May 17, 2021

ಭಾರತದಲ್ಲಿ ಭೂ ಸುಧಾರಣೆಗಳು ಬೆಳೆದು ಬಂದ ಹಾದಿ|Land reforms in India|Essays for PSI Exam|PART-1|

Posted by ANIL KNOWN on May 17, 2021

ಕೃಷಿ ಕ್ಷೇತ್ರದಲ್ಲಿನ ಸಾಂಸ್ಥಿಕ ಅಂಶಗಳಲ್ಲಿ ಬದಲಾವಣೆ ತರಲು ಸರ್ಕಾರ ಯತ್ನಿಸುವುದನ್ನು 'ಭೂ ಸುಧಾರಣೆ' ಎನ್ನಬಹುದಾಗಿದೆ. ಭೂ ಸುಧಾರಣೆಯಲ್ಲಿ ಸರ್ಕಾರ ಭೂ ಹಿಡುವಳಿಗಳ ಸ್ವರೂಪವನ್ನು ಮಾರ್ಪಾಟು ಮಾಡಿ ಒಕ್ಕಲುತನದ ಸಮಸ್ಯೆಗಳನ್ನು ನಿವಾರಿಸಿ ಕೃಷಿ ಪ್ರಗತಿಗೆ ಶ್ರಮಿಸುತ್ತದೆ. ಭಾರತದಲ್ಲಿ ಭೂ ಸುಧಾರಣೆ ಎಂದರೆ ಸಾಂಸ್ಥಿಕ ಸುಧಾರಣೆಯಾಗಿದೆ. ಭಾರತಕ್ಕೆ ಸ್ವಾತಂತ್ರ್ಯ ಬರುತ್ತಲೇ ಭೂ ಸುಧಾರಣೆಯ ಅಗತ್ಯವನ್ನು ಮನಗಣಿಸಲಾಯಿತು. ಹಾಗೂ 1951 ರಲ್ಲಿ ಭೂ ಸುಧಾರಣೆಯನ್ನು ಒಂದು ಅಧಿಕೃತ ಕಾರ್ಯಕ್ರಮವನ್ನಾಗಿ ಜಾರಿಗೆ ತರಲಾಯಿತು. 



ಭೂ ಸುಧಾರಣೆಯ ಧ್ಯೇಯಗಳು:

 ಭಾರತದಲ್ಲಿ ಭೂ ಸುಧಾರಣೆ ಕಾರ್ಯಕ್ರಮವನ್ನು ಹಲವಾರು ಧ್ಯೇಯಗಳನ್ನಿರಿಸಿಕೊಂಡು ಜಾರಿಗೆ ತರಲಾಗಿದೆ.

1) ಕೃಷಿ ಭೂಮಿಯನ್ನು ಸಮಾನವಾಗಿ ವಿತರಿಸಿ ಕೃಷಿಕರಿಗೆ ಸಾಮಾಜಿಕ ಮತ್ತು ಆರ್ಥಿಕ ನ್ಯಾಯವನ್ನು ದೊರಕಿಸಿಕೊಡುವುದು.

2) ಭೂ ಹಿಡುವಳಿ ಸಂದರ್ಭದಲ್ಲಿ ಮಧ್ಯವರ್ತಿಗಳನ್ನು ನಿರ್ಮೂಲನ ಮಾಡುವುದು. 

3) ಸಾಗುವಳಿದಾರನಿಗೆ ಹಿಡುವಳಿ ಭದ್ರತೆ ನೀಡುವುದು. 

4) ಗೇಣಿಯ ಶಾಸನಾತ್ಮಕ ನಿರ್ಧಾರ ಹಾಗೂ ಅಕ್ರಮ ಗೇಣಿ ವಸೂಲಿ ಮತ್ತು ಭೂಮಿ ಸ್ವಾಧೀನಪಡಿಸಿಕೊಳ್ಳುವುದನ್ನು ನಿರ್ಬಂಧಿಸುವುದು.

