Jul 10, 2022

Insects around us PART-1| ನಮ್ಮ ಸುತ್ತಲಿನ ಕೀಟಗಳು ಭಾಗ-1 |

Posted by ANIL KNOWN on Jul 10, 2022

ಜಗವಿದು ಜಾಣ ಚೆಲುವಿನ ತಾಣ ಎಲ್ಲೆಲ್ಲೂ ರಸದೌತಣ ನಿನಗೆಲ್ಲೆಲ್ಲೂ ರಸದೌತಣ... ಅಣ್ಣಾವ್ರ ಈ ಸಾಲು ಎಷ್ಟು ಸೊಗಸಾಗಿದೆ ಅಲ್ವಾ.. ಹೀಗೆ ನಾನು ಸಂಜೆ ಟೀ ಕುಡಿತಾ ನಾನು ಹಾಕಿರೋ ಗಿಡಗಳನ್ನ ನೋಡ್ತಾ ಕೂತಿದ್ದೆ, ಒಂದು ಸೊಳ್ಳೆ ಕಚ್ಚಿಬಿಡೋದಾ!! ಇರೋದ್ ಅಕ್ಕಿ ಕಾಳಿನ ಸೈಜು ಹೆಂಗ್ ಕಚ್ತು ಅಂದ್ರೆ ಉರಿ ಅಂದ್ರೆ ಉರಿ. ಹೂಗ್ಲತಾಗಿ ಅಂತ ಬಿಟ್ಟು ಹಂಗೆ ಗಿಡ ನೋಡುವಾಗ ನನಗೆ ಮಿಡತೆ, ನೊಣ, ಜೇನು, ಜೇಡ, ಇರುವೆ, ಗೆದ್ದಲು ಹೀಗೆ ಹಲವಾರು ಸಣ್ಣ ಜೀವಿಗಳನ್ನು ನೋಡಿದೆ. ಇವುನ್ನೆಲ್ಲ ನಾವು ಕೀಟಗಳು ಅಂತೀವಲ್ಲ... ಅದಿಕ್ಕೆ ಕೆಲವೊಂದು ಕೀಟಗಳ ಬಗ್ಗೆ ತಿಳ್ಕೊಂಡು ಮಾಹಿತಿ ಹಂಚ್ಕೊಳೋಣ ಅಂತ... ಓದಿ ತಿಳ್ಕೊಳಿ ಖುಷಿ ಆದ್ರೆ ಇಷ್ಟ ಪಡಿ.. ಇನ್ನು ಹಲವಾರು ಬರಹಗಳಿವೆ ಓದಿ.. ಹಾರೈಸಿ.  

ಇರುವೆಗಳು (Ants)

ಅತ್ಯುತ್ತಮವಾದ ಸಂಘಜೀವನ ನಡೆಸುವ ಕೀಟಗಳು, ಸಾಮಾನ್ಯವಾಗಿ ಕೆಂಪು, ಕಪ್ಪು, ಕಂದು ಬಣ್ಣಗಳಲ್ಲಿ ಕಂಡುಬರುತ್ತವೆ. 2 ಮೀಸೆಗಳನ್ನು ಹೊಂದಿದ್ದು ಇವುಗಳನ್ನು ಮಾಹಿತಿ ನೀಡಲು ಸಾಧನವಾಗಿ ಬಳಸಿಕೊಳ್ಳುತ್ತವೆ. ಇವುಗಳ ಕುಟುಂಬದಲ್ಲಿ 

1.ಗಂಡು ಇರುವೆಗಳು

2.ಹೆಣ್ಣು ಇರುವೆಗಳು ಹಾಗೂ

3.ಕೆಲಸಗಾರ ಇರುವೆಗಳಿರುತ್ತವೆ.

ಕೆಲಸಗಾರ ಇರುವೆಗಳ ಪ್ರಮುಖ ಕಾರ್ಯವು ಗೂಡನ್ನು ಸ್ವಚ್ಚವಾಗಿಟ್ಟುಕೊಳ್ಳುವುದು, ಆಹಾರವನ್ನು ಹುಡುಕಿ ತರುವುದು, ಪೈರಿಗಳಿಂದ ಗೂಡನ್ನು ರಕ್ಷಿಸುವುದು.

