Jul 7, 2022

The Great Personalities - Albert Einstein PART-2|ಮಹಾನ್ ವ್ಯಕ್ತಿಗಳು - ಅಲ್ಬರ್ಟ್ ಐನ್ ಸ್ಟೀನ್ ಭಾಗ-2|

Posted by ANIL KNOWN on Jul 7, 2022

ಕಷ್ಟ ಕಳೆದ ನಂತರ ಸುಖ ಬರಲೇಬೇಕು. ಹಾಗೆಯೇ ಐನ್‌ಸ್ಟೀನ್‌ ಅವರ ಜೀವನದಲ್ಲೂ ಕಷ್ಟದ ದಿನಗಳು ಕಳೆದು ಸುಖದ ಜೀವನ ಸಮೀಪಿಸುತ್ತಿತ್ತು. ಈ ಬರಹದಲ್ಲಿ ಅವರ ಏಳಿಗೆಯ ದಿನಗಳನ್ನು ನೋಡೋಣ.

ಮೊದಲ ಭಾಗ ಓದಿಲ್ಲದಿದ್ದರೆ ಕೆಳೆಗೆ ಕಾಣುತ್ತಿರುವ click here ಬಟ್ಟನ್ ಅನ್ನು ಒತ್ತಿ.

CLICK HERE

ವಿಶ್ವವಿದ್ಯಾನಿಲಯ ಮತ್ತು ನಂತರದ ಜೀವನ

ಜ್ಯೂರಿಕ್ ವಿಶ್ವವಿದ್ಯಾನಿಲಯದಲ್ಲಿ ಆಲ್ಬರ್ಟ್ ಐನ್‌ಸ್ಟೀನ್ ಅವರು ತುಂಬಾ ಸರಳ ಜೀವನ ನಡೆಸಬೇಕಾಯಿತು. ಮನೆಯಿಂದ ಬರುತ್ತಿದ್ದ ಹಣಕಾಸಿನ ಬೆಂಬಲ ತುಂಬಾ ಕಡಿಮೆಯಿತ್ತು. ಊಟಕ್ಕೂ ಪರದಾಡುವ ಸ್ಥಿತಿ ಅವರದಾಗಿತ್ತು. ಕಡಿಮೆ ಹಣಕ್ಕೆ ದೊರೆಯುವ ಅತೀ ಸಾಧಾರಣ ಊಟ ಅವರದಾಗಿತ್ತು. ತುಂಬಾ ಕಡಿಮೆ ಬಾಡಿಗೆಯುಳ್ಳ ಪುಟ್ಟ ಕೊಠಡಿಯೊಂದನ್ನು ಅವರು ಬಾಡಿಗೆಗೆ ಪಡೆದರು. ಇದ್ದ ಎರಡು ಜೊತೆ ಬಟ್ಟೆಯಲ್ಲಿಯೇ ಕಾಲ ಕಳೆಯಬೇಕಾಯಿತು. ವಾಹನಗಳಲ್ಲಿ ಅವರು ಪ್ರಯಾಣಿಸುತ್ತಿರಲಿಲ್ಲ. ಕಾಲು ನಡಿಗೆಯಲ್ಲೇ ತಿರುಗಾಡುತ್ತಿದ್ದರು. ಐನ್‌ಸ್ಟೀನ್‌ರ ಈ ಎಲ್ಲಾ ಸ್ವಭಾವಗಳನ್ನು ಗಮನಿಸುತ್ತಿದ್ದ ಅವರ ಗೆಳೆಯರು ಅವನೊಬ್ಬ ಜಿಪುಣನೆಂದೇ ತೀರ್ಮಾನಿಸಿದ್ದರು. ಚಿಕ್ಕಂದಿನಂತೆಯೇ ಈ ಕಾಲೇಜಿಗೆ ಬಂದ ಮೇಲೂ ಐನ್‌ಸ್ಟೀನ್ ಅವರಿಗೆ ಗುಂಪು ಗೌಜಲುಗಳೆಂದರೆ ಆಗುತ್ತಿರಲಿಲ್ಲ. ಅವರ ಏಕಾಂಗಿ ಗುಣ ನೋಡಿ ಇತರೇ ಹುಡುಗರು ಅವರ ಜೊತೆ ಸೇರುತ್ತಿರಲಿಲ್ಲ. ಒಬ್ಬಿಬ್ಬರು ಗಂಭೀರ ಸ್ವಭಾವದ ಸ್ನೇಹಿತರು ಮಾತ್ರ ಅವರಿಗಿದ್ದರು. ಕೊನೆಗೂ ತಂದೆ ತಾಯಿಗಳು ಇಷ್ಟಪಟ್ಟಂತೆಯೇ ಐನ್‌ ಸ್ಟೀನ್‌ ಪದವಿ ವ್ಯಾಸಂಗ ಮುಗಿಸಿದರು.

