Jul 13, 2022

Some Interesting Questions and Answers In Science PART-1| ವಿಜ್ಞಾನ ಕುರಿತ ಕೆಲವು ಆಸಕ್ತಿದಾಯಕ ಪ್ರಶ್ನೋತ್ತರಗಳು ಭಾಗ-1|

Posted by ANIL KNOWN on Jul 13, 2022

 



ನಕ್ಷತ್ರಕ್ಕೂ, ಗ್ರಹಕ್ಕೂ ಇರುವ ವ್ಯತ್ಯಾಸವೇನು?

ನಕ್ಷತ್ರಗಳು (Stars) ಅತ್ಯಂತ ಹೆಚ್ಚು ಉಷ್ಣತೆಯನ್ನು ಹೊಂದಿರುವ ಅನಿಲಗೋಳಗಳು. ಆವುಗಳಿಗೆ ಸ್ವಯಂ ಪ್ರಕಾಶವಿದೆ. ಉದಾಹರಣೆಗೆ ನಮಗೆ ಸಮೀಪವಿರುವ ಸೂರ್ಯನನ್ನೇ ತೆಗೆದುಕೊಳ್ಳಿ, ಅವನ ಮೇಲ್ಮೈ ಉಷ್ಣತೆ 6,000° ಸೆಲ್ಸಿಯಸ್ ನಮ್ಮ ಸೂರ್ಯನಿಗಿಂತ ಸಹಸ್ರಾರು ಪಟ್ಟು ಬಿಸಿಯಿರುವ ನಕ್ಷತ್ರಗಳ ಬಗ್ಗೆ ಊಹಿಸುವುದೂ ಕಷ್ಟ

ಅದೇ ಗ್ರಹಗಳ (Planets) ಗಾತ್ರವು ನಕ್ಷತ್ರದ ಗಾತ್ರದ ಹೋಲಿಕೆಯಲ್ಲಿ ಬಹಳ ಸಣ್ಣದು. ಗ್ರಹಗಳು ಅಂಡಾಕಾರದ ಪಥದಲ್ಲಿ ನಕ್ಷತ್ರಗಳಿಗೆ ಸುತ್ತುಬರುತ್ತವೆ. ಆ ಪಥವನ್ನು ನಾವು ಕಕ್ಷೆ (Orbit) ಎಂದು ಕರೆಯುತ್ತೇವೆ. ಗ್ರಹಕ್ಕೆ ತನ್ನದೇ ಆದ ಪ್ರಕಾಶವಿರುವುದಿಲ್ಲ. ಅದು ತಾನು ಭ್ರಮಿಸುತ್ತಿರುವ ನಕ್ಷತ್ರದ ಬೆಳಕನ್ನು ಪ್ರತಿಬಿಂಬಿಸುತ್ತದೆ.

ನಮ್ಮ ಸೌರವ್ಯೂಹದಲ್ಲಿ 8 ಗ್ರಹಗಳಿವೆ. ಅವುಗಳಲ್ಲಿ ಸೂರ್ಯನಿಂದ ಮೂರನೇ ಗ್ರಹವೇ ಭೂಮಿ, ಹಾಗೆಂದು ಎಲ್ಲ ನಕ್ಷತ್ರಗಳಿಗೂ ಗ್ರಹಗಳಿರಬೇಕೆಂಬುದೇನಿಲ್ಲ.

 

    ಭೂಮಿಯು ತನ್ನ ಅಕ್ಷ (Axis) ದಲ್ಲಿ ಒಂದು ಸುತ್ತು ತಿರುಗಲು ಎಷ್ಟು ಅವಧಿ ಬೇಕು?

ಭೂಮಿಗೆ ಒಮ್ಮೆ ತನ್ನ ಅಕ್ಷದಲ್ಲಿ ಒಂದು ಸುತ್ತು ತಿರುಗಲು 23 ಘಂಟೆಗಳು, 56 ನಿಮಿಷಗಳು ಹಾಗೂ 4 ಸೆಕೆಂಡುಗಳು ಬೇಕು. ನತ್ರಗಳನ್ನು ಆಧಾರವಾಗಿಟ್ಟು ಕೊಂಡು ಇದನ್ನು ನಿರ್ಧರಿಸಲಾಗುತ್ತದೆ. ಒಂದು ನಕ್ಷತ್ರ ಇಂದು ದಕ್ಷಿಣದಲ್ಲಿ ಕಾಣಿಸಿದರೆ, ನಾಳೆ ಅದೇ ಸ್ಥಳದಲ್ಲಿ ಕಾಣಿಸಲು ತಗಲುವ ಸಮಯವನ್ನು ಒಂದು ದಿನವೆಂದು ಲೆಕ್ಕ ಹಾಕಲಾಗುತ್ತದೆ. ಆದರೆ ನಮ್ಮ ಅನುಕೂಲಕ್ಕನುಸಾರ ನಮ್ಮ ದಿನದಲ್ಲಿ 24 ಘಂಟೆಗಳಿವೆ. ಅಂದರೆ ಪ್ರತಿನಿತ್ಯ ಒಂದು ನಕ್ಷತ್ರ ನಮ್ಮ ಲೆಕ್ಕಕ್ಕೆ 4 ನಿಮಿಷ ತಡವಾಗಿ ಉದಯಿಸುತ್ತದೆ.

 

    ಭೂಮಿಗೆ ಸೂರ್ಯನ ಸುತ್ತ ಒಮ್ಮೆ ಭ್ರಮಿಸಲು ಎಷ್ಟು ಸಮಯ ಬೇಕು?