5) ಭೂಮಿಯು ವಿವಿಧ ಭಾಗಗಳಾಗಿ ವಿಭಜನೆಯಾಗುವುದು ಮತ್ತು ಛಿದ್ರೀಕರಣವನ್ನು ತಡೆಗಟ್ಟಿ ಆರ್ಥಿಕ ಹಿಡುವಳಿಗಳನ್ನು ನಿರ್ಮಿಸುವುದು.

ಈ ರೀತಿ ಹಲವಾರು ಧೈಯೋದ್ದೇಶಗಳನ್ನು 'ಭೂ ಸುಧಾರಣೆ' ಹೊಂದಿದೆ.

ಭೂ ಸುಧಾರಣಾ ಕ್ರಮಗಳು:

ಭಾರತದಲ್ಲಿ ಜಾರಿಗೆ ಬಂದಿರುವ ಭೂ ಸುಧಾರಣಾ ಕ್ರಮಗಳು ಹಲವಾರು ರೀತಿಯಲ್ಲಿ ಕೃಷಿಕರಿಗೆ ಉಪಯುಕ್ತವಾಗಿದೆ. ಈ ಸುಧಾರಣಾ ಕ್ರಮಗಳನ್ನು ಅನುಸರಿಸಿ ರೈತರಿಗೆ ಅನುಕೂಲ ಮಾಡಿಕೊಡಲಾಗಿದೆ. ಇವುಗಳಲ್ಲಿ ಪ್ರಮುಖವಾದ ಕ್ರಮಗಳನ್ನು ಈ ಕೆಳಗಿನಂತೆ ವಿವರಿಸಬಹುದಾಗಿದೆ. 

1) ಮಧ್ಯಸ್ಥಗಾರರ ನಿರ್ಮೂಲನೆ:

 ಭಾರತಕ್ಕೆ ಸ್ವಾತಂತ್ರ್ಯ ಬರುವ ವೇಳೆಯಲ್ಲಿ ಕೃಷಿ ಕ್ಷೇತ್ರ ಅಸ್ತವ್ಯಸ್ತಗೊಂಡಿತ್ತು. ಕೃಷಿ ಭೂಮಿ ಮಧ್ಯವರ್ತಿಗಳ ಅಧೀನದಲ್ಲಿತ್ತು. ಭೂ ಮಾಲೀಕರು ಒಬ್ಬರಾಗಿದ್ದರೆ ನಿಜವಾಗಿ ಅದನ್ನು ಉಳುವವ ಇನ್ನೊಬ್ಬನಾಗಿದ್ದ. ಇದರಿಂದಾಗಿ ಅನೇಕ ಅನಿಷ್ಟ ಪದ್ಧತಿಗಳು ಜಾರಿಯಲ್ಲಿದ್ದವು, ಹಾಗೂ ಕೃಷಿ ಉತ್ಪಾದಕತೆ ಕುಂಠಿತಗೊಂಡಿತ್ತು. ಆಗ ಅಸ್ಥಿತ್ವದಲ್ಲಿದ್ದ ಪ್ರಮುಖ ಮಧ್ಯವರ್ತಿ ವ್ಯವಸ್ಥೆಗಳೆಂದರೆ, 

ಎ) ರೈತವಾರಿ ಪದ್ಧತಿ:

 ಈ ಪದ್ದತಿಯನ್ನು 18 ನೇ ಶತಮಾನದ ಕೊನೆಯಲ್ಲಿ ಸರ್.ಥಾಮಸ್‌ ಮನ್ರೋ ಹಾಗೂ ಕ್ಯಾಪ್ಟನ್ ಅಲೆಕ್ಸಾಂಡರ್ ರೀಡ್ ಅವರು ಪರಿಚಯಿಸಿದರು. ಥಾಮಸ್ ಮನ್ರೋ ಗವರ್ನರ್ ಆದ ಸಂದರ್ಭದಲ್ಲಿ 1820 ರಲ್ಲಿ ಮದ್ರಾಸ್ ಪ್ರಾಂತ್ಯದಲ್ಲಿ ಈ ಪದ್ದತಿಯನ್ನು ಜಾರಿಗೆ ತಂದರು. ರೈತವಾರಿ ಪದ್ಧತಿಯಲ್ಲಿ ಯಾವುದೇ ಮಧ್ಯವರ್ತಿಗಳಿರಲಿಲ್ಲ ಹಾಗೂ ಭೂಮಿಯನ್ನು ಮಾರಲು ಅಥವಾ ವರ್ಗಾಯಿಸಲು ಪೂರ್ಣ ಹಕ್ಕುಗಳಿರುತ್ತಿದ್ದವು. ಈ ಪದ್ದತಿಯಲ್ಲಿ ಸಾಗುವಳಿದಾರರು ಸರ್ಕಾರದಿಂದ ನೇರವಾಗಿ ಕೃಷಿ ಭೂಮಿಯನ್ನು ಗೇಣಿಗೆ ಪಡೆದು ಸರ್ಕಾರಕ್ಕೆ ಅವರೇ ನೇರವಾಗಿ ಭೂ ಕಂದಾಯವನ್ನು ಪಾವತಿ ಮಾಡುತ್ತಿದ್ದರು.