ಕಾಲೇಜು ವಿದ್ಯಾಭ್ಯಾಸಕ್ಕಾಗಿ ಐನ್‌ಸ್ಟೀನ್‌ರಿಗೆ ಆವರೆವಿಗೂ ಬರುತ್ತಿದ್ದ ಸಹಾಯಧನ ನಿಂತುಹೋಯಿತು. ಊರಿಗೆ ವಾಪಸ್ಸು ಹೋಗಿ ತಂದೆತಾಯಿಗಳಿಗೆ ಹೊರೆಯಾಗುವುದು ಐನ್‌ಸ್ಟೀನ್‌ ಅವರಿಗೆ ಇಷ್ಟವಿರಲಿಲ್ಲ. ಪುಟ್ಟದಾದರೂ ಒಂದು ನೌಕರಿ ಹುಡುಕಿ ಜೀವನ ಸಾಗಿಸಲು ಐನ್‌ಸ್ಟೀನ್‌ ನಿರ್ಧರಿಸಿದರು. ಸ್ನೇಹಿತರೊಬ್ಬರ ಸಹಾಯದಿಂದ ಪೇಟೆಂಟ್ ಕಛೇರಿಯಲ್ಲೊಂದು ನೌಕರಿ ಪಡೆದರು, ಅದು 1902ನೇ ಇಸವಿ. ಅದೂ ಮೂರನೇ ದರ್ಜೆಯ ಗುಮಾಸ್ತನ ಸ್ಥಾನ. ಪೇಟೆಂಟ್ ಕಛೇರಿಯಲ್ಲಿ ಸಾಕಷ್ಟು ಸಮಯಾವಕಾಶ ಸಿಗುತ್ತಿದ್ದುದರಿಂದ ಗಣಿತ ಮತ್ತು ಭೌತಶಾಸ್ತ್ರಗಳ ಮುಂದುವರೆದ ಅಧ್ಯಯನಕ್ಕೆ ಸಹಾಯವಾಯಿತು. ಕಾಲೇಜಿನಲ್ಲಿ ಓದುವಾಗಲೇ ಪರಿಚಯವಿದ್ದ ಮಿಲೇದಾ ಎಂಬ ಗೆಳತಿಯನ್ನು ಆಲ್ಬರ್ಟ್ ಐನ್ ಸ್ಟೀನ್ ಮದುವೆಯಾದರು, ಮಿಲೇವಾ ಕೂಡಾ ಭೌತಶಾಸ್ತ್ರದ ಅಧ್ಯಯನದಲ್ಲಿ ಅಪಾರ ಆಸಕ್ತಿ ಹೊ೦ದಿದವರೇ ಆಗಿದ್ದರು.

