Jul 13, 2022

Some Interesting Questions and Answers In Science PART-1| ವಿಜ್ಞಾನ ಕುರಿತ ಕೆಲವು ಆಸಕ್ತಿದಾಯಕ ಪ್ರಶ್ನೋತ್ತರಗಳು ಭಾಗ-1|

Some Interesting Questions and Answers In Science PART-1| ವಿಜ್ಞಾನ ಕುರಿತ ಕೆಲವು ಆಸಕ್ತಿದಾಯಕ ಪ್ರಶ್ನೋತ್ತರಗಳು ಭಾಗ-1|

 



ನಕ್ಷತ್ರಕ್ಕೂ, ಗ್ರಹಕ್ಕೂ ಇರುವ ವ್ಯತ್ಯಾಸವೇನು?

ನಕ್ಷತ್ರಗಳು (Stars) ಅತ್ಯಂತ ಹೆಚ್ಚು ಉಷ್ಣತೆಯನ್ನು ಹೊಂದಿರುವ ಅನಿಲಗೋಳಗಳು. ಆವುಗಳಿಗೆ ಸ್ವಯಂ ಪ್ರಕಾಶವಿದೆ. ಉದಾಹರಣೆಗೆ ನಮಗೆ ಸಮೀಪವಿರುವ ಸೂರ್ಯನನ್ನೇ ತೆಗೆದುಕೊಳ್ಳಿ, ಅವನ ಮೇಲ್ಮೈ ಉಷ್ಣತೆ 6,000° ಸೆಲ್ಸಿಯಸ್ ನಮ್ಮ ಸೂರ್ಯನಿಗಿಂತ ಸಹಸ್ರಾರು ಪಟ್ಟು ಬಿಸಿಯಿರುವ ನಕ್ಷತ್ರಗಳ ಬಗ್ಗೆ ಊಹಿಸುವುದೂ ಕಷ್ಟ

ಅದೇ ಗ್ರಹಗಳ (Planets) ಗಾತ್ರವು ನಕ್ಷತ್ರದ ಗಾತ್ರದ ಹೋಲಿಕೆಯಲ್ಲಿ ಬಹಳ ಸಣ್ಣದು. ಗ್ರಹಗಳು ಅಂಡಾಕಾರದ ಪಥದಲ್ಲಿ ನಕ್ಷತ್ರಗಳಿಗೆ ಸುತ್ತುಬರುತ್ತವೆ. ಆ ಪಥವನ್ನು ನಾವು ಕಕ್ಷೆ (Orbit) ಎಂದು ಕರೆಯುತ್ತೇವೆ. ಗ್ರಹಕ್ಕೆ ತನ್ನದೇ ಆದ ಪ್ರಕಾಶವಿರುವುದಿಲ್ಲ. ಅದು ತಾನು ಭ್ರಮಿಸುತ್ತಿರುವ ನಕ್ಷತ್ರದ ಬೆಳಕನ್ನು ಪ್ರತಿಬಿಂಬಿಸುತ್ತದೆ.

ನಮ್ಮ ಸೌರವ್ಯೂಹದಲ್ಲಿ 8 ಗ್ರಹಗಳಿವೆ. ಅವುಗಳಲ್ಲಿ ಸೂರ್ಯನಿಂದ ಮೂರನೇ ಗ್ರಹವೇ ಭೂಮಿ, ಹಾಗೆಂದು ಎಲ್ಲ ನಕ್ಷತ್ರಗಳಿಗೂ ಗ್ರಹಗಳಿರಬೇಕೆಂಬುದೇನಿಲ್ಲ.

 

    ಭೂಮಿಯು ತನ್ನ ಅಕ್ಷ (Axis) ದಲ್ಲಿ ಒಂದು ಸುತ್ತು ತಿರುಗಲು ಎಷ್ಟು ಅವಧಿ ಬೇಕು?

ಭೂಮಿಗೆ ಒಮ್ಮೆ ತನ್ನ ಅಕ್ಷದಲ್ಲಿ ಒಂದು ಸುತ್ತು ತಿರುಗಲು 23 ಘಂಟೆಗಳು, 56 ನಿಮಿಷಗಳು ಹಾಗೂ 4 ಸೆಕೆಂಡುಗಳು ಬೇಕು. ನತ್ರಗಳನ್ನು ಆಧಾರವಾಗಿಟ್ಟು ಕೊಂಡು ಇದನ್ನು ನಿರ್ಧರಿಸಲಾಗುತ್ತದೆ. ಒಂದು ನಕ್ಷತ್ರ ಇಂದು ದಕ್ಷಿಣದಲ್ಲಿ ಕಾಣಿಸಿದರೆ, ನಾಳೆ ಅದೇ ಸ್ಥಳದಲ್ಲಿ ಕಾಣಿಸಲು ತಗಲುವ ಸಮಯವನ್ನು ಒಂದು ದಿನವೆಂದು ಲೆಕ್ಕ ಹಾಕಲಾಗುತ್ತದೆ. ಆದರೆ ನಮ್ಮ ಅನುಕೂಲಕ್ಕನುಸಾರ ನಮ್ಮ ದಿನದಲ್ಲಿ 24 ಘಂಟೆಗಳಿವೆ. ಅಂದರೆ ಪ್ರತಿನಿತ್ಯ ಒಂದು ನಕ್ಷತ್ರ ನಮ್ಮ ಲೆಕ್ಕಕ್ಕೆ 4 ನಿಮಿಷ ತಡವಾಗಿ ಉದಯಿಸುತ್ತದೆ.