ಬಿ) ಖಾಯಂ ಜಮೀನ್ದಾರಿ ಪದ್ದತಿ: 

ಈ ಪದ್ದತಿಯನ್ನು ಲಾರ್ಡ್ ಕಾರ್ನ್‌ವಾಲೀಸ್‌ನು 1793ರಲ್ಲಿ ಬಂಗಾಳದಲ್ಲಿಜಾರಿಗೆ ತಂದಿದ್ದ. ಈ ಪದ್ದತಿಯಲ್ಲಿ ಶೇ.45 ರಷ್ಟು ಭೂಮಿ, ಭೂ ಮಾಲೀಕರ ಹಿಡಿತಕ್ಕೊಳಪಟ್ಟಿತ್ತು. 

ಈ ಪದ್ದತಿಯಲ್ಲಿ ಸರ್ಕಾರ ಮತ್ತು ಸಾಗುವಳಿದಾರರ ನಡುವೆ ಭೂ ಮಾಲೀಕರು ಮಧ್ಯವರ್ತಿಗಳಾಗಿ ಕೆಲಸ ನಿರ್ವಹಿಸುತ್ತಿದ್ದರು. ಅಂದರೆ ಸರ್ಕಾರದ ಒಡೆತನದಲ್ಲಿದ್ದ ಭೂಮಿಯನ್ನು ಒಬ್ಬ ಅಥವಾ ಕೆಲವು ಮಂದಿ ಸಂಯುಕ್ತ ಭೂ ಮಾಲೀಕರಿಗೆ ಕೊಡಲ್ಪಡುತ್ತಿತ್ತು. ಈ ಭೂಮಿಯನ್ನು ಜಮೀನ್ದಾರರು ಸಾಗುವಳಿದಾರರಿಗೆ ಗೇಣಿಗೆ ಕೊಟ್ಟು ಬೆಳೆದ ಬೆಳೆಯ ಕೆಲ ಭಾಗವನ್ನು ಗೇಣಿ ರೂಪದಲ್ಲಿ ಪಡೆಯುತ್ತಿದ್ದರು. ಅವರು ಸಂಗ್ರಹಿಸಲಾಗಿದ್ದ ಕಂದಾಯದಲ್ಲಿ 10/11 ಭಾಗವನ್ನು ಸರ್ಕಾರದ ಪಾಲನ್ನಾಗಿ ಸಂಗ್ರಹಿಸಿ ಉಳಿದ 1 ಭಾಗವನ್ನು ಜಮೀನ್ದಾರರಿಗೆ ನೀಡಲಾಗುತ್ತಿತ್ತು. 