ಕುಟುಂಬದ ಗಾತ್ರವು ಅತಿ ದೊಡ್ಡದಾದ ಮೇಲೆ ರೆಕ್ಕೆಯುಳ್ಳ ರಾಣಿ ಮತ್ತು ರೆಕ್ಕೆಯುಳ್ಳ ಗಂಡು ಇರುವೆಯು ಗೂಡಿನಿಂದ ಹೊರಗೆ ಹಾರಿ ಬರುತ್ತವೆ. ಹಾಗೂ ಸಂತಾನ ಕ್ರಿಯೆಯಲ್ಲಿ ಪಾಲ್ಗೊಳ್ಳುತ್ತವೆ. ಈ ಕ್ರಿಯೆಯ ನಂತರ ಗಂಡು ಇರುವೆಗಳು ಸತ್ತು ಹೋಗುತ್ತವೆ. ಹೆಣ್ಣು ಇರುವ ಹೊಸ ಗೂಡಿನ ನಿರ್ಮಾಣ ಮಾಡತೊಡಗುತ್ತದೆ.

ಮನುಷ್ಯರು ಪ್ರಾಣಿಗಳನ್ನು ಸಾಕುವಂತೆಯೇ ಕೆಲ ಇರುವೆಗಳು ಎಪಿಡ್ಸ್ ಗಳನ್ನು ಸಾಕುತ್ತವೆ. ಎಪಿಡ್ಸ್ ಗಳಿಗೆ ರಕ್ಷಣೆ ನೀಡುತ್ತವೆ ಹಾಗೂ ಅವುಗಳು ಸ್ರವಿಸುವ ಸಿಹಿ ದ್ರವವನ್ನು ತಿನ್ನುತ್ತವೆ.

 

ಅಂಟಿಲಾನ್ಸ್ (ಡೂಡಲ್ ಬಗ್) Antlions (Doodle bug)

ಮೃದುವಾದ ಮಣ್ಣಿನಲ್ಲಿ ಸಣ್ಣ ಕಣಗಳ ಮರಳಿನಿಂದ ಲಾಳಿಕೆಯಾಕಾರದಲ್ಲಿ ತಗ್ಗನ್ನು ನಿರ್ಮಿಸುವ ಕೀಟವಿದು. ನೆಲದ ಮೇಲೆ ಓಡಾಡುವ ಇರುವೆ, ಇತರೇ ಸಣ್ಣ ಸಣ್ಣ ಹುಳುಗಳು ತಗ್ಗಿನೊಳಕ್ಕೆ ಬಿದ್ದೊಡನೆ ಆಹಾರವಾಗಿಸಿಕೊಳ್ಳುವ ಸ್ವಭಾವದ ಕೀಟವಿದು. ಜಾರುವ ಮರಳಿನ ಕಣಗಳಾದ್ದರಿಂದ ಮೇಲೇರಲು ಸಾಧ್ಯವಾಗದೇ ಇರುವೆ ಮುಂತಾದವುಗಳು ಇದರ ಆಹಾರವಾಗಿಬಿಡುತ್ತವೆ. ಈ ಕೀಟವು ಸಾಮಾನ್ಯವಾಗಿ ತನ್ನ ತಲೆಯ ಭಾಗವನ್ನಷ್ಟೆ ಹೊರತೆಗೆದು ದೇಹವನ್ನೆಲ್ಲ ಮರಳಿನಲ್ಲಿ ಅವಿತಿಟ್ಟು ಆಹಾರಕ್ಕಾಗಿ ಕಾಯುತ್ತಿರುತ್ತದೆ. ಈ ತಗ್ಗು ಗೂಡಿನ ಗಾತ್ರವು ಅಗಲ ಮತ್ತು ಆಳದಲ್ಲಿ 3 ರಿಂದ 5 ಸೆಂ.ಮೀ.ನಷ್ಟಿರುತ್ತದೆ.