 

    ಭೂಮಿಗೆ ಸೂರ್ಯನ ಸುತ್ತ ಒಮ್ಮೆ ಭ್ರಮಿಸಲು ಎಷ್ಟು ಸಮಯ ಬೇಕು?

ಭೂಮಿಯು ಸೂರ್ಯನ ಸುತ್ತ ಒಮ್ಮೆ ಭ್ರಮಿಸಲು 365 ದಿನಗಳು, 6 ಘಂಟೆಗಳು, 9 ನಿಮಿಷಗಳು ಮತ್ತು 10 ಸೆಕೆಂಡುಗಳನ್ನು ತೆಗೆದುಕೊಳ್ಳುತ್ತದೆ. ಇದನ್ನೇ ನಾವು ಒಂದು ವರ್ಷವೆಂದು ಪರಿಗಣಿಸುತ್ತೇವೆ. ಆದರೆ ಇದು ನಮ್ಮ ವಾರ್ಷಿಕ ಪಂಚಾಂಗದಲ್ಲಿ ಎಷ್ಟೊಂದು ಸಮಸ್ಯೆಗಳನ್ನು ಸೃಷ್ಟಿ ಮಾಡಿದೆ, ಗೊತ್ತೆ? ನಾವು ಬಳಸುವ 365 ದಿನಗಳ ವರ್ಷ ನಿಜವಾದ ವರ್ಷದ ಲೆಕ್ಕಕ್ಕಿಂತ ಕಡಿಮೆ. ನಾವು ಇದನ್ನು ಪರಿಗಣಿಸದೆ ಹೋದರೆ 4 ವರ್ಷಗಳಲ್ಲಿ ಒಂದು ದಿನ ಹೆಚ್ಚಾಗುತ್ತದೆ. ಹೀಗಾಗಿಯೇ ಪ್ರತಿ 4 ವರ್ಷಗಳಿಗೊಮ್ಮೆ ನಮ್ಮ ವರ್ಷಕ್ಕೆ ಒಂದು ದಿನವನ್ನು ಕೂಡಿಸಿ ಅಧಿಕ ವರ್ಷವೆಂದು ಕರೆಯುತ್ತೇವೆ. ಆ ವರ್ಷ ಫೆಬ್ರವರಿ ತಿಂಗಳಿಗೆ 28ರ ಬದಲಾಗಿ 29 ದಿನಗಳಿರುತ್ತವೆ. ಹೀಗಾಗಿ ಅಧಿಕ ವರ್ಷಕ್ಕೆ 366 ದಿನಗಳು,

ಯಾವುದಾದರೂ ಒಂದು ವರ್ಷ ಅಧಿಕ ವರ್ಷವೇ ಎಂದು ನಿರ್ಧರಿಸಲು ನೀವು ಆ ವರ್ಷಕ್ಕೆ 4 ರಿಂದ ಭಾಗಿಸಿದರೆ ಸಾಕು. ಶೇಷ ಉಳಿಯದಿದ್ದರೆ ಅದು ಅಧಿಕ ವರ್ಷ. 2004, 2008, 2012 - ಇವೆಲ್ಲವೂ ಅಧಿಕ ವರ್ಷಗಳು. ಆದರೆ 100 ರಿಂದ ಭಾಗಿಸಲ್ಪಡುವ ವರ್ಷಗಳು ಮಾತ್ರ ಅಧಿಕ ವರ್ಷಗಳಲ್ಲ! 400 ರಿಂದ ಭಾಗಿಸಲ್ಪಟ್ಟರೆ ಮಾತ್ರ ಅದು ಅಧಿಕ ವರ್ಷ. ಹೀಗೆ 2000 ಅಧಿಕ ವರ್ಷ. ಆದರೆ 1900, 2100 ಅಧಿಕ ವರ್ಷಗಳಲ್ಲ.

 

   ಸೂರ್ಯನು ಪೂರ್ವದಲ್ಲಿ ಉದಯಿಸಿ, ಪಶ್ಚಿಮದಲ್ಲಿ ಮುಳುಗುವುದೇಕೆ?

ಭೂಮಿಯು ತನ್ನ ಅಕ್ಷದಲ್ಲಿ ಪಶ್ಚಿಮದಿಂದ ಪೂರ್ವಕ್ಕೆ ತಿರುಗುವುದು. ಇದರಿಂದಾಗಿ ಇಡೀ ಆಕಾಶವು ನಮಗೆ ಪೂರ್ವದಿಂದ ಪಶ್ಚಿಮಕ್ಕೆ ಚಲಿಸುತ್ತಿರುವಂತೆ ಭಾಸವಾಗುವುದು. ಆದರೆ ಭೂಮಿಯು ಸ್ವಲ್ಪ ಓರೆಯಾಗಿ ತಿರುಗುವುದರಿಂದ, ಸೂರ್ಯನು ಭೂಮಧ್ಯರೇಖೆಗೆ ನೇರವಾಗಿ ಚಲಿಸದೆ ಓರೆಯಾಗಿ ಚಲಿಸಿದಂತೆ ಭಾಸವಾಗುತ್ತದೆ. ನಮಗೆ ಇದರಿಂದ ಸೂರ್ಯ ಪೂರ್ವದಲ್ಲಿ ಹುಟ್ಟಿ ಪಶ್ಚಿಮದಲ್ಲಿ ಮುಳುಗಿದಂತೆ ಭಾಸವಾಗುತ್ತದೆ. ವಾಸ್ತವವಾಗಿ ಸೂರ್ಯ ಇದ್ದಲ್ಲೇ ಇರುತ್ತಾನೆ ಭೂಮಿ ಸೂರ್ಯನ ಸುತ್ತಾ ತಿರುಗುತ್ತ ತನ್ನ ಅಕ್ಷದ ಮೇಲೆ ತಿರುಗುವುದರಿಂದ ಹೀಗೆ ಕಾಣುತ್ತದೆ.