ಬದಲಾದ ಜೀವನ ಘಟ್ಟ

ಪೇಟೆಂಟ್ ಕಛೇರಿಯಲ್ಲಿ ಸಾಧಾರಣ ಮೂರನೇ ದರ್ಜೆ ಗುಮಾಸ್ತನಾಗಿ ಕೆಲಸಕ್ಕೆ ಸೇರಿದ ಆಲ್ಬರ್ಟ್ ಐನ್‌ಸ್ಟೀನ್ ಮೂರು ವರ್ಷ ಕಳೆಯುವುದರೊಳಗೆ ಅಂದರೆ, 1905ರಲ್ಲಿ. ಇದ್ದಕ್ಕಿದ್ದಂತೆ "ವಿಜ್ಞಾನಿ ಐನ್‌ಸ್ಟೀನ್' ಆಗಿ ಪ್ರಖ್ಯಾತಿಗೊಂಡರು. ಇದು ಕೆಲವೇ ದಿನಗಳಲ್ಲಿ ನಡೆದುಹೋಯಿತು. ಅದಕ್ಕೆ ಕಾರಣ, ಭೌತಿಕ ಜಗತ್ತಿನ ಬಗೆಗೆ ತಮ್ಮ ಚಿಂತನೆಯಲ್ಲಿ ರೂಪುಗೊಂಡಿದ್ದ ವಿಜ್ಞಾನದ ಸಿದ್ಧಾಂತಗಳನ್ನು 5 ಲೇಖನಗಳನ್ನಾಗಿ ಬರೆದು ಪ್ರಕಟಿಸಿದರು ಐನ್‌ಸ್ಟೀನ್. ಅಚ್ಚರಿಯ ಸಂಗತಿಯೆಂದರೆ ಐನ್‌ಸ್ಟೀನ್ ಬರೆದ ಲೇಖನಗಳಿಂದಾಗಿ 200 ವರ್ಷಗಳಿಂದ ವಿಜ್ಞಾನಿಗಳೆಲ್ಲರೂ ನಂಬಿಕೊಂಡು ಬಂದಿದ್ದ ಸಿದ್ಧಾಂತಗಳೆಲ್ಲಾ ತಲೆಕೆಳಗಾಗಿ ಹೋದವು ! ಬಹುತೇಕ ಭೌತವಿಜ್ಞಾನದ ಪುಸ್ತಕಗಳನ್ನೆಲ್ಲಾ ಹೊಸದಾಗಿ ಬರೆಯಬೇಕಾದ ಪರಿಸ್ಥಿತಿ ಬಂದಿತು. ಜಗತ್ತಿನ ಪ್ರಖ್ಯಾತ ವಿಜ್ಞಾನಿಗಳೆಲ್ಲಾ ನಿಸರ್ಗದ ನಿಯಮಗಳಿಗೆ ಹೊಸ ಭಾಷ್ಯ ಬರೆದ ಇಂಥಾ ಮೇಧಾವಿ ಐನ್‌ಸ್ಟೀನ್ ಯಾರೆಂದು ಹುಡುಕಹತ್ತಿದರು. ದೇಶದ ಪ್ರಸಿದ್ಧ ಪ್ರಯೋಗಾಲಯಗಳಲ್ಲಿ ವಿಶ್ವವಿದ್ಯಾನಿಲಯಗಳಲ್ಲಿ ತಡಕಾಡಿದರು. ಕೊನೆಗೆ ಈತ ಪೇಟೆಂಟ್ ಕಛೇರಿಯಲ್ಲಿರುವ ಮೂರನೇ ದರ್ಜೆಯ ಸಾಮಾನ್ಯ ಗುಮಾಸ್ತ, 26 ವರ್ಷದ ಹುಡುಗ ಎಂದು ತಿಳಿದಾಗ ಅವರೆಲ್ಲ ಕಕ್ಕಾಬಿಕ್ಕಿಯಾದರು. ಐನ್‌ಸ್ಟೀನ್‌ ಚಿಂತನೆಯ ಲಹರಿ ಕಂಡು ಬೆಕ್ಕಸಬೆರಗಾದರು. ಐನ್‌ಸ್ಟೀನ್ ಜಗತ್ತಿನಾದ್ಯಂತ ದಿನರಾತ್ರಿ ಕಳೆಯುವುದರೊಳಗೆ ಪ್ರಖ್ಯಾತಿ ಪಡೆದುಬಿಟ್ಟರು!

