Jul 12, 2022

Theory of Evolution - Interesting Facts PART -1| ವಿಕಾಸವಾದದ ಕುತೂಹಲಕರ ಸಂಗತಿಗಳು ಭಾಗ - 1|

Posted by ANIL KNOWN on Jul 12, 2022

 


ವಿಕಾಸವಾದದ ಕಥೆ

ಭೂಮಿಯ ಮೇಲಿರುವ ಪ್ರತಿಯೊಂದು ಸಜೀವಿಯು ಒಂದು ಸಾಮಾನ್ಯ ಹಿರಿಯ ಜೀವಿಯಿಂದ ಉಗಮಿಸಿದೆ. ಸಜೀವಿಗಳು ಬಗೆಬಗೆಯ ಗುಣಾಣುಗಳನ್ನು (genes) ಹೊಂದಿದ್ದರೂ ಆ ಎಲ್ಲ ಗುಣುಗಳ ಮೂಲವಿನ್ಯಾಸ ಒಂದು ಆಗಿದೆ. ಬಹುಶಃ ನಮ್ಮೆಲ್ಲರ ಆ ಅತ್ಯಂತ ಹಿರಿಯ ಜೀವಿ ಒಂದು ಬ್ಯಾಕ್ಟೀರಿಯ ಕೋಶವಿರಬೇಕು. ಆದರೆ ಒಂದು ಬ್ಯಾಕ್ಟೀರಿಯ ಕೋಶ ಇಷ್ಟೆಲ್ಲ ವಿಭಿನ್ನವಾದ ಜೀವಿಗಳು ಅಂದರೆ ಶಾರ್ಕ್‌ಗಳು, ಗುಲಾಬಿ ಹೂ, ಕುಂಬಳಕಾಯಿ ಮತ್ತು ನಾಯಿಗಳನ್ನು ಸೃಷ್ಟಿಸಲು ಹೇಗೆ ಸಾಧ್ಯ? ಅಲ್ಲವೇ!! ಇದಕ್ಕೆ ಉತ್ತರ ಹುಡುಕಿದರೆ ತಿಳಿಯುವುದು, ಸಜೀವಿಗಳು ನಿಧಾನವಾಗಿ ಬದಲಾವಣೆಗೊಳ್ಳುತ್ತವೆ. ಅಂದರೆ ವಿಕಾಸ ಹೊಂದುತ್ತವೆ. ಮಿಲಿಯಗಟ್ಟಲೆ ವರ್ಷಗಳ ಅವಧಿಯಲ್ಲಿ ಉಂಟಾದ ಸಣ್ಣ ಸಣ್ಣ ಬದಲಾವಣೆಗಳು ತೀರಾ ಹೊಸ ಪ್ರಾಣಿಗಳ ಉಗಮಕ್ಕೆ ಕಾರಣವಾಗಿವೆ.

ಅಂತಹ ಕೆಲವೊಂದು ವಿಕಾಸವಾದ ಜೀವಿಗಳ ಸ್ಪಷ್ಟತೆ ಇಲ್ಲಿದೆ.

 

ಚೊಂದೆಕಪ್ಪೆಯಿಂದ ಪ್ರೌಢಕಪ್ಪೆಯ ತನಕ

 

ಕಪ್ಪೆಗಳ ಹಿರಿಯರು ಮೀನುಗಳು. ಸುಮಾರು 300 ಮಿಲಿಯ ವರ್ಷಗಳ ಹಿಂದೆ ಶಕ್ತಿಯುತ ಈಜುರೆಕ್ಕೆಗಳನ್ನು ಹೊಂದಿದ್ದ ಒಂದು ಪ್ರಕಾರದ ಮೀನು ನೀರಿನಿಂದ ಹೊರಗೆ, ನೆಲದ ಮೇಲೆ ತನ್ನ ದೇಹವನ್ನು ಎಳೆಯುತ್ತ ಮುನ್ನುಗ್ಗಲು ಆರಂಭಿಸಿತು. ಇದನ್ನೇ ಕಪ್ಪೆಗಳು ತಮ್ಮ ಹಿಂದಿನ ಜೀವನಪರಿಯನ್ನು ಮತ್ತೊಮ್ಮೆ ಆಭಿನಯಿಸುತ್ತವೆ. ಅವುಗಳು ನೀರಿನಲ್ಲಿ ಜೀವಿಸುವ ಚೊಂದೆಕಪ್ಪೆಗಳಾಗಿ ತಮ್ಮ ಬಾಲಗಳನ್ನು ಬಡಿಯುತ್ತಾ ಜೀವನವನ್ನು ಆರಂಭಿಸುತ್ತವೆ.  ಕೆಲವು ವಾರಗಳಲ್ಲಿ ಅವು ತಮ್ಮ ಬಾಲಗಳನ್ನು ಕಳೆದುಕೊಳ್ಳುತ್ತವೆ,  ಬದಲಾಗಿ ಕಾಲುಗಳು ಬೆಳೆಯುತ್ತವೆ. ವಯಸ್ಕ ಕಪ್ಪೆಗಳಾಗಿ ನೆಲದ ಮೇಲೆ ಜೀವನ ಆರಂಭಿಸುತ್ತವೆ.

