ಯೋಗೇನ ಚಿತ್ತಸ್ಯ ಪದೇನ ವಾಚಾಮ್
ಮಲಮ್ ಶರೀರಸ್ಯ ಚ ವೈದ್ಯಕೇನಾ
ಯೋಪಾಕರೋತ್ತಮ್ ಪ್ರವರಂ ಮುನೀನಾಮ್
ಪತಂಜಲೀಮ್ ಪ್ರಾಂಜಲಿರಾನತೋಸ್ಮಿ||
"ಯೋಗದಿಂದ ಮನಸ್ಸಿನ ಶಾಂತತೆ, ವ್ಯಾಕರಣದಿಂದ ಪರಿಣಾಮಕಾರಿ ಮಾತು ಮತ್ತು ಔಷಧದಿಂದ ದೈಹಿಕ ಆರೋಗ್ಯ, ಹೀಗೆ ಋಷಿಮುನಿಗಳಲ್ಲಿ ಶ್ರೇಷ್ಠವಾದ ವಿಷಯಗಳನ್ನು ದಾಯಪಾಲಿಸಿದ ಪತಂಜಲಿ ಅವರಿಗೆ ಗೌರವಯುತ ನಮಸ್ಕಾರ ಮಾಡುತ್ತೇನೆ."
ಮೇಲೆ ಹೇಳಿರುವ ಶ್ಲೋಕ ಮತ್ತು ಅದರ ಅರ್ಥ ನೋಡಿದರೆ ಗೊತ್ತಾಗುತ್ತದೆ ಯೋಗದ ಮಹತ್ವ ಎಂಥದ್ದು ಅಂತ. ಸಾವಿರಾರು ವರ್ಷಗಳ ಇತಿಹಾಸ ಇರುವ ಯೋಗ ನಮ್ಮ ಭಾರತ ದೇಶದ ಕೊಡುಗೆ ಎಂಬುದು ನಮ್ಮ ಹೆಮ್ಮೆ. ದೈನಂದಿನ ಜೀವನದಲ್ಲಿ ದೇಹಕ್ಕೆ ಅಗತ್ಯವಿರುವ ಸಂತೋಷ ಹೊಂದಲು ಇರುವ ಸಾಧನವೇ ಯೋಗ. ಇದು ನಿಮ್ಮನ್ನು ಉತ್ತೇಜಿಸುತ್ತದೆ ಮತ್ತು ದೇಹಕ್ಕೆ ವಿಶ್ರಾಂತಿ ನೀಡುತ್ತದೆ ಮತ್ತು ಮನಸ್ಸಿನ ಸ್ವಯಂ ನಿಯಂತ್ರಣದ ಮೂಲಕ ನಿಮ್ಮನ್ನು ಆತ್ಮವಿಶ್ವಾಸದಿಂದ ಇರುವಂತೆ ಮಾಡುತ್ತದೆ.
ಪ್ರತಿ ವರ್ಷ ಜೂನ್ 21 ರಂದು ಅಂತರರಾಷ್ಟ್ರೀಯ ಯೋಗ ದಿನವನ್ನು ಆಚರಿಸಲಾಗುತ್ತದೆ. ಇಂದು ನಾವು ಏಳನೇ ವರ್ಷದ ಯೋಗ ದಿನವನ್ನು ಆಚರಿಸುತ್ತಿದ್ದೇವೆ. ಯೋಗಾಭ್ಯಾಸವು ಮನಸ್ಸು, ದೇಹ ಮತ್ತು ಆತ್ಮಕ್ಕೆ ಹೆಚ್ಚು ಪ್ರಯೋಜನಕಾರಿ ಎಂದು ಸಾಬೀತಾಗಿದೆ. ಇದು ದೈಹಿಕ ಮತ್ತು ಮಾನಸಿಕ ವಿಶ್ರಾಂತಿ ನೀಡುವುದಲ್ಲದೆ ಸ್ಥಿತಿಸ್ಥಾಪಕತ್ವ ಮತ್ತು ಶಕ್ತಿಯನ್ನು ಅಭಿವೃದ್ಧಿಪಡಿಸಲು ಸಹಾಯ ಮಾಡುತ್ತದೆ.