 

ಕ್ರಿಕೆಟ್ ಕೀಟ (ಜೀರುಂಡೆ) cricket

ಕುಪ್ಪಳಿಸಲು ಸಹಾಯವಾಗುವಂತೆ ದೊಡ್ಡ ಕಾಲುಗಳನ್ನು ಹೊಂದಿರುವ ಕೀಟವಿದು. ಇವುಗಳ ಗಾತ್ರ 1 ರಿಂದ 3 ಸೆಂ.ಮೀ.ನಷ್ಟು, ಇದಕ್ಕೆ ಉದ್ದನೆಯ ಮೀಸೆಗಳೂ ಇವೆ. ಫೀಲ್ಡ್ ಕ್ರಿಕೆಟ್‌ನ ಬಣ್ಣವು ಸಾಮಾನ್ಯವಾಗಿ ಕಪ್ಪು. ಈ ಕೀಟವನ್ನು ಅವುಗಳ ವಿಶಿಷ್ಟವಾದ ಹಾಗೂ ಅತಿಯಾದ ಶಬ್ದದಿಂದ ಗುರ್ತಿಸಬಹುದು.

ಇವುಗಳು ಹೊರಡಿಸುವ ಶಬ್ದವು ವಾತಾವರಣದ ಉಷ್ಣತೆಯನ್ನವಲಂಬಿಸಿರುತ್ತದೆ. ಆದ್ದರಿಂದ ಇವುಗಳ ಶಬ್ದವನ್ನು ಅಧ್ಯಯನ ಮಾಡುವ ಮೂಲಕ ಭೂ ವಾತಾವರಣದ ಉಷ್ಣತೆಯನ್ನು ಕ೦ಡು ಹಿಡಿಯಬಹುದಾಗಿದೆ. ಇವುಗಳು ಸಾಮಾನ್ಯವಾಗಿ ಒಂದು ವರ್ಷದಲ್ಲಿ 1 ರಿಂದ 3 ತಲೆಮಾರುಗಳು ಉತ್ಪತ್ತಿಯಾಗುತ್ತವೆ.

 

ಸಿಕಾಡ (Cicada)

ಸುಗ್ಗಿ ಕಾಲದ ಕೀಟವೆಂದೇ ಹೆಸರಾಗಿದೆ. ಕೀಟಗಳಲ್ಲಿ ಅತಿ ಹೆಚ್ಚು ಶಬ್ಧ ಮಾಡುವ ಕೀಟವೆಂದೂ ಗುರ್ತಿಸಲ್ಪಟ್ಟಿದೆ. ಇದೊಂದು ವಿಚಿತ್ರ ಕೀಟ. ಇದು ತನ್ನ ಬಹುಪಾಲು ಜೀವಿತಾವಧಿಯನ್ನು ಭೂಮಿಯ ಒಳಭಾಗದಲ್ಲಿಯೇ ಕಳೆಯುತ್ತದೆ. ಇವುಗಳ ಜೀವಿತಾವಧಿ 13 ರಿಂದ 17 ವರ್ಷಗಳಾಗಿದ್ದರೂ ಕೇವಲ 30 ರಿಂದ 40 ದಿನಗಳು ಮಾತ್ರ ಭೂಮಿಯ ಮೇಲೆ ಮರಗಳಲ್ಲಿ ವಾಸವಾಗಿರುತ್ತದೆ. ಲಾರ್ವಾವಸ್ಥೆಯಲ್ಲಿರುವಾಗ ಬೇರುಗಳಿಂದ ದ್ರವವನ್ನು ಹೀರಿಕೊಂಡು ಜೀವಿಸುತ್ತದೆ. ಸಂತಾನೋತ್ಪತ್ತಿ ಕಾರ್ಯವು ಭೂಮಿಯ ಮೇಲಿದ್ದಾಗ ನಡೆಯುತ್ತದೆ. ಇದು ಸುಮಾರು 300 ರಿಂದ 600 ಮೊಟ್ಟೆಗಳನ್ನಿಡುತ್ತದೆ.