Jul 12, 2022

Theory of Evolution - Interesting Facts PART -1| ವಿಕಾಸವಾದದ ಕುತೂಹಲಕರ ಸಂಗತಿಗಳು ಭಾಗ - 1|

Theory of Evolution - Interesting Facts PART -1| ವಿಕಾಸವಾದದ ಕುತೂಹಲಕರ ಸಂಗತಿಗಳು ಭಾಗ - 1|

 


ವಿಕಾಸವಾದದ ಕಥೆ

ಭೂಮಿಯ ಮೇಲಿರುವ ಪ್ರತಿಯೊಂದು ಸಜೀವಿಯು ಒಂದು ಸಾಮಾನ್ಯ ಹಿರಿಯ ಜೀವಿಯಿಂದ ಉಗಮಿಸಿದೆ. ಸಜೀವಿಗಳು ಬಗೆಬಗೆಯ ಗುಣಾಣುಗಳನ್ನು (genes) ಹೊಂದಿದ್ದರೂ ಆ ಎಲ್ಲ ಗುಣುಗಳ ಮೂಲವಿನ್ಯಾಸ ಒಂದು ಆಗಿದೆ. ಬಹುಶಃ ನಮ್ಮೆಲ್ಲರ ಆ ಅತ್ಯಂತ ಹಿರಿಯ ಜೀವಿ ಒಂದು ಬ್ಯಾಕ್ಟೀರಿಯ ಕೋಶವಿರಬೇಕು. ಆದರೆ ಒಂದು ಬ್ಯಾಕ್ಟೀರಿಯ ಕೋಶ ಇಷ್ಟೆಲ್ಲ ವಿಭಿನ್ನವಾದ ಜೀವಿಗಳು ಅಂದರೆ ಶಾರ್ಕ್‌ಗಳು, ಗುಲಾಬಿ ಹೂ, ಕುಂಬಳಕಾಯಿ ಮತ್ತು ನಾಯಿಗಳನ್ನು ಸೃಷ್ಟಿಸಲು ಹೇಗೆ ಸಾಧ್ಯ? ಅಲ್ಲವೇ!! ಇದಕ್ಕೆ ಉತ್ತರ ಹುಡುಕಿದರೆ ತಿಳಿಯುವುದು, ಸಜೀವಿಗಳು ನಿಧಾನವಾಗಿ ಬದಲಾವಣೆಗೊಳ್ಳುತ್ತವೆ. ಅಂದರೆ ವಿಕಾಸ ಹೊಂದುತ್ತವೆ. ಮಿಲಿಯಗಟ್ಟಲೆ ವರ್ಷಗಳ ಅವಧಿಯಲ್ಲಿ ಉಂಟಾದ ಸಣ್ಣ ಸಣ್ಣ ಬದಲಾವಣೆಗಳು ತೀರಾ ಹೊಸ ಪ್ರಾಣಿಗಳ ಉಗಮಕ್ಕೆ ಕಾರಣವಾಗಿವೆ.

ಅಂತಹ ಕೆಲವೊಂದು ವಿಕಾಸವಾದ ಜೀವಿಗಳ ಸ್ಪಷ್ಟತೆ ಇಲ್ಲಿದೆ.

 

ಚೊಂದೆಕಪ್ಪೆಯಿಂದ ಪ್ರೌಢಕಪ್ಪೆಯ ತನಕ

 

ಕಪ್ಪೆಗಳ ಹಿರಿಯರು ಮೀನುಗಳು. ಸುಮಾರು 300 ಮಿಲಿಯ ವರ್ಷಗಳ ಹಿಂದೆ ಶಕ್ತಿಯುತ ಈಜುರೆಕ್ಕೆಗಳನ್ನು ಹೊಂದಿದ್ದ ಒಂದು ಪ್ರಕಾರದ ಮೀನು ನೀರಿನಿಂದ ಹೊರಗೆ, ನೆಲದ ಮೇಲೆ ತನ್ನ ದೇಹವನ್ನು ಎಳೆಯುತ್ತ ಮುನ್ನುಗ್ಗಲು ಆರಂಭಿಸಿತು. ಇದನ್ನೇ ಕಪ್ಪೆಗಳು ತಮ್ಮ ಹಿಂದಿನ ಜೀವನಪರಿಯನ್ನು ಮತ್ತೊಮ್ಮೆ ಆಭಿನಯಿಸುತ್ತವೆ. ಅವುಗಳು ನೀರಿನಲ್ಲಿ ಜೀವಿಸುವ ಚೊಂದೆಕಪ್ಪೆಗಳಾಗಿ ತಮ್ಮ ಬಾಲಗಳನ್ನು ಬಡಿಯುತ್ತಾ ಜೀವನವನ್ನು ಆರಂಭಿಸುತ್ತವೆ.  ಕೆಲವು ವಾರಗಳಲ್ಲಿ ಅವು ತಮ್ಮ ಬಾಲಗಳನ್ನು ಕಳೆದುಕೊಳ್ಳುತ್ತವೆ,  ಬದಲಾಗಿ ಕಾಲುಗಳು ಬೆಳೆಯುತ್ತವೆ. ವಯಸ್ಕ ಕಪ್ಪೆಗಳಾಗಿ ನೆಲದ ಮೇಲೆ ಜೀವನ ಆರಂಭಿಸುತ್ತವೆ.