 

ಪ್ರಾಣಿಗಳೇಕೆ ಏಕಾಸ ಹೊಂದುತ್ತವೆ? 

ಭೂಮಿಯ ಮೇಲಿರುವ ಎಲ್ಲ ಸಜೀವಿಗಳು ವಿಕಾಸದ ಪರಿಣಾಮವಾಗಿಯೇ ಅಸ್ತಿತ್ವಕ್ಕೆ ಬಂದಿವೆ. ಇದಕ್ಕೆ ಪಳೆಯುಳಿಕೆಗಳಿಂದ ದೊರೆಯುವ ಸಾಕ್ಷ್ಯಾಧಾರಗಳು ಮೂಲ. ಸಜೀವಿಗಳ ರಚನೆ ಮತ್ತು ರಾಸಾಯನಿಕ ಒಳವ್ಯವಸ್ಥೆಗಳನ್ನು ಹೋಲಿಸಿದಾಗಲೂ ಈ ಅಂಶವು ಸ್ಪಷ್ಟವಾಗುತ್ತದೆ. ಆದರೆ ಜೀವವಿಕಾಸಕ್ಕೆ ಸ್ಫೂರ್ತಿ ಯಾವುದು? ವಿಜ್ಞಾನಿಗಳು ಪ್ರಾಕೃತಿಕ ಆಯ್ಕೆಯನ್ನೇ ಇದಕ್ಕೆ ಕಾರಣವೆನ್ನುತ್ತಾರೆ. ಎಲ್ಲ ಪ್ರಾಣಿ ಸಸ್ಯಗಳು ಈ ಭೂಮಿಯ ಮೇಲೆ ಜೀವಿಸುವಾಗ ಸಾಧ್ಯವಾಗುವುದಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿ ವಂಶಾಭಿವೃದ್ಧಿ ಮಾಡುತ್ತವೆ. ಹಲವು ಸಾಯುತ್ತವೆ. ಕೆಲವು ಬೆಳೆದು ಮತ್ತೆ ವಂಶಾಭಿವೃದ್ಧಿಯನ್ನು ನಡೆಸುತ್ತವೆ.

ಸಾಮಾನ್ಯವಾಗಿ ಹೇಳುವುದಾದರೆ ಪರಿಸ್ಥಿತಿಗೆ ಅನುಗುಣವಾಗಿ ಹೊಂದಿಕೊಳ್ಳುವ ಶಕ್ತಿ ಇರುವ ಜೀವಿಗಳು ಬದುಕುತ್ತವೆ, ಉಳಿದವುಗಳು ಸಾಯುತ್ತವೆ. ಪರಿಸರಕ್ಕೆ ಹೊಂದಿಕೊಂಡ ಜೀವಿಗಳ ಗುಣಾಣುಗಳು, ಮುಂದಿನ ತಲೆಮಾರಿಗೆ ದಾಟಿ ಹೋಗುತ್ತವೆ. ನಿಶ್ಯಕ್ತ ಜೀವಿಗಳನ್ನು ಪ್ರಕೃತಿ ತೊಡೆದು ಹಾಕುತ್ತದೆ. ಇದರಿಂದ ತಲೆಮಾರುಗಳು ಬದಲಾದಂತೆ ಜೀವಿಗಳ ಗುಣಮಟ್ಟ ಉತ್ತಮಗೊಳ್ಳುತ್ತದೆ, ಪರಿಸರಕ್ಕೆ ಅವು ಚೆನ್ನಾಗಿ ಹೊಂದಿಕೊಳ್ಳಬಲ್ಲವು.

 