 

ಡ್ರ್ಯಾಗನ್ ಫ್ಲೈ (Dragon fly)

ಡೈನೋಸಾರ್‌ಗಳಿಗಿಂತಲೂ ಹಿಂದಿನ ಕಾಲದಿಂದ ಜೀವಿಸಿರುವ ಕೀಟಗಳೆಂದು ಪರಿಗಣಿಸಲಾಗಿದೆ. ಇವು 4 ರೆಕ್ಕೆಗಳನ್ನು ಹೊಂದಿವೆ. ಹರಿತವಾದ ದವಡೆಗಳನ್ನು ಹೊಂದಿರುವುದರಿಂದ ಇವುಗಳಿಗೆ ಈ ಹೆಸರು ಬಂದಿದೆ. ಇವು ನೀರಿನಲ್ಲಿ ಮೊಟ್ಟೆಗಳನ್ನಿಡುತ್ತವೆ. ಮೊಟ್ಟೆಗಳಿಂದ ಮರಿಗಳು ಹೊರಬರಲು 15 ದಿನಗಳ ಕಾಲ ಬೇಕು. ಮರಿಗಳು ನೀರಿನಲ್ಲಿ ಜೀವಿಸುತ್ತವೆ. ಬೆಳವಣಿಗೆಯ ಹಂತ ಹೊಂದಿದ ನಂತರ ನೀರಿನಿಂದ ಹೊರಬಂದು ಭೂಮಿಯ ಮೇಲಿನ ಗಿಡದ ಕಾಂಡದ ಮೇಲೆ ವಾಸಿಸತೊಡಗುತ್ತದೆ. ಹೊರಚರ್ಮ ಕಳಚಿ ಮಾರ್ಪಾಡುಗೊಳ್ಳತೊಡಗುತ್ತವೆ. 2 ಗಂಟೆಗಳ ಅವಧಿಯಲ್ಲಿ ತಲೆ, ಹೊಟ್ಟೆ, ಕಾಲು ಹಾಗೂ ರೆಕ್ಕೆಗಳು ಮಾರ್ಪಾಡಾಗುತ್ತವೆ. ಇವು ತಮ್ಮ ರೆಕ್ಕೆಗಳನ್ನು ಮಡಚುವುದಿಲ್ಲ. ಸೊಳ್ಳೆಗಳನ್ನು ಹೆಚ್ಚು ತಿನ್ನುವುದರಿಂದ ಸೊಳ್ಳೆ ಭಕ್ಷಕಗಳೆಂದೂ ಕರೆಯಲ್ಪಡುತ್ತವೆ.

 

ಪ್ರೇಯಿಂಗ್ ಮ್ಯಾಂಟಿಸ್ (Praying Mantis)

ಸಾಮಾನ್ಯವಾಗಿ ಉಷ್ಣ ವಲಯಗಳಲ್ಲಿ ಕಂಡುಬರುವ ಕೀಟವಿದು, ಅಂದಾಜು 1700 ಕ್ಕಿಂತಲೂ ಹೆಚ್ಚು ಪ್ರಬೇಧಗಳಿವೆಯೆಂದು ನಂಬಲಾಗಿದೆ. ಮುಂಗಾಲುಗಳು ಆಹಾರವನ್ನು ಹಿಡಿಯಲು ಹರಿತವಾಗಿವೆ. ವಯಸ್ಕ ಆಗುವುದಕ್ಕೂ ಮುನ್ನ ಸುಮಾರು 12 ಬಾರಿ ತಮ್ಮ ಹೊರ ಚರ್ಮವನ್ನು ಕಳಚಿ ಹಾಕುತ್ತವೆ. ಇವು ಸುಮಾರು 300 ಮೊಟ್ಟೆಗಳನ್ನಿಡುತ್ತವೆ. ಚಿಟ್ಟೆಗಳು, ಜೇನ್ನೊಣ, ಕಪ್ಪೆ, ಜೇಡ.... ಮುಂತಾದವುಗಳು ಇದರ ಆಹಾರ. ಇವು ಮುಂಗಾಲುಗಳನ್ನು ಮೇಲೆತ್ತಿ ಕೈಮುಗಿಯುತ್ತಿರುವಂತೆ ಕಾಣುವುದರಿಂದ ಇವುಗಳಿಗೆ ಈ ಹೆಸರು ಬಂದಿದೆ.