ಇತಿಹಾಸ
ಯೋಗವು ಪ್ರಾಚೀನ ಕಾಲದಿಂದಲೂ ಭಾರತೀಯ ಸಂಸ್ಕೃತಿಯ ಒಂದು ಭಾಗವಾಗಿದೆ. ಸೆಪ್ಟೆಂಬರ್ 27, 2014 ರಂದು ಪ್ರಧಾನಿ ನರೇಂದ್ರ ಮೋದಿ ಯು.ಎನ್ ಸಾಮಾನ್ಯ ಸಭೆಯಲ್ಲಿ ಮಾಡಿದ ಭಾಷಣದಲ್ಲಿ ‘ಅಂತರರಾಷ್ಟ್ರೀಯ ಯೋಗ ದಿನವನ್ನು’ ಅಳವಡಿಸಿಕೊಳ್ಳುವ ಆಲೋಚನೆಯನ್ನು ಪ್ರಸ್ತಾಪಿಸಿದರು. ಭಾರತದ ರಾಯಭಾರಿ ಅಶೋಕ್ ಕುಮಾರ್ ಮುಖರ್ಜಿ ಜೂನ್ 21 ಅನ್ನು ಅಂತರರಾಷ್ಟ್ರೀಯ ಯೋಗ ದಿನವನ್ನಾಗಿ ಸ್ವೀಕರಿಸುವ ಕಲ್ಪನೆಯನ್ನು ಪರಿಚಯಿಸಿದರು.
ಈ ನಿರ್ಣಯವು ಭಾರತಕ್ಕೆ ಸಂದ ಹೆಮ್ಮೆಯ ಕ್ಷಣವಾಗಿದೆ, ಏಕೆಂದರೆ ಇದು 177 ರಾಷ್ಟ್ರಗಳಿಂದ ಬೆಂಬಲವನ್ನು ಗಳಿಸಿತು, ಇದು ಯಾವುದೇ ಯು.ಎನ್ ನಿರ್ಣಯಕ್ಕೆ ಸಿಕ್ಕ ಅತಿ ಹೆಚ್ಚಿನ ಸಹಮತವಾಗಿದೆ. ವಿಶ್ವದಾದ್ಯಂತ, ಯುನೈಟೆಡ್ ಸ್ಟೇಟ್ಸ್‌ನಿಂದ ಕೆನಡಾವರೆಗಿನ ದೇಶಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸುತ್ತವೆ.
ಮಹತ್ವ
ಯೋಗವು ‘ಯುಜ್' ಎಂಬ ಸಂಸ್ಕೃತ ಪದದಿಂದ ಬಂದಿದೆ. ಇದರ ಅರ್ಥ 'ಸಂಯೋಜಿಸು' ಎಂದು. ಅಂಗ್ಲಭಾಷೆಯಲ್ಲಿ 'ಯೂನಿಯನ್’ ಎಂಬ ಅರ್ಥ ಕೊಡುತ್ತದೆ. ಇದು ಭಾರತದಲ್ಲಿ ಹುಟ್ಟಿದ ಆಧ್ಯಾತ್ಮಿಕ, ದೈಹಿಕ ಮತ್ತು ಮಾನಸಿಕ ಅಭ್ಯಾಸಗಳ ಚಟುವಟಿಕೆಗಳಾಗಿವೆ.
ಒಬ್ಬ ವ್ಯಕ್ತಿಯ ಜೀವನದಲ್ಲಿ ಯೋಗದ ಹಲವಾರು ಪ್ರಯೋಜನಗಳನ್ನು ಮತ್ತು ಅದರ ಮಹತ್ವವನ್ನು ಎತ್ತಿ ಹಿಡಿಯಲು ಅಂತರರಾಷ್ಟ್ರೀಯ ಯೋಗ ದಿನವನ್ನು ವಿಶ್ವದಾದ್ಯಂತ ಆಚರಿಸಲಾಗುತ್ತದೆ. ವಿಭಿನ್ನ ಆಸನಗಳು ಅಥವಾ ಭಂಗಿಗಳು ಮತ್ತು ಪ್ರಾಣಾಯಾಮಗಳು ಮತ್ತು ಧ್ಯಾನವನ್ನು ಮಾಡುವುದರಿಂದ ಒತ್ತಡವನ್ನು ನಿವಾರಿಸಬಹುದು ಮತ್ತು ರೋಗನಿರೋಧಕ ಶಕ್ತಿ ಮತ್ತು ಶ್ವಾಸಕೋಶ ಮತ್ತು ಇತರ ದೈಹಿಕ ಕಾರ್ಯಗಳನ್ನು ಸುಧಾರಿಸಬಹುದು. ಯೋಗವು ಇಡೀ ದೇಹ ಮತ್ತು ಮಾನಸಿಕ ಆರೋಗ್ಯಕ್ಕೆ ವಿವಿಧ ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ.