ಸಿ) ಮಹಲ್ವಾರಿ ಪದ್ಧತಿ:

 ಲಾರ್ಡ್ ವಿಲಿಯಂ ಬೆಂಟಿಂಗ್ ವೈಸ್‌ರಾಯ್ ಆಗಿದ್ದಾಗ 'ಜೇಮ್ಸ್ ಥಾಮ್ಸನ್' ವಾಯುವ್ಯ ಪ್ರಾಂತ್ಯದಲ್ಲಿ ಮಹಲ್ವಾರಿ ಪದ್ದತಿಯನ್ನು ಜಾರಿಗೆ ತಂದನು . ಈ ಪದ್ದತಿಯಲ್ಲಿ ಮಹಲ್ ಅಥವಾ ಹಳ್ಳಿಯನ್ನು ಒಂದು ಕಂದಾಯ ಘಟಕವೆಂದು ಪರಿಗಣಿಸಿ ಆ ಮಹಲ್‌ನ ಎಲ್ಲಾ ಭೂ ಮಾಲೀಕರು ಸಾಮೂಹಿಕವಾಗಿ ಕಂದಾಯ ನೀಡಿಕೆಗೆ ಜವಾಬ್ದಾರರಾಗಿರುವಂತೆ ಮಾಡಲಾಯಿತು. ಈ ಪದ್ದತಿಯಲ್ಲಿ ಒಟ್ಟು ಉತ್ಪನ್ನದ ಶೇ.55 ರಷ್ಟನ್ನು ಗೇಣಿ ರೂಪದಲ್ಲಿ ನೀಡಬೇಕಾಗಿತ್ತು. ಈ ರೀತಿ ಬೇರೆ ಬೇರೆ ರೂಪತಾಳಿದ್ದ ಮಧ್ಯಸ್ಥಗಾರಿಕೆ ಕೃಷಿ ಉತ್ಪಾದನೆಯನ್ನು ಕುಂಠಿತಗೊಳಿಸಿತ್ತು. ಭೂ ಒಡೆಯ ಒಬ್ಬನಾದರೆ ಅದರ ಸಾಗುವಳಿದಾರ ಮತ್ತೊಬ್ಬನಿರುತ್ತಿದ್ದ. ಇಂತಹ ದೋಷಪೂರ್ಣ ವ್ಯವಸ್ಥೆಯನ್ನು ಸರಿಪಡಿಸಲು ಸ್ವಾತಂತ್ರ್ಯಾ ನಂತರ ಸರ್ಕಾರ ಮುಂದಾಯಿತು. 

2) ಗೇಣಿ ಪದ್ದತಿಯ ಸುಧಾರಣೆ: 

ಭೂ ಮಾಲೀಕರಿಂದ ಸಾಗುವಳಿಗಾಗಿ ಭೂಮಿಯನ್ನು ಪಡೆಯುವವರಿಗೆ ಗೇಣಿದಾರರು ಎಂದು ಹೆಸರು. ಗೇಣಿದಾರರಲ್ಲಿ ಶಾಶ್ವತ ಹಕ್ಕಿನ ಗೇಣಿದಾರರು ಮತ್ತು ತಾತ್ಕಾಲಿಕ ಹಕ್ಕಿನ ಗೇಣಿದಾರರು ಎಂಬ ಎರಡು ಪ್ರಕಾರಗಳಿವೆ. ಭೂ ಮಾಲೀಕರು ಅಧಿಕ ಗೇಣಿಯನ್ನು ನಿರ್ಧರಿಸುವುದರ ಮೂಲಕ ಗೇಣಿದಾರರನ್ನು ಶೋಷಣೆಗೆ ಒಳಪಡಿಸುತ್ತಿದ್ದರು. ಅಲ್ಲದೆ ಗೇಣಿದಾರರು ಸಾಗುವಳಿ ಭೂಮಿಯ ಅಭಿವೃದ್ದಿಯ ಜೀವನ ಮಟ್ಟದಲ್ಲಿ ಪೋಷಿಸಲು ಸಾಕಾಗುವಷ್ಟು ಆದಾಯವನ್ನು ತರುವ ಕನಿಷ್ಟ ಪ್ರಮಾಣದ ಭೂ ಹಿಡುವಳಿಯನ್ನು “ಆರ್ಥಿಕ ಹಿಡುವಳಿ ” ಎಂದು ಕರೆಯಲಾಗುತ್ತದೆ . ಆರ್ಥಿಕ ಹಿಡುವಳಿಗಳ ನಿರ್ಮಾಣದ ಅಗತ್ಯತೆಯನ್ನು ಮನಗಂಡು ಅನೇಕ ರಾಜ್ಯಸರ್ಕಾರಗಳು ಕಾನೂನನ್ನು ಜಾರಿಗೊಳಿಸಿ ಆರ್ಥಿಕ ಹಿಡುವಳಿಗಳ ನಿರ್ಮಾಣಕ್ಕೆ ಪ್ರಯತ್ನಿಸಿವೆ. 