ಐನ್‌ಸ್ಟೀನ್‌ರ ಖ್ಯಾತಿ ಮುಗಿಲೆತ್ತರ ಏರುತ್ತಿದ್ದಂತೆ ಹಲವಾರು ದೇಶಗಳು ಐನ್‌ಸ್ಟೀನ್‌ ರನ್ನು ತಮ್ಮ ವಿಶ್ವವಿದ್ಯಾಲಯಗಳಲ್ಲಿ, ಪ್ರೊಫೆಸರ್ ಆಗಿ ಕೆಲಸ ಮಾಡಲು ಕೋರಿಕೊಂಡವು, ಐನ್‌ಸ್ಟೀನ್‌ ರನ್ನು ಸೆಳೆದುಕೊಳ್ಳಲು ಯುರೋಪ್‌ ರಾಷ್ಟ್ರಗಳ ಮಧ್ಯೆ ದೊಡ್ಡ ಪೈಪೋಟಿಯೇ ನಡೆಯಿತು. ಎಲ್ಲರೂ ಐನ್‌ಸ್ಟೀನ್ ರನ್ನು ಯುಗಪುರುಷನೆಂದು ಹೊಗಳಲು ಪ್ರಾರಂಭಿಸಿದರು. 1909ರಲ್ಲಿ ಐನ್‌ಸ್ಟೀನ್ ಜ್ಯೂರಿಕ್‌ನಲ್ಲಿ ಸಹಾಯಕ ಪ್ರೊಫೆಸರ್ ಆಗಿ ಅಧ್ಯಾಪಕ ವೃತ್ತಿಗೆ ಸೇರಿಕೊಂಡರು. ಇದಾದ ನಂತರ ಜಗತ್ತಿನ ಪ್ರಖ್ಯಾತ ಸಂಶೋಧನಾಲಯಗಳಲ್ಲಿ ಒಂದಾದ ಬರ್ಲಿನ್ ವಿಶ್ವವಿದ್ಯಾನಿಲಯದಲ್ಲಿ 5 ವರ್ಷಗಳ ಪ್ರೊಫೆಸರ್ ಹುದ್ದೆಗೆ ಐನ್‌ಸ್ಟೀನ್‌ರು ಆಹ್ವಾನಿಸಲ್ಪಟ್ಟರು. ಆ ಹೊತ್ತಿಗೆ ಅವರ ಪತ್ನಿ ತನ್ನ ಮಕ್ಕಳನ್ನು ಕರೆದುಕೊಂಡು ಸ್ವಿಟ್ಜರ್ಲೆಂಡ್‌ ಗೆ ಹಿಂದಿರುಗಿದರು. ಆದೇ ಸಮಯದಲ್ಲೇ ಜರ್ಮನಿಯಲ್ಲಿ ಮೊದಲನೇ ಮಹಾಯುದ್ಧದ ಕಾವು ಏರತೊಡಗಿತ್ತು. ದೂರವಾದ ಹೆಂಡತಿ, ಮಕ್ಕಳು ಅಥವಾ ಮಹಾಯುದ್ದ ಬಿಸಿ ಯಾವುದರಿಂದಲೂ ಏನ್‌ಸ್ಟೀನ್ ಕಂಗೆಡಲಿಲ್ಲ, ಸದಾ ಸಮಾಧಾನಚಿತ್ತರಾಗಿ ಐನ್‌ಸ್ಟೀನ್ ತಮ್ಮ ಸಂಶೋಧನೆಯನ್ನು ಮುಂದುವರಿಸಿದ್ದರು. ಇದರಿಂದಾಗಿಯೇ ಎರಡು ವರ್ಷ ಕಳೆಯುವುದರಲ್ಲಿ ತಮ್ಮ 'ಸಾಮಾನ್ಯ ಸಾಪೇಕ್ಷತಾ ಸಿದ್ಧಾಂತ' (General Theory of Relativity) ವನ್ನು ಪ್ರಕಟಿಸಿದರು.