 

ಪ್ರಾಣಿಗಳೇಕೆ ಏಕಾಸ ಹೊಂದುತ್ತವೆ? 

ಭೂಮಿಯ ಮೇಲಿರುವ ಎಲ್ಲ ಸಜೀವಿಗಳು ವಿಕಾಸದ ಪರಿಣಾಮವಾಗಿಯೇ ಅಸ್ತಿತ್ವಕ್ಕೆ ಬಂದಿವೆ. ಇದಕ್ಕೆ ಪಳೆಯುಳಿಕೆಗಳಿಂದ ದೊರೆಯುವ ಸಾಕ್ಷ್ಯಾಧಾರಗಳು ಮೂಲ. ಸಜೀವಿಗಳ ರಚನೆ ಮತ್ತು ರಾಸಾಯನಿಕ ಒಳವ್ಯವಸ್ಥೆಗಳನ್ನು ಹೋಲಿಸಿದಾಗಲೂ ಈ ಅಂಶವು ಸ್ಪಷ್ಟವಾಗುತ್ತದೆ. ಆದರೆ ಜೀವವಿಕಾಸಕ್ಕೆ ಸ್ಫೂರ್ತಿ ಯಾವುದು? ವಿಜ್ಞಾನಿಗಳು ಪ್ರಾಕೃತಿಕ ಆಯ್ಕೆಯನ್ನೇ ಇದಕ್ಕೆ ಕಾರಣವೆನ್ನುತ್ತಾರೆ. ಎಲ್ಲ ಪ್ರಾಣಿ ಸಸ್ಯಗಳು ಈ ಭೂಮಿಯ ಮೇಲೆ ಜೀವಿಸುವಾಗ ಸಾಧ್ಯವಾಗುವುದಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿ ವಂಶಾಭಿವೃದ್ಧಿ ಮಾಡುತ್ತವೆ. ಹಲವು ಸಾಯುತ್ತವೆ. ಕೆಲವು ಬೆಳೆದು ಮತ್ತೆ ವಂಶಾಭಿವೃದ್ಧಿಯನ್ನು ನಡೆಸುತ್ತವೆ.

ಸಾಮಾನ್ಯವಾಗಿ ಹೇಳುವುದಾದರೆ ಪರಿಸ್ಥಿತಿಗೆ ಅನುಗುಣವಾಗಿ ಹೊಂದಿಕೊಳ್ಳುವ ಶಕ್ತಿ ಇರುವ ಜೀವಿಗಳು ಬದುಕುತ್ತವೆ, ಉಳಿದವುಗಳು ಸಾಯುತ್ತವೆ. ಪರಿಸರಕ್ಕೆ ಹೊಂದಿಕೊಂಡ ಜೀವಿಗಳ ಗುಣಾಣುಗಳು, ಮುಂದಿನ ತಲೆಮಾರಿಗೆ ದಾಟಿ ಹೋಗುತ್ತವೆ. ನಿಶ್ಯಕ್ತ ಜೀವಿಗಳನ್ನು ಪ್ರಕೃತಿ ತೊಡೆದು ಹಾಕುತ್ತದೆ. ಇದರಿಂದ ತಲೆಮಾರುಗಳು ಬದಲಾದಂತೆ ಜೀವಿಗಳ ಗುಣಮಟ್ಟ ಉತ್ತಮಗೊಳ್ಳುತ್ತದೆ, ಪರಿಸರಕ್ಕೆ ಅವು ಚೆನ್ನಾಗಿ ಹೊಂದಿಕೊಳ್ಳಬಲ್ಲವು.

