಲಿ ಕಾರ್ಯ ನಿರ್ವಹಿಸಬೇಕಾಗಿ ಬಂದಾಗ ಈ ಎಲ್ಲ ದುರ್ಗುಣಗಳು ಅವರಿಗೆ ಕಂಟಕಪ್ರಾಯವಾಗುತ್ತವೆ. ಕೆಲವೊಮ್ಮೆ ಈ ಕಾರಣಗಳಿಂದ ಉದ್ಯೋಗ ನಷ್ಟವಾದರೂ ಆಗಬಹುದು.

ನಮ್ಮ ಬಾಲ್ಯದಲ್ಲಿ ಸತ್ಯದ ಮೌಲ್ಯವನ್ನು ಅರುಹಲು ಹಿರಿಯರು ಅದೆಷ್ಟೋ ಕಥೆಗಳನ್ನು ಕಣ್ಣಿಗೆ ಕಟ್ಟುವಂತೆ ಹೇಳುತ್ತಿದ್ದರು. ಪುಣ್ಯಕೋಟಿಯ ಕಥೆ, ಸತ್ಯಹರಿಶ್ಚಂದ್ರನ ಕಥೆ, ಶ್ರೀರಾಮನ ಕಥೆ, ಪಂಚತಂತ್ರದ ಕಥೆಗಳು ಮನಸ್ಸಿನ ಮೇಲೆ ಪರಿಣಾಮಕಾರಿ ಪ್ರಭಾವವನ್ನು ಬೀರುತ್ತಿದ್ದವು. ಆದರೆ ಇಂದಿನ ಮಕ್ಕಳು ಕಲುಷಿತ ವ್ಯವಸ್ಥೆಯಲ್ಲಿ ಆಯ್ಕೆಯನ್ನು ಮಾಡಿಕೊಳ್ಳಬೇಕಾಗಿದೆ. ಇದರ ಅರಿವು ಪೋಷಕರಿಗಿರಬೇಕಾದ್ದು ಆತ್ಯವಶ್ಯ. ಮೌಲ್ಯಗಳ ಸಂಘರ್ಷದ ಇಂದಿನ ದಿನಗಳಲ್ಲಿ ಮಕ್ಕಳಿಗೆ ಉತ್ತಮ ಮಾರ್ಗದರ್ಶನದ ಅವಶ್ಯಕತೆ ಇದೆ. ಆದರೆ ಹಿರಿಯರು ಮಾದರಿಗಳಾಗಿದ್ದರೆ ಮಾತ್ರ ಅವರು ನೀಡುವ ಮಾರ್ಗದರ್ಶನಕ್ಕೆ ಅರ್ಥ ಬರುತ್ತದೆ.

Previous
« Prev Post

No comments:

Post a Comment