ಮೊದಲನೇ ಪ್ರಪಂಚ ಮಹಾಯುದ್ಧ ನಡೆದು ಹೋಯಿತು. ಎಲ್ಲೆಲ್ಲೂ ಸಾವುನೋವುಗಳು ಸಂಭವಿಸಿದವು. ವಿಜ್ಞಾನಿ ಐನ್‌ಸ್ಟೀನ್ ಯುದ್ಧವನ್ನು ಕಂಡು ತುಂಬಾ ನೊಂದುಕೊಂಡರು. ಜರ್ಮನಿಯ ಕೆಲವು ಮುಖಂಡರು ಮೊದಲನೇ ಮಹಾಯುದ್ಧಕ್ಕೆ ಜರ್ಮನಿ ದೇಶ ಕಾರಣವಲ್ಲವೆಂದು, ಅನಿವಾರ್ಯವಾಗಿ ಆತ್ಮರಕ್ಷಣೆಗಾಗಿ ಯುದ್ಧದಲ್ಲಿ ಪಾಲ್ಗೊಳ್ಳಬೇಕಾಯಿತೆಂದು ಸಾರತೊಡಗಿದರು. ಈ ಹೇಳಿಕೆಯನ್ನು ಬೆಂಬಲಿಸಲು ಗಣ್ಯರ ಸಹಿ ಸಂಗ್ರಹಣೆಗೆ ತೊಡಗಿದರು. ಐನ್‌ಸ್ಟೀನ್ ಇಂತಹ ಹೇಳಿಕೆಯನ್ನು ನಾನು ಬೆಂಬಲಿಸುವುದಿಲ್ಲ ಎಂದು ತಮ್ಮ ಕಟುವಾದ ನಿರ್ಧಾರ ಪ್ರಕಟಿಸಿದರು. ಇದರಿಂದ ಜರ್ಮನಿಯ ಮುಖಂಡರು ಕುಪಿತಗೊಂಡರು. ಐನ್‌ಸ್ಟೀನ್‌ ರ ವಿರುದ್ಧ ಸೇಡು ತೀರಿಸಿಕೊಳ್ಳಲು ಸಿದ್ಧರಾದರು. ಮೊದಲನೇ ಮಹಾಯುದ್ಧದ ನಂತರ ಜರ್ಮನಿ ಕುಸಿಯಲಾರಂಭಿಸಿತು. ಯಹೂದಿ ಜನಾಂಗದವರು ದೇಶದ್ರೋಹಿಗಳೆಂದು ಸರ್ಕಾರವೇ ಕಿರುಕುಳ ಕೊಡಲು ಪ್ರಾರಂಭಿಸಿತು. ಯಹೂದಿಗಳು ಹಲವಾರು ದೇಶಗಳಲ್ಲಿ ನೆಲೆಸಿದ್ದ ಜನರಾಗಿದ್ದರು. ಐನ್‌ಸ್ಟೀನ್ ಕೂಡ ಯಹೂದಿ ಜನಾಂಗದಿಂದ ಬಂದವರಾದ್ದರಿಂದ ಯಹೂದಿಯರಿಗೆ ಸರ್ಕಾರದಿಂದಾಗುತ್ತಿದ್ದ ವಿನಾಕಾರಣ ಕಿರುಕುಳವನ್ನು ಪ್ರತಿಭಟಿಸಿದರು. ಐನ್‌ಸ್ಟೀನ್‌ರಿಗೂ ನಾಜೀ ಸರ್ಕಾರದ ಕಿರುಕುಳ ಪ್ರಾರಂಭವಾಯಿತು.