 

ಕುದುರೆಯ ವಿಕಾಸ

ಕುದುರೆಗಳು 50 ಮಿಲಿಯ ವರ್ಷಗಳಷ್ಟು ಹಿಂದಿನ ಒಂದು ಪ್ರಾಣಿ ಕುಟುಂಬಕ್ಕೆ ಸೇರಿರುತ್ತವೆ. ಕುದುರೆಗಳ ಕುಟುಂಬದ ಅತ್ಯಂತ ಪ್ರಾಚೀನ ಸದಸ್ಯ ಹೈರಾಕೊತೇರಿಯಂ. ಅದರ ಗಾತ್ರ ನಾಯಿಯಷ್ಟಿದ್ದು, ಕಾಲುಗಳಲ್ಲಿ ನಾಲ್ಕು ನಾಲ್ಕು ಬೆರಳುಗಳಿದ್ದವು. ಆ ವಂಶದಲ್ಲಿ ಹುಟ್ಟಿದ ಇತರ ಪ್ರಾಣಿಗಳು ಗಾತ್ರದಲ್ಲಿ ದೊಡ್ಡದಾಗುತ್ತಾ ಬಂದವು. ಕಾಲುಗಳಲ್ಲಿ ಬೆರಳುಗಳ ಸಂಖ್ಯೆ ಕಡಿಮೆಯಿತ್ತು, ಇಂದಿನ ಕುದುರೆಗಳಿಗೆ ಪ್ರತಿ ಕಾಲಿನಲ್ಲಿ ಕೇವಲ ಒಂದು ಬೆರಳು ಅಥವಾ ಗೊರಸು ಇದೆ.

 

ಕೆಲವೊಂದು ಪ್ರಾಣಿಗಳು ಕಣ್ಮರೆಯಾಗುತ್ತಿರುವುದೇಕೆ ?

ಕೆಲವು ಪ್ರಕಾರದ ಪ್ರಾಣಿಗಳು ಈ ಜಗತ್ತಿನಿಂದಲೇ ಕಾಣೆಯಾಗುತ್ತಿವೆ. ಇನ್ನಿತರ ಜಾತಿಗಳು ಚೆನ್ನಾಗಿ ಬದುಕುಳಿಯುತ್ತವೆ. ಇದು ವಿಕಾಸವಾದದ ಒಂದು ಭಾಗ, ಯಶಸ್ವೀ ಪ್ರಾಣಿಪ್ರಕಾರಗಳು ಹೊಸ ಸ್ಥಳಗಳಿಗೆ ವಲಸೆ ಹೋಗುತ್ತವೆ, ಹೊಸ ಪ್ರಕಾರದ ಆಹಾರಗಳನ್ನು ತಿನ್ನತೊಡಗುತ್ತವೆ. ಹವಾಗುಣದ ಬದಲಾವಣೆಗಳಿಗೆ ಹೊಂದಿಕೊಳ್ಳುತ್ತದೆ, ಹೊಸ ರೂಪಗಳಿಗೆ ವಿಕಾಸ ಹೊಂದುತ್ತವೆ. ಹಳೆಯ ಪ್ರಕಾರಗಳು ನಾಶವಾದಂತೆ, ಹೊಸ ಪ್ರಕಾರಗಳು ಅವುಗಳ ಸ್ಥಾನದಲ್ಲಿ  ತಲೆಯೆತ್ತುತ್ತವೆ. ಅರಣ್ಯನಾಶ, ಕಟ್ಟಡ ಮತ್ತು ರಸ್ತೆ ನಿರ್ಮಾಣ ಮೊದಲಾದ ಚಟುವಟಿಕೆಗಳು ಪ್ರಾಕೃತಿಕ ಸ್ವರೂಪದವಲ್ಲ. ಈ ಕಾರಣಗಳಿಂದ ಪ್ರಾಣಿಗಳು ನಿರ್ವಂಶಗೊಳ್ಳುತ್ತವೆ. ಈ ಬಗೆಯಲ್ಲಿ ಉಂಟಾಗುವ ಅಂತರಗಳನ್ನು ತುಂಬುವುದು ಕೂಡಾ ವಿಕಾಸಕ್ಕೆ ಕಷ್ಟಸಾಧ್ಯ. ಇದೀಗ ನಾವು ಪ್ರತಿನಿತ್ಯವೂ ಸಾವಿರಾರು ಪ್ರಾಣಿಗಳನ್ನು ಕಳೆದುಕೊಳ್ಳುತ್ತಿದ್ದೇವೆ, ಅವುಗಳ ಸ್ಥಾನ ತುಂಬಿಕೊಳ್ಳುತ್ತಿಲ್ಲ.

ಹೀಗೆ ಆದರೆ ಪ್ರಾಕೃತಿಕ ಸಮತೋಲನ ಕಾಪಾಡಿಕೊಳ್ಳುವುದು ಕಷ್ಟವಾಗುತ್ತದೆ. ಪ್ರಕೃತಿದತ್ತ ಕೊಡುಗೆ ನೈಸರ್ಗಿಕವಾಗಿ ಅದರ ಪಾಡಿಗೆ ಅದನ್ನು ಬಿಟ್ಟು ಬದುಕುವುದೇ ನಾವು ಪ್ರಕೃತಿಗೆ ನೀಡುವ ಒಂದು ಅಮೋಘ ಕೊಡುಗೆಯಾಗಿದೆ. 