ಈ ವರ್ಷದ ಥೀಮ್
ಅಂತರರಾಷ್ಟ್ರೀಯ ಯೋಗ ದಿನಾಚರಣೆ (ಐಡಿವೈ) 2021 ರ ಮುಖ್ಯ ವಿಷಯವೆಂದರೆ
‘ಯೋಗ ಫಾರ್ ವೆಲ್ನೆಸ್’
ಇದು ದೈಹಿಕ ಮತ್ತು ಮಾನಸಿಕ ಯೋಗಕ್ಷೇಮಕ್ಕಾಗಿ ಯೋಗವನ್ನು ಅಭ್ಯಾಸ ಮಾಡುವುದರ ಮೇಲೆ ಕೇಂದ್ರೀಕರಿಸುತ್ತದೆ.
- COVID-19 ರೋಗಿಗಳ ಮಾನಸಿಕ-ಸಾಮಾಜಿಕ ಆರೈಕೆ ಮತ್ತು ಪುನರ್ವಸತಿಯಲ್ಲಿ ಯೋಗವು ಮಹತ್ವದ ಪಾತ್ರ ವಹಿಸುತ್ತದೆ. ಮಾನವಕುಲದ ದೈಹಿಕ ಮತ್ತು ಮಾನಸಿಕ ಯೋಗಕ್ಷೇಮವನ್ನು ಉತ್ತೇಜಿಸುವಲ್ಲಿ ಯೋಗದ ಪಾತ್ರ ಅನನ್ಯವಾದುದು. ದೈಹಿಕ ಚಟುವಟಿಕೆಗಾಗಿ ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯು.ಎಚ್.ಒ) ಜಾಗತಿಕ ಕ್ರಿಯಾ ಯೋಜನೆಯಲ್ಲಿ ಯೋಗವನ್ನು ಸೇರಿಸಿದೆ. ಡಬ್ಲ್ಯು.ಎಚ್.ಒ ನ ಎಲ್ಲ ಸದಸ್ಯರಿಗೂ ಯೋಗಾಭ್ಯಾಸ ಮಾಡಲು ತಿಳಿಸಲಾಗಿದೆ.
- COVID-19 ಕಾಯಿಲೆಗಳಿಂದ ಶೀಘ್ರವಾಗಿ ಚೇತರಿಸಿಕೊಳ್ಳಲು ಯೋಗವು ಪ್ರಯೋಜನಕಾರಿಯಾಗಿದೆ ಮತ್ತು ವೈರಸ್‌ನಿಂದ ಉಂಟಾಗುವ ಉಸಿರಾಟದ ತೊಂದರೆಗಳಿಗೆ ಸಹ ಇದು ಮುಕ್ತಿ ನೀಡಿದೆ.
ಕೋವಿಡ್ ಪರಿಸ್ಥಿತಿಯ ನಡುವೆ ಈ ಬಾರಿ ಅಂದರೆ ಸತತ ಎರಡನೆಯ ಬಾರಿ ನಾವು ಅಂತರರಾಷ್ಟ್ರೀಯ ಯೋಗ ದಿನವನ್ನು ಒಳಾಂಗಣದಲ್ಲಿಯೇ ಇದ್ದು ಯೋಗಾಭ್ಯಾಸ ಮಾಡುವುದು ಮತ್ತು ವರ್ಚುವಲ್ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದು ಸೂಕ್ತವಾಗಿದೆ.
No comments:
Post a Comment