 

ಗೆದ್ದಲು (Termite)

ಸಂಘ ಜೀವಿಗಳಾದ ಇವುಗಳಿಗಿರುವ ಇನ್ನೊಂದು ಹೆಸರು ಬಿಳಿ ಇರುವೆಗಳು. ಇವುಗಳ ಕೆಲ ಕುಟುಂಬದಲ್ಲಿ 20 ಲಕ್ಷದವರೆಗೂ  ಗೆದ್ದಲುಗಳಿರುತ್ತವೆ. ಕುಟುಂಬದಲ್ಲಿ ಅತಿ ದೊಡ್ಡ ಗಾತ್ರದ ರಾಣಿ ಗೆದ್ದಲು, ರಾಜ ಗೆದ್ದಲು, ಹಾಗೂ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಮಿಕ ಗೆದ್ದಲುಗಳಿರುತ್ತವೆ. ಕಾರ್ಮಿಕ ಗೆದ್ದಲುಗಳ ಕಾರ್ಯವು ಆಹಾರ ಸಂಗ್ರಹಣೆ, ಗೂಡನ್ನು ಶುಭ್ರಗೊಳಿಸುವುದು, ವೈರಿಗಳೊಂದಿಗೆ ಹೋರಾಡುವುದು ಇತ್ಯಾದಿ.

ರಾಣಿ ಗೆದ್ದಲುಗಳ ವಾಸಸ್ಥಾನವು ಗೂಡಿನ ಮಧ್ಯಭಾಗದಲ್ಲಿ ವಿಶೇಷವಾಗಿ ನಿರ್ಮಿತವಾಗಿರುತ್ತದೆ. ಗೆದ್ದಲುಗಳ ಗೂಡನ್ನು ಮಾನವ ನಿರ್ಮಿತ ಹವಾ ನಿಯಂತ್ರಣ: ವ್ಯವಸ್ಥೆ (ಎ.ಸಿ.ಸಿಸ್ಟಮ್) ಗಿಂತಲೂ ಅತ್ಯುತ್ತಮವಾದುವೆಂದು ಅಭಿಪ್ರಾಯಪಡಲಾಗುತ್ತದೆ. ರಾಣಿ ಗೆದ್ದಲುಗಳ ಸಂತಾನವನ್ನು ಉತ್ತಮಗೊಳಿಸಲು ಕಾರ್ಮಿಕ ಗೆದ್ದಲುಗಳು ಆವುಗಳಿಗೆ ವಿಶೇಷ ಆಹಾರವನ್ನು ಉಣಬಡಿಸುತ್ತವೆ. ತೇವಾಂಶ ವಾತಾವರಣ ಕಾಲಕ್ಕೆ ಗಂಡು ಮತ್ತು ರಾಣಿ ಗೆದ್ದಲುಗಳು ಗೂಡಿನಿಂದ ಹೊರಬಂದು ಸಂತಾನ ಕ್ರಿಯೆಯಲ್ಲಿ ತೊಡಗುತ್ತವೆ. ನಂತರ ರಾಣಿ ಗೆದ್ದಲು ಹೊಸ ಗೂಡನ್ನು ನಿರ್ಮಿಸಿ ಮೊಟ್ಟೆಗಳನ್ನಿಡುತ್ತದೆ. ಗೆದ್ದಲುಗಳು ಕೊಳೆತ ಮರದ ದಿಮ್ಮಿಗಳನ್ನು ತಿನ್ನುವ ಮೂಲಕ ಪೋಷಕಾಂಶಗಳನ್ನು ನಿಸರ್ಗಕ್ಕೆ ಮರಳಿಸುವ ಕಾರ್ಯ ಮಾಡುತ್ತವೆ.

 

ಸೊಳ್ಳೆ  (Mosquito)

ಸೊಳ್ಳೆಗಳ ಜೀವನ ಚಕ್ರವು 4 ಹಂತಗಳನ್ನು ಹೊಂದಿದೆ.

1 ಮೊಟ್ಟೆ

2 ಲಾರ್ವಾ  

3 ಪ್ಯೂಪಾ(ಕೋಶಾವಸ್ಥೆ)