Jul 11, 2022

Build reliable quality in children| ಮಕ್ಕಳಲ್ಲಿ ವಿಶ್ವಾಸಾರ್ಹತೆ ಮೂಡಿಸಿ|

Build reliable quality in children| ಮಕ್ಕಳಲ್ಲಿ ವಿಶ್ವಾಸಾರ್ಹತೆ ಮೂಡಿಸಿ|


ಮೊನ್ನೆ ನಮ್ ಪಕ್ಕದ ಮನೆ ಮಗು ಪರೀಕ್ಷೇಲಿ ಒಳ್ಳೆ ಮಾರ್ಕ್ಸ್ ತಗೊಂಡಿದಾನೆ ಅಂತಾ ಸಿಹಿ ಕೊಡಕ್ ಬಂದಿದ್ರು ಅವರಪ್ಪ. ಆದ್ರೆ ಅವನ್ ಟೀಚರ್ ಒಂದ್ ತಿಂಗಳು ಹಿಂದೆ ಬಂದು ನಿಮ್ ಮಗನ್ನ ನಮ್ಬೇಡಿ ಮಾಡ್ಬಾರ್ದ್ ಕೆಲಸ ಮಾಡ್ತಾನೆ. ಬರಿ ಸುಳ್ಳು ಹೇಳ್ತಾನೆ, ಓದ್ತೀನಿ ಅನ್ನೋ ಒಂದೇ ಕಾರಣಕ್ಕೆ ಅದುನ್ನ ಬಳುಸ್ಕೊಂಡು ಒಳ್ಳೆ ಹುಡ್ಗನ್ ತರ ನಟುಸ್ತಾನೆ, ಇವನನ್ನ ನಾನು ನಂಬೋದೆ ಇಲ್ಲಾ ಅಂತ ಮಾರುದ್ದ ಕಂಪ್ಲೈಂಟ್ ಹೇಳಿದ್ರು. ಅವಾಗ ನಂಗ್ ಅನ್ಸಿದ್ದು ಈಗಿನ ಯುವ ಪೀಳಿಗೆಯ ಮಕ್ಕಳಿಗೆ ಶಿಕ್ಷಣದ ಜೊತೆಗೆ ವಿಶ್ವಾಸಾರ್ಹತೆ ಗಳಿಸುವ ಪರಿ ತಿಳಿಸಬೇಕು ಅಂತ. ನಿಮಗೆಲ್ಲ ಅಂದ್ರೆ ನಮಗೆಲ್ಲ ಚಿಕ್ಕವಯಸ್ಸಲ್ಲಿ  ಹೇಳಿದ ಕಥೆಗಳು, ಸನ್ನಿವೇಶಗಳನ್ನು ಬಳಸಿಕೊಂಡು ಮಕ್ಕಳಲ್ಲಿ ವಿಶ್ವಾಸಾರ್ಹತೆ ಬೆಳೆಸುವ ಪರಿಯನ್ನು ವಿವರಿಸಲು ಪ್ರಯತ್ನಿಸಿದ್ದೇನೆ. ಓದಿ ಹರಸಿ ಹಾರೈಸಿ.

ವಿಶ್ವಾಸಾರ್ಹತೆ ವ್ಯಕ್ತಿತ್ವದ ಪ್ರಧಾನ ಅಂಶ, ವಿಶ್ವಾಸಕ್ಕೆ ಅರ್ಹನಲ್ಲದ ವ್ಯಕ್ತಿಯನ್ನು ಸಮಾಜ ಹೇಗೆ ನೋಡುತ್ತದೆ ಎಂಬುದರ ಬಗ್ಗೆ ವಿವರಣೆ ಬೇಕಿಲ್ಲ. ಸಮಾಜದಲ್ಲಿ ಪ್ರಚಾರ ಗಿಟ್ಟಿಸಿಕೊಂಡವರೆಲ್ಲರೂ ವಿಶ್ವಾಸಾರ್ಹ ವ್ಯಕ್ತಿಗಳಾಗಿರಲಿಕ್ಕಿಲ್ಲ. ಓರ್ವ ಸಭ್ಯನೆನಿಸಿಕೊಳ್ಳಬೇಕಾದರೆ ಅವನು ಮೊದಲು ವಿಶ್ವಾಸಾರ್ಹನಾಗಬೇಕು, ಆದರೆ ವಿಶ್ವಾಸಾರ್ಹನಾಗುವುದು ಸುಲಭದ ವಿಷಯವಲ್ಲ. ಆ ಗುಣ ದೇಹದ ನರನಾಡಿಗಳಲ್ಲಿ ಹರಿಯಬೇಕಾದರೆ ಬಾಲ್ಯದಿಂದಲೇ ಮಗುವನ್ನು ಅಂತಹ ವ್ಯವಸ್ಥೆಗೆ ಒಳಪಡಿಸಬೇಕು. ಮೊದಲು ತಂದೆ ತಾಯಂದಿರು, ಪೋಷಕರು, ವಿಶ್ವಾಸಾರ್ಹರಿರಬೇಕು, ತರಗತಿಯ ಶಿಕ್ಷಕರು, ಶಾಲೆಯ ಮುಖ್ಯೋಪಾಧ್ಯಾಯರು ವಿಶ್ವಾಸಾರ್ಹ ವ್ಯಕ್ತಿಗಳಾಗಿರಬೇಕು, ಮಕ್ಕಳ ಮೇಲೆ ಬಲವಾದ ಪರಿಣಾಮವನ್ನು ಬೀರಬಲ್ಲ ವಿಶ್ವಾಸಾರ್ಹ ವ್ಯಕ್ತಿಗಳು ಪರಿಸರದಲ್ಲಿರಬೇಕು.