ಆಗಲೇ ವಿಶ್ವಖ್ಯಾತಿ ಪಡೆದಿದ್ದ ಆಲ್ಬರ್ಟ್ ಐನ್‌ಸ್ಟೀನ್‌ ರಿಗೆ ಯಾವ ದೇಶಕ್ಕೆ ಹೋದರೂ ಆಶ್ರಯ ಸಿಗುವಂತಿತ್ತು, ಜಗತ್ತಿನ ಎಲ್ಲ ರಾಷ್ಟ್ರಗಳೂ ಅವರನ್ನು ಖುದ್ದು ಆಹ್ವಾನಿಸಿ ಗೌರವಿಸಲು ತಮ್ಮಲ್ಲಿ ಉಳಿಸಿಕೊಳ್ಳಲು ಬೇಡಿಕೆಯನ್ನಿಟ್ಟಿದ್ದವು. ಸರ್ಕಾರದ ದೌರ್ಜನ್ಯ ಹೆಚ್ಚಾದಂತೆ ಐನ್‌ಸ್ಟೀನ್ ಜರ್ಮನಿ ಬಿಡಬೇಕಾದ ಸಂದರ್ಭ ಬಂದೊದಗಿತು. ಪ್ರೀತಿ ಆದರಗಳಿಂದ ಆಹ್ವಾನ ನೀಡಿದ ವಿಶ್ವದ ಹಲವಾರು ದೇಶಗಳಿಗೆ ವಿಜ್ಞಾನಿ ಆಲ್ಬರ್ಟ್ ಐನ್‌ಸ್ಟೀನ್ ಭೇಟಿ ನೀಡಿದರು. ಹೋದೆಡೆಯಲ್ಲೆಲ್ಲಾ ಆ ದೇಶಗಳ ವಿಜ್ಞಾನದ ಪ್ರಗತಿಯನ್ನು ನೋಡಿ ಮೆಚ್ಚಿದರು, ಅಭಿವೃದ್ಧಿಗಾಗಿ ಸೂಕ್ತ ಸಲಹೆ ಕೊಟ್ಟರು. ಜನ ಸೇರಿದಡೆಯಲ್ಲೆಲ್ಲಾ ಐನ್‌ಸ್ಟೀನರು ತಮ್ಮ ನೆಚ್ಚಿನ ಖ್ಯಾತ ಸಂಶೋಧನೆಗಳ ಕುರಿತು ಉಪನ್ಯಾಸ ನೀಡಿದರು. ಜಗತ್ತಿನ ವಿವಿಧ ದೇಶಗಳ ಸುತ್ತಾಟ ಐನ್‌ಸ್ಟೀನ್ ಒಬ್ಬ ವಿಜ್ಞಾನಿಯಷ್ಟೇ ಅಲ್ಲ ಅವರೊಬ್ಬ ಮಾನವೀಯ ಅಂತಃಕರಣದ ಮೇರುವ್ಯಕ್ತಿ ಎಂಬುದನ್ನು ಸಾರಿತು. ಜನಸಾಮಾನ್ಯರ ಬಡತನ, ಅಸಹಾಯಕತೆ ಮತ್ತು ಮೌಡ್ಯಗಳ ವಿರುದ್ಧ ಜಾಗತಿಕ ಹೋರಾಟಕ್ಕೆ ಐನ್‌ ಸ್ಟೀನ್ ಕರೆ ನೀಡಿದರು.

 ಮೊದಲ ಭಾಗ ಓದಿಲ್ಲದಿದ್ದರೆ ಕೆಳೆಗೆ ಕಾಣುತ್ತಿರುವ click here ಬಟ್ಟನ್ ಅನ್ನು ಒತ್ತಿ.

CLICK HERE

ಹೆಚ್ಚಿನ ಮಾಹಿತಿಯನ್ನು ಮುಂದಿನ ಬರಹದಲ್ಲಿ ತಿಳಿಯೋಣ.

Previous
« Prev Post

No comments:

Post a Comment