3) ಸಹಕಾರಿ ಬೇಸಾಯ ಪದ್ಧತಿ ಜಾರಿಗೆ:

ಭಾರತದಲ್ಲಿ ಕೃಷಿ ಭೂಮಿ ವಿಭಾಗವಾಗುವುದು ಮತ್ತು ಛಿದ್ರೀಕರಣಗೊಳ್ಳುವುದನ್ನು ತಡೆಗಟ್ಟಲು ಸಹಕಾರಿ ಬೇಸಾಯ ಪದ್ಧತಿ ಅತ್ಯುತ್ತಮ ಮಾರ್ಗ ಎಂದು ಪರಿಗಣಿಸಲಾಗಿದೆ. ದೇಶದಲ್ಲಿ ಶೇಕಡ 76.4 ರಷ್ಟು ಭೂ ಹಿಡುವಳಿಗಳು ಎರಡು ಎಕರೆಗಿಂತ ಕಡಿಮೆ ಕೃಷಿಭೂಮಿ ಹೊಂದಿವೆ. ಈ ಹಿನ್ನೆಲೆಯಲ್ಲಿ ಸಣ್ಣ ಸಣ್ಣ ಭೂ ಹಿಡುವಳಿಗಳನ್ನು ಹೊಂದಿರುವ ರೈತರು ತಮ್ಮ ತುಂಡು ಭೂಮಿಗಳನ್ನು ಒಟ್ಟುಗೂಡಿಸಿ ಸಾಂಘಿಕವಾಗಿ ಉಳುಮೆ ಮಾಡುವುದು ಸೂಕ್ತವಾಗಿದೆ. ಸಹಕಾರಿ ಬೇಸಾಯ ಪದ್ಧತಿಗೆ ಪ್ರೋತ್ಸಾಹ ನೀಡುವುದು ಭಾರತದ ಭೂ ಸುಧಾರಣಾ ಕಾರ್ಯಕ್ರಮದ ಒಂದು ಪ್ರಮುಖ ಗುರಿಯಾಗಿದೆ.

 4) ಗೇಣಿ ನಿಯಂತ್ರಣ ಕ್ರಮ: 

ಗೇಣಿದಾರರು ತಾವು ಬೆಳೆದ ಬೆಳೆಯಲ್ಲಿ ಅರ್ಧಕ್ಕಿಂತ ಹೆಚ್ಚಿನ ಭಾಗವನ್ನು ಗೇಣಿ ರೂಪದಲ್ಲಿ ಭೂ ಮಾಲೀಕರಿಗೆ ಕೊಡಬೇಕಾಗಿದ್ದಿತು. ಅನೇಕ ಸಂದರ್ಭದಲ್ಲಿ ಗೇಣಿದಾರ ಶೋಷಣೆಗೆ ಒಳಗಾಗುತ್ತಿದ್ದ, ಇದರಿಂದಾಗಿ ಕೇಂದ್ರ ಸರ್ಕಾರ ಗೇಣಿಯು ಬೆಳೆಯ ಶೇಕಡ 20 ಅಥವಾ 25ಕ್ಕಿಂತ ಹೆಚ್ಚಿರಬಾರದೆಂದು ತಿಳಿಸಿ ರಾಜ್ಯ ಸರ್ಕಾರಗಳಿಗೆ ಮಾರ್ಗದರ್ಶಿ ಸೂತ್ರಗಳನ್ನು ನೀಡಿತು. ಆ ಮೇರೆಗೆ ಅನೇಕ ರಾಜ್ಯ ಸರ್ಕಾರಗಳು ಗೇಣಿ ನಿಯಂತ್ರಣ ಕಾನೂನುಗಳನ್ನು ಜಾರಿಗೆ ತಂದವು. 