ಮಗು ಶಾಲೆಗೆ ಹೊರಡುವಾಗ ಅಮ್ಮ ಸಂಜೆಗೆ ಯಾವುದೋ ತಿಂಡಿಯನ್ನು ಮಾಡಿಡುತ್ತೇನೆ, ಎಂದು ಹೇಳುತ್ತಾಳೆ. ಶಾಲೆ ಬಿಟ್ಟ ನಂತರ ಅದರ ಬಗ್ಗೆಯೇ ಮನಸ್ಸಿನಲ್ಲಿ ಮೆಲುಕು ಹಾಕುತ್ತಾ ಮಗು ಮನೆಗೆ ಹಿಂದಿರುಗುತ್ತದೆ. ಆದರೆ, ಅಮ್ಮ ಸಲೀಸಾಗಿ ಅದನ್ನು ಮಾಡಲು ಸಾಧ್ಯವಾಗದುದಕ್ಕೆ ಸಬೂಬು ನೀಡುತ್ತಾಳೆ. ಮಗು ಶಾಲೆಗೆ ಹೋಗಿದ್ದಾಗ ತಾಯಿ ಸ್ನೇಹಿತರ ಮನೆಗೋ, ಮಾರುಕಟ್ಟೆಗೋ ಹೋಗಿಬರುತ್ತಾಳೆ. ಆದರೆ ಮಗುವಿನಿಂದ ಆ ವಿಷಯವನ್ನು ಮುಚ್ಚಿಡುತ್ತಾಳೆ, ಮಗು ಮಾತ್ರ ಅದನ್ನು ಹೇಗೋ ತಿಳಿದುಕೊಂಡುಬಿಡುತ್ತದೆ. ಮನೆಯಲ್ಲಿರುವ ತಿಂಡಿತಿನಿಸುಗಳನ್ನು ಕಪಾಟಿನಲ್ಲಿಟ್ಟು ಮಕ್ಕಳು ತೆಗೆದಾರೆಂದು ಬೀಗ ಹಾಕಿ ಇಡುವ ಪೋಷಕರಿದ್ದಾರೆ. ಮಕ್ಕಳ ಶಾಲಾ ಕಾರ್ಯಕ್ರಮಗಳಾದ ವರ್ಧಂತ್ಯುತ್ಸವ, ವಸ್ತುಪ್ರದರ್ಶನ, ಸಾಂಸ್ಕೃತಿಕ ಕಾರ್ಯಕ್ರಮ ಮೊದಲಾದವುಗಳಿಗೆ ಬರುತ್ತೇವೆ ಎಂದು ಹೇಳಿ ನಂತರ ಗೈರುಹಾಜರಾಗುವ ಪೋಷಕರಿದ್ದಾರೆ. ಮಕ್ಕಳು ತಪ್ಪು ಮಾಡಿದಾಗಲೆಲ್ಲ, “ಹೋಗು, ನೀನು ನನ್ನ ಮಗನಲ್ಲ/ಮಗಳಲ್ಲಎಂದು ಅವರ ಮೇಲೆ ತಂದೆತಾಯಂದಿರು ಮಾನಸಿಕ ಒತ್ತಡ ತರುವುದಿದೆ. ಮಕ್ಕಳನ್ನು ದಾರಿಗೆ ತರಲು ಎರಡು ಮೂರು ದಿನ ಅವರೊಂದಿಗೆ ಮೌನವ್ರತ ಆಚರಿಸುವ ತಂತ್ರಗಳನ್ನು ಬಳಸುವುದೂ ಇದೆ.

ಆದರೆ ಇವೆಲ್ಲವೂ ನೆಗೆಟಿವ್ ತಂತ್ರಗಳು, ಇವುಗಳ ಮಾನಸಿಕ ಕ್ರಿಯಾತ್ಮಕತೆ ಋಣಾತ್ಮಕವಾಗಿರುತ್ತದೆ. ಮಕ್ಕಳಲ್ಲಿ ಪ್ರೀತಿ, ವಿಶ್ವಾಸಗಳನ್ನು ಬೆಳೆಸುವುದರ ಬದಲಾಗಿ ದ್ವೇಷ, ಅವಿಶ್ವಾಸಗಳಿಗೆ ಈ ತಂತ್ರಗಳು ನೀರೆರೆಯುತ್ತವೆ. ಮಕ್ಕಳಿಗೆ ಕೊಟ್ಟ ಭರವಸೆಗಳನ್ನು ಈಡೇರಿಸಲೇಬೇಕು. ಅದರಲ್ಲಿ ಸಮಯಪಾಲನೆಯನ್ನು ತೋರಬೇಕು. ಬಲವಾದ ಕಾರಣಗಳಿಂದ ಕೆಲವೊಮ್ಮೆ ಈಡೇರಿಕೆ ಅಸಾಧ್ಯವಾದಾಗ ಮಕ್ಕಳಿಗೆ ತಿಳಿಯುವಂತೆ ವಿವರಿಸಿ ಹೇಳುವ ಸಹನೆ ಬೇಕು.