4 ವಯಸ್ಕ

ನೀರಿನ ಮೇಲೆ ಮೊಟ್ಟೆಗಳನ್ನಿಡುವ ಮೂಲಕ ಸೊಳ್ಳೆಗಳ ಜೀವನ ಆರಂಭವಾಗುತ್ತದೆ. ಮೊಟ್ಟೆಗಳು 48 ಗಂಟೆಗಳಲ್ಲಿ ಹೊಡೆದು ಹೊರಬರುತ್ತವೆ. ಲಾರ್ವಾಗಳು ಸೂಕ್ಷ್ಮಜೀವಿಗಳನ್ನು ತಿಂದು ಜೀವಿಸುತ್ತವೆ. ಪ್ಯೂಪಾ ಹಂತದಲ್ಲಿ ಅವು ಏನನ್ನೂ ತಿನ್ನುವುದಿಲ್ಲ. 2 ದಿನಗಳ ಅವಧಿಯಲ್ಲಿ ಪ್ಯೂಪಾದ ಹೊರಚರ್ಮವು ಕಳಚಿ ವಯಸ್ಕ ಸೊಳ್ಳೆಯು ನಿರ್ಮಾಣವಾಗುತ್ತದೆ. ವಯಸ್ಕ ಸೊಳ್ಳೆಗಳು ಹಾರಾಟವನ್ನು ಆರಂಭಿಸುವುದಕ್ಕಿಂತ ಮುಂಚಿತವಾಗಿ ನೀರಿನ ಮೇಲೆ ವಿಶ್ರಾಂತಿ ಪಡೆದು, ತಮ್ಮ ರೆಕ್ಕೆಗಳನ್ನು ಒಣಗಿಸಿಕೊಂಡು ಗಟ್ಟಿಗೊಳಿಸಿಕೊಳ್ಳುತ್ತವೆ.

ಹೆಣ್ಣು ಸೊಳ್ಳೆಗಳ ಆಯುಷ್ಯವು 3 ರಿಂದ 100 ದಿನಗಳು. ಗಂಡು ಸೊಳ್ಳೆಗಳು ಆಯುಷ್ಯವು 10 ರಿಂದ 20 ದಿನಗಳು. ಹೆಣ್ಣು ಸೊಳ್ಳೆಗಳು ಮೊಟ್ಟೆಗಳನ್ನಿಡಲು ರಕ್ತದೂಟವನ್ನು ಮಾಡುತ್ತವೆ. ಇವು 100 ರಿಂದ 300 ಮೊಟ್ಟೆಗಳನ್ನಿಡುತ್ತವೆ ಹಾಗೂ ಜೀವಿತಾವಧಿಯಲ್ಲಿ 3000 ದ ವರೆಗೂ ಮೊಟ್ಟೆಗಳನ್ನಿಡುತ್ತವೆ. ಪ್ರಪಂಚದಾದ್ಯಂತ ಸುಮಾರು 140 ಕ್ಕೂ ಅಧಿಕ ವಿಧದ ಸೊಳ್ಳೆಗಳನ್ನು ಗುರ್ತಿಸಲಾಗಿದೆ. ಕೆಲವು ಸೊಳ್ಳೆಗಳು ರೋಗಗಳ ಸಂವಾಹಕಗಳಾಗಿವೆ.

 

ಡೇಮ್ಸ್  ಫ್ಲೈ (Damsefly)

ಪ್ರಪಂಚದಾದ್ಯಂತ ಕ೦ಡುಬರುವ ಕೀಟವಿದು. ಸುಮಾರು 4700 ವಿವಿಧ ಪ್ರಬೇಧಗಳಿವೆಯೆಂದು ನಂಬಲಾಗಿದೆ. ಮೊಟ್ಟೆ ಹಾಗೂ ಲಾರ್ವಾವಸ್ಥೆಯಲ್ಲಿ ನೀರಿನಲ್ಲಿರುತ್ತವೆ. ಈ ಹಂತದಲ್ಲಿ ಗೊದಮಟ್ಟೆ ಹಾಗೂ ಸೂಕ್ಷ್ಮ ಜೀವಿಗಳನ್ನು ತಿಂದು ಜೀವಿಸುತ್ತವೆ.