5) ಹಿಡುವಳಿಯ ಭದ್ರತೆ ನೀಡುವುದು: 

ಗೇಣಿದಾರನಿಗೆ ತಮ್ಮ ಹಿಡುವಳಿಯ ಭದ್ರತೆ ಇಲ್ಲವೆಂದಾದಲ್ಲಿ ಅವನು ಭೂಮಿಯ ಅಭಿವೃದ್ಧಿಯಲ್ಲಿ ಆಸಕ್ತಿ ಹೊಂದಲಾರ. ಈ ಹಿನ್ನೆಲೆಯಲ್ಲಿ ಗೇಣಿದಾರರಿಗೆ ಹಿಡುವಳಿ ಭದ್ರತೆ ನೀಡುವತ್ತ ಸರ್ಕಾರ ಗಮನ ಹರಿಸಿತು. ಗೇಣಿದಾರರನ್ನು ಸಾಗುವಳಿಯಿಂದ ಹೊರದೂಡದಂತೆ ತಡೆಗಟ್ಟಲು, ಸ್ವತಃ ಸಾಗುವಳಿಗಾಗಿ ಮಾತ್ರ ಭೂ ಮಾಲೀಕರು ಭೂಮಿಯನ್ನು ವಾಪಸ್ಸು ಪಡೆಯಲು ಮತ್ತು ಭೂಮಿಯನ್ನು ವಾಪಸ್ಸು ಪಡೆದಾಗ ಗೇಣಿದಾರರಿಗೆ ಸ್ವಲ್ಪ ಪ್ರದೇಶ ಬಿಡುವಂತೆ ಮಾಡಲು ಸರ್ಕಾರ ಶಾಸನಗಳನ್ನು ಜಾರಿಗೆ ತಂದಿತು. ಇದರಿಂದಾಗಿ ಗೇಣಿದಾರರಿಗೆ ಸ್ವಲ್ಪ ಮಟ್ಟಿನ ಭದ್ರತೆ ದೊರೆತಂತಾಯಿತು. 

6) ಭೂ ಒಡೆತನದ ಹಕ್ಕು: 

ಈ ನೀತಿಯ ಮೂಲಕ ಸಾಧ್ಯವಿದ್ದಲ್ಲಿ, ಗೇಣಿದಾರರೇ ಅವರು ಸಾಗುವಳಿ ಮಾಡುತ್ತಿರುವ ಭೂಮಿಯ ಒಡೆಯರಾಗಲು ಅವಕಾಶ ಕಲ್ಪಿಸಲಾಗಿದೆ. “ಉಳುವವನೇ ಹೊಲದೊಡೆಯ” ಕಾನೂನನ್ನು ಜಾರಿಗೊಳಿಸಿ ಉಳುವವನಿಗೆ ಭೂಮಿಯ ಒಡೆತನವನ್ನು ನೀಡಲು ಪ್ರಯತ್ನಿಸಲಾಗಿದೆ. ಇದರಿಂದಾಗಿ ಕರ್ನಾಟಕ, ಮಹಾರಾಷ್ಟ್ರ, ಕೇರಳ, ಗುಜರಾತ್ ಮುಂತಾದ ರಾಜ್ಯಗಳಲ್ಲಿ ಅಸಂಖ್ಯ ರೈತರು ಭೂ ಒಡೆಯರಾಗುವುದು ಸಾಧ್ಯವಾಯಿತು. 

7) ಭೂ ಹಿಡುವಳಿಗಳ ಮೇಲೆ ಗರಿಷ್ಟ ಮಿತಿ ಏರಿಕೆ:

ಸಾಗುವಳಿದಾರರು ಹೊಂದುವ ಭೂಮಿಯ ಮೇಲೆ ಒಂದು ಪರಮಾವಧಿ ಮಿತಿಯನ್ನು ಹೇರುವ ಕ್ರಮವನ್ನು ಭೂ ಹಿಡುವಳಿಗಳ ಗರಿಷ್ಟ ಮಿತಿ ಹೇರಿಕೆ ಎನ್ನಲಾಗುವುದು. ಇದು ಭಾರತದಲ್ಲಿ ಜಾರಿಗೊಂಡ ಭೂ ಸುಧಾರಣಾ ಕಾರ್ಯಕ್ರಮಗಳ ಒಂದು ವಿಶಿಷ್ಟ ಅಂಶವಾಗಿದೆ. ಭೂ ಮಿತಿ ಕಾನೂನನ್ನು 1950 ರ ನಂತರ ಎಲ್ಲಾ ರಾಜ್ಯ ಸರ್ಕಾರಗಳು ಜಾರಿಗೆ ತಂದಿವೆ. ಭೂ ಒಡೆತನದಲ್ಲಿರುವ ಅಸಮಾನತೆಯನ್ನು ತೊಲಗಿಸಲು ಮತ್ತು ಸ್ವ ಉದ್ಯೋಗಾವಕಾಶಗಳನ್ನು ಸೃಷ್ಟಿಸಲು ಭೂಮಿತಿ ಕಾನೂನನ್ನು ಜಾರಿಗೊಳಿಸಲಾಗಿದೆ. ಭೂಮಿಯ ಫಲವತ್ತತೆ , ನೀರಾವರಿ ಸೌಲಭ್ಯಗಳು , ಭೂಮಿಯ ಸ್ಥಾನೀಕರಣ ಮುಂತಾದ ಅಂಶಗಳ ಆಧಾರದ ಮೇಲೆ ವಿವಿಧ ರಾಜ್ಯಗಳು ಭೂಮಿತಿ ಕಾನೂನನ್ನು ಜಾರಿಗೊಳಿಸಿದ್ದು ಇದು ರಾಜ್ಯದಿಂದ ರಾಜ್ಯಕ್ಕೆ ವ್ಯತ್ಯಾಸ ಹೊಂದಿದೆ. 1950 ರಲ್ಲಿ ಜಾರಿಗೊಂಡ ಭೂಮಿತಿ ಕಾನೂನನ್ನು ಕೇಂದ್ರೀಯ ಭೂ ಸುಧಾರಣಾ ಆಯೋಗದ ಶಿಫಾರಸ್ಸಿನ ಆಧಾರದ ಮೇಲೆ 1972 ರಲ್ಲಿ ಮಾರ್ಪಾಟುಗೊಳಿಸಲಾಗಿದೆ. 

8) ಹಿಡುವಳಿಗಳ ಘನೀಕರಣ: 

ಹಿಡುವಳಿಗಳ ಘನೀಕರಣ ಎಂದರೆ ಛಿದ್ರಗೊಂಡ ಭೂಮಿಯನ್ನು ಒಗ್ಗೂಡಿಸುವುದಾಗಿದೆ. ಭಾರತದಲ್ಲಿ ಉತ್ತರಾಧಿಕಾರದ ಕಾನೂನಿನ ಅಸ್ತಿತ್ವ, ಜನಸಂಖ್ಯೆಯ ಮಿತಿಮೀರಿದ ಬೆಳವಣಿಗೆ, ಅವಿಭಕ್ತ ಕುಟುಂಬ ಪದ್ದತಿಯ ವಿನಾಶ, ರೈತರ ಋಣಬಾಧೆ, ಗೇಣಿಪದ್ದತಿ ಮುಂತಾದ ಕಾರಣಗಳಿಂದ ಭೂಮಿ ಹರಿದು ಹಂಚಿ ಹೋಗಿದೆ. ಇವುಗಳನ್ನು ಒಂದುಗೂಡಿಸುವ ಕೆಲಸಕ್ಕೆ ಸರ್ಕಾರ ಮುಂದಾಗಿ, ಅನೇಕ ಕಾರ್ಯಕ್ರಮಗಳನ್ನು ಕೈಗೊಂಡಿದೆ. ಅನೇಕ ರಾಜ್ಯಗಳು ಭೂ ಹಿಡುವಳಿಗಳ ಕ್ರೋಢೀಕರಣಕ್ಕಾಗಿ ಶಾಸನಗಳನ್ನು ರಚಿಸಿವೆ.

Previous
« Prev Post

No comments:

Post a Comment