ಮನೆಯ ಸದಸ್ಯರ ಮಧ್ಯೆ ಉತ್ತಮ ಸಂಬಂಧಗಳು ಬೆಳೆಯಬೇಕಾದರೆ ಮೂಲತಃ ಬೇಕಾದ ಗುಣಾಂಶ ವಿಶ್ವಾಸಾರ್ಹತೆ. ಅದು ಒಬ್ಬನಿಗೆ ತನ್ನಲ್ಲಿ ತನಗೆ ಇರುವ ಗೌರವವನ್ನು ಹೆಚ್ಚಿಸುತ್ತದೆ. ಇಲ್ಲಿ ಒಬ್ಬ ವ್ಯಕ್ತಿ ಹೇಗೆ ಕಾಣಿಸುತ್ತಾನೆ ಎಂಬುದಕ್ಕಿಂತ ಆತ ಏನು ಎಂಬುದು ಅತಿ ಮುಖ್ಯ. ವ್ಯಕ್ತಿಯ ಬಾಹ್ಯ ನೋಟ ನಮ್ಮನ್ನು ಇಲ್ಲದ ನಿರೀಕ್ಷೆಯುತ್ತ ಕೊಂಡೊಯ್ಯಬಹುದು. ಆದರೆ ಆ ವ್ಯಕ್ತಿಯೊಂದಿಗಿನ ಕೆಲದಿನಗಳ ಒಡನಾಟ ಅವನೇನಿದ್ದಾನೆ. ಎಂಬುದನ್ನು ಸ್ಪಷ್ಟಗೊಳಿಸುತ್ತದೆ.

ವಿಶ್ವಾಸಾರ್ಹತೆ ಪರೀಕ್ಷೆಯ ಅಂಕಪಟ್ಟಿಗಳಲ್ಲಿ ಸ್ಪಷ್ಟವಾಗುವುದಿಲ್ಲ ಅಥವಾ ವ್ಯಕ್ತಿಯ ಹೆಸರು, ಜಾತಿ, ರಾಷ್ಟ್ರೀಯತೆಗಳು ಅವನ ವಿಶ್ವಾಸಾರ್ಹತೆಯನ್ನು ತಿಳಿಸುವುದು ಸಾಧ್ಯವಿಲ್ಲ. ಮಗು ಕಾಪಿ ಮಾಡಿ ಪರೀಕ್ಷೆಯಲ್ಲಿ ಕೈತುಂಬ ಅಂಕಗಳನ್ನು ಪಡೆದಿರಬಹುದು. ಆದರೆ ಆತನ ಆತ್ಮ ಆವನೋರ್ವ ಪಾತಕಿ ಎಂಬುದನ್ನು ಚುಚ್ಚಿ ಹೇಳುತ್ತಿರುತ್ತದೆ.

ಅಲ್ಲೊಬ್ಬ ರೈತ ದಿನವೂ ಬೇಕರಿಯಾತನಿಗೆ, ಒಂದು ಕಿಲೋ ಬೆಣ್ಣೆ ತಂದುಕೊಡುತ್ತಿದ್ದ, ಒಂದು ದಿನ ಬೇಕರಿಯಾತ ಬೆಣ್ಣೆಯನ್ನು ತೂಗಿ ನೋಡಲು ನಿರ್ಧರಿಸಿದ. ತೂಗಿದಾಗ ತೂಕ ಕಡಿಮೆಯಿರುವುದು ಸ್ಪಷ್ಟವಾಯಿತು. ಸಿಟ್ಟಿಗೆದ್ದ ಬೇಕರಿಯ ಮಾಲಿಕ ಆತನನ್ನು ನ್ಯಾಯಾಲಯಕ್ಕೆಳದ, ನ್ಯಾಯಾಧೀಶ ಬೆಣ್ಣೆಯನ್ನು ರೈತ ಹೇಗೆ ತೂಗುತ್ತಿರುವನೆಂಬುದನ್ನು ಪ್ರಶ್ನಿಸಿದ. ಆಗ ರೈತ ಹೇಳಿದ, "ಸ್ವಾಮಿ, ನಾನು ಹಳ್ಳಿ ಜೀವಿ, ನನ್ನ ಹತ್ತಿರ ತೂಕದ ಪಡಿಗಳಿಲ್ಲ. ಬದಲಾಗಿ ಒಂದು ಹಳೆಯ ತಕ್ಕಡಿ ಇದೆ.'' ನ್ಯಾಯಾಧೀಶ ಮರುಪ್ರಶ್ನಿಸಿದ. "ಹಾಗಾದರೆ ನೀನು ಹೇಗೆ ತೂಗುತ್ತೀಯಾ?" ಆಗ ರೈತನು, "ಸ್ವಾಮಿ, ಇವರು ನನ್ನಿಂದ ಬೆಣ್ಣೆಯನ್ನು ಕೊಳ್ಳುವುದಕ್ಕಿಂತ ಮೊದಲೇ ನಾನು ಇವರಿಂದ ಬ್ರೆಡ್ ತೆಗೆದುಕೊಳ್ಳಲು ಆರಂಭಿಸಿದ್ದೆ. ಪ್ರತಿದಿನ ಅವರು ನನಗೆ ನೀಡುತ್ತಿದ್ದ ಒಂದು ಕೆ.ಜಿ ಬ್ರೆಡ್‌ನ್ನು ಒಂದು ತಕ್ಕಡಿಯ ತಟ್ಟೆಯಲ್ಲಿರಿಸಿ, ಇನ್ನೊಂದರಲ್ಲಿ ಸಮಾನತೂಕದ ಬೆಣ್ಣೆಯನ್ನು ತೂಗುತ್