 

ನೀರಿನಲ್ಲಿ ಕೆಲವು ತಿಂಗಳುಗಳ ಕಾಲವಷ್ಟೇ ಇದ್ದರೂ ಈ ಅವಧಿಯಲ್ಲಿ ಇವು ತನ್ನ ಹೊರಚರ್ಮವನ್ನು ಕಳಚಿ ಹೊಸಚರ್ಮವನ್ನು ಪಡೆಯುತ್ತಿರುತ್ತವೆ. ಕೊನೆಯ ಬಾರಿ ಕಳಚಿದ ನಂತರ ಅದು ನೀರಿನಿಂದ ಹೊರಬಂದು ಗಿಡದ ಕಾಂಡಭಾಗದಲ್ಲಿ ವಾಸಿಸತೊಡಗುತ್ತದೆ. ಈ ಹ೦ತದಲ್ಲಿ ಇದರ ಚರ್ಮವು ತು೦ಡಾಗಿ ಪ್ರೌಢಾವಸ್ಥೆಯನ್ನು ಹೊಂದಿದ ಚೆನ್ನಾಗಿ ಬೆಳೆದ ದೇಹ ಹಾಗೂ ರೆಕ್ಕೆಗಳನ್ನೊಂದಿದ ಕೀಟವಾಗಿ ಹೊರಬರುತ್ತದೆ. ರೆಕ್ಕೆಗಳನ್ನು ಗಟ್ಟಿಗೊಳಿಸಿಕೊಂಡ ನಂತರ ಇವು ಹಾರಲಾರಂಭಿಸುತ್ತವೆ. ಇವು ಬಹುದೂರದವರೆವಿಗೂ ವಲಸೆ ಹೋಗಬಲ್ಲ ಕೀಟಗಳು.

 

ಹರ್ಕ್ಯುಲಸ್ ಬೀಟಲ್ (Hercules Beetle)

ಇವುಗಳು ಸಾಮಾನ್ಯವಾಗಿ ಸಮಭಾಜಕ ವೃತ್ತ ಪ್ರದೇಶದ ಮಳೆ ಕಾಡುಗಳಲ್ಲಿ ಕಂಡುಬರುತ್ತವೆ. 7 ರಿಂದ 18 ಸೆಂ.ಮೀ. ವರೆಗೂ ಇವುಗಳ ಗಾತ್ರವಿರುತ್ತದೆ. ಸುಮಾರು 5 ರಿಂದ 10 ಸೆಂ.ಮೀ. ಉದ್ದದಷ್ಟು ಕತ್ತಿಯಂತಹ ಕೊಂಬುಗಳನ್ನು ಹೊಂದಿವೆ. ಈ ಕೊಂಬುಗಳ ಒಳಭಾಗದಲ್ಲಿರುವ ಗರಗಸದಂತಹ ಆಕಾರವು ಆಹಾರವನ್ನು ಹಿಡಿಯಲು, ವೈರಿಗಳೊಂದಿಗೆ ಹೋರಾಡಲು ಸಹಾಯಕವಾಗಿವೆ. ಹೆಣ್ಣುಗಳಿಗೆ ಈ ಕೊಂಬುಗಳಿರುವುದಿಲ್ಲ. ಇವು ನೆರಳಿನ ಪ್ರದೇಶಗಳಲ್ಲಿ ಹಸಿರಿರುವೆಡೆ ವಾಸಿಸುತ್ತವೆ.

 

ವೀಕ್ಷಕರೇ ಓದಿದಿರಾ, ನಮ್ಮ ಸುತ್ತ ಮುತ್ತಲಿರುವ ಹಲವು ಕೀಟಗಳ ಬಗ್ಗೆ ಮೇಲಿರುವ ಮಾಹಿತಿಗಳನ್ನು?! ಎಷ್ಟು ಸೋಜಿಗ ಅಲ್ವ ನಮ್ಮ ಪರಿಸರ. ಇನ್ನು ಹೆಚ್ಚಿನ ಕೀಟಗಳ ಬಗ್ಗೆ ತಿಳಿದುಕೊಳ್ಳಲು ಯತ್ನಿಸೋಣ. ನಿಮಗೇನಾದರೂ ಹೊಸ ಕೀಟಗಳ ಬಗ್ಗೆ ತಿಳಿದಿದ್ದರೆ ಕಾಮೆಂಟ್ ಮಾಡಿ ತಿಳಿಸಿ. ಮತ್ತೊಂದು ಬರಹದ ಜೊತೆ ಸಿಗುವ... ಓದ್ತಾ ಇರಿ ತಿಳ್ಕೋತಾ ಇರಿ. ಯಾಕಂದ್ರೆ ಅರಿವೇ ಗುರು. 

Previous
« Prev Post

No comments:

Post a Comment