ಭೂಮಿಯು ಸೂರ್ಯನ ಸುತ್ತ ಒಮ್ಮೆ ಭ್ರಮಿಸಲು 365 ದಿನಗಳು, 6 ಘಂಟೆಗಳು, 9 ನಿಮಿಷಗಳು ಮತ್ತು 10 ಸೆಕೆಂಡುಗಳನ್ನು ತೆಗೆದುಕೊಳ್ಳುತ್ತದೆ. ಇದನ್ನೇ ನಾವು ಒಂದು ವರ್ಷವೆಂದು ಪರಿಗಣಿಸುತ್ತೇವೆ. ಆದರೆ ಇದು ನಮ್ಮ ವಾರ್ಷಿಕ ಪಂಚಾಂಗದಲ್ಲಿ ಎಷ್ಟೊಂದು ಸಮಸ್ಯೆಗಳನ್ನು ಸೃಷ್ಟಿ ಮಾಡಿದೆ, ಗೊತ್ತೆ? ನಾವು ಬಳಸುವ 365 ದಿನಗಳ ವರ್ಷ ನಿಜವಾದ ವರ್ಷದ ಲೆಕ್ಕಕ್ಕಿಂತ ಕಡಿಮೆ. ನಾವು ಇದನ್ನು ಪರಿಗಣಿಸದೆ ಹೋದರೆ 4 ವರ್ಷಗಳಲ್ಲಿ ಒಂದು ದಿನ ಹೆಚ್ಚಾಗುತ್ತದೆ. ಹೀಗಾಗಿಯೇ ಪ್ರತಿ 4 ವರ್ಷಗಳಿಗೊಮ್ಮೆ ನಮ್ಮ ವರ್ಷಕ್ಕೆ ಒಂದು ದಿನವನ್ನು ಕೂಡಿಸಿ ಅಧಿಕ ವರ್ಷವೆಂದು ಕರೆಯುತ್ತೇವೆ. ಆ ವರ್ಷ ಫೆಬ್ರವರಿ ತಿಂಗಳಿಗೆ 28ರ ಬದಲಾಗಿ 29 ದಿನಗಳಿರುತ್ತವೆ. ಹೀಗಾಗಿ ಅಧಿಕ ವರ್ಷಕ್ಕೆ 366 ದಿನಗಳು,

ಯಾವುದಾದರೂ ಒಂದು ವರ್ಷ ಅಧಿಕ ವರ್ಷವೇ ಎಂದು ನಿರ್ಧರಿಸಲು ನೀವು ಆ ವರ್ಷಕ್ಕೆ 4 ರಿಂದ ಭಾಗಿಸಿದರೆ ಸಾಕು. ಶೇಷ ಉಳಿಯದಿದ್ದರೆ ಅದು ಅಧಿಕ ವರ್ಷ. 2004, 2008, 2012 - ಇವೆಲ್ಲವೂ ಅಧಿಕ ವರ್ಷಗಳು. ಆದರೆ 100 ರಿಂದ ಭಾಗಿಸಲ್ಪಡುವ ವರ್ಷಗಳು ಮಾತ್ರ ಅಧಿಕ ವರ್ಷಗಳಲ್ಲ! 400 ರಿಂದ ಭಾಗಿಸಲ್ಪಟ್ಟರೆ ಮಾತ್ರ ಅದು ಅಧಿಕ ವರ್ಷ. ಹೀಗೆ 2000 ಅಧಿಕ ವರ್ಷ. ಆದರೆ 1900, 2100 ಅಧಿಕ ವರ್ಷಗಳಲ್ಲ.

 

   ಸೂರ್ಯನು ಪೂರ್ವದಲ್ಲಿ ಉದಯಿಸಿ, ಪಶ್ಚಿಮದಲ್ಲಿ ಮುಳುಗುವುದೇಕೆ?

ಭೂಮಿಯು ತನ್ನ ಅಕ್ಷದಲ್ಲಿ ಪಶ್ಚಿಮದಿಂದ ಪೂರ್ವಕ್ಕೆ ತಿರುಗುವುದು. ಇದರಿಂದಾಗಿ ಇಡೀ ಆಕಾಶವು ನಮಗೆ ಪೂರ್ವದಿಂದ ಪಶ್ಚಿಮಕ್ಕೆ ಚಲಿಸುತ್ತಿರುವಂತೆ ಭಾಸವಾಗುವುದು. ಆದರೆ ಭೂಮಿಯು ಸ್ವಲ್ಪ ಓರೆಯಾಗಿ ತಿರುಗುವುದರಿಂದ, ಸೂರ್ಯನು ಭೂಮಧ್ಯರೇಖೆಗೆ ನೇರವಾಗಿ ಚಲಿಸದೆ ಓರೆಯಾಗಿ ಚಲಿಸಿದಂತೆ ಭಾಸವಾಗುತ್ತದೆ. ನಮಗೆ ಇದರಿಂದ ಸೂರ್ಯ ಪೂರ್ವದಲ್ಲಿ ಹುಟ್ಟಿ ಪಶ್ಚಿಮದಲ್ಲಿ ಮುಳುಗಿದಂತೆ ಭಾಸವಾಗುತ್ತದೆ. ವಾಸ್ತವವಾಗಿ ಸೂರ್ಯ ಇದ್ದಲ್ಲೇ ಇರುತ್ತಾನೆ ಭೂಮಿ ಸೂರ್ಯನ ಸುತ್ತಾ ತಿರುಗುತ್ತ ತನ್ನ ಅಕ್ಷದ ಮೇಲೆ ತಿರುಗುವುದರಿಂದ ಹೀಗೆ ಕಾಣುತ್ತದೆ.

Newest
You are reading the newest post

No comments:

Post a Comment