ಕುದುರೆಯ ವಿಕಾಸ

ಕುದುರೆಗಳು 50 ಮಿಲಿಯ ವರ್ಷಗಳಷ್ಟು ಹಿಂದಿನ ಒಂದು ಪ್ರಾಣಿ ಕುಟುಂಬಕ್ಕೆ ಸೇರಿರುತ್ತವೆ. ಕುದುರೆಗಳ ಕುಟುಂಬದ ಅತ್ಯಂತ ಪ್ರಾಚೀನ ಸದಸ್ಯ ಹೈರಾಕೊತೇರಿಯಂ. ಅದರ ಗಾತ್ರ ನಾಯಿಯಷ್ಟಿದ್ದು, ಕಾಲುಗಳಲ್ಲಿ ನಾಲ್ಕು ನಾಲ್ಕು ಬೆರಳುಗಳಿದ್ದವು. ಆ ವಂಶದಲ್ಲಿ ಹುಟ್ಟಿದ ಇತರ ಪ್ರಾಣಿಗಳು ಗಾತ್ರದಲ್ಲಿ ದೊಡ್ಡದಾಗುತ್ತಾ ಬಂದವು. ಕಾಲುಗಳಲ್ಲಿ ಬೆರಳುಗಳ ಸಂಖ್ಯೆ ಕಡಿಮೆಯಿತ್ತು, ಇಂದಿನ ಕುದುರೆಗಳಿಗೆ ಪ್ರತಿ ಕಾಲಿನಲ್ಲಿ ಕೇವಲ ಒಂದು ಬೆರಳು ಅಥವಾ ಗೊರಸು ಇದೆ.

 

ಕೆಲವೊಂದು ಪ್ರಾಣಿಗಳು ಕಣ್ಮರೆಯಾಗುತ್ತಿರುವುದೇಕೆ ?

ಕೆಲವು ಪ್ರಕಾರದ ಪ್ರಾಣಿಗಳು ಈ ಜಗತ್ತಿನಿಂದಲೇ ಕಾಣೆಯಾಗುತ್ತಿವೆ. ಇನ್ನಿತರ ಜಾತಿಗಳು ಚೆನ್ನಾಗಿ ಬದುಕುಳಿಯುತ್ತವೆ. ಇದು ವಿಕಾಸವಾದದ ಒಂದು ಭಾಗ, ಯಶಸ್ವೀ ಪ್ರಾಣಿಪ್ರಕಾರಗಳು ಹೊಸ ಸ್ಥಳಗಳಿಗೆ ವಲಸೆ ಹೋಗುತ್ತವೆ, ಹೊಸ ಪ್ರಕಾರದ ಆಹಾರಗಳನ್ನು ತಿನ್ನತೊಡಗುತ್ತವೆ. ಹವಾಗುಣದ ಬದಲಾವಣೆಗಳಿಗೆ ಹೊಂದಿಕೊಳ್ಳುತ್ತದೆ, ಹೊಸ ರೂಪಗಳಿಗೆ ವಿಕಾಸ ಹೊಂದುತ್ತವೆ. ಹಳೆಯ ಪ್ರಕಾರಗಳು ನಾಶವಾದಂತೆ, ಹೊಸ ಪ್ರಕಾರಗಳು ಅವುಗಳ ಸ್ಥಾನದಲ್ಲಿ  ತಲೆಯೆತ್ತುತ್ತವೆ. ಅರಣ್ಯನಾಶ, ಕಟ್ಟಡ ಮತ್ತು ರಸ್ತೆ ನಿರ್ಮಾಣ ಮೊದಲಾದ ಚಟುವಟಿಕೆಗಳು ಪ್ರಾಕೃತಿಕ ಸ್ವರೂಪದವಲ್ಲ. ಈ ಕಾರಣಗಳಿಂದ ಪ್ರಾಣಿಗಳು ನಿರ್ವಂಶಗೊಳ್ಳುತ್ತವೆ. ಈ ಬಗೆಯಲ್ಲಿ ಉಂಟಾಗುವ ಅಂತರಗಳನ್ನು ತುಂಬುವುದು ಕೂಡಾ ವಿಕಾಸಕ್ಕೆ ಕಷ್ಟಸಾಧ್ಯ. ಇದೀಗ ನಾವು ಪ್ರತಿನಿತ್ಯವೂ ಸಾವಿರಾರು ಪ್ರಾಣಿಗಳನ್ನು ಕಳೆದುಕೊಳ್ಳುತ್ತಿದ್ದೇವೆ, ಅವುಗಳ ಸ್ಥಾನ ತುಂಬಿಕೊಳ್ಳುತ್ತಿಲ್ಲ.

ಹೀಗೆ ಆದರೆ ಪ್ರಾಕೃತಿಕ ಸಮತೋಲನ ಕಾಪಾಡಿಕೊಳ್ಳುವುದು ಕಷ್ಟವಾಗುತ್ತದೆ. ಪ್ರಕೃತಿದತ್ತ ಕೊಡುಗೆ ನೈಸರ್ಗಿಕವಾಗಿ ಅದರ ಪಾಡಿಗೆ ಅದನ್ನು ಬಿಟ್ಟು ಬದುಕುವುದೇ ನಾವು ಪ್ರಕೃತಿಗೆ ನೀಡುವ ಒಂದು ಅಮೋಘ ಕೊಡುಗೆಯಾಗಿದೆ. 

Previous
« Prev Post

No comments:

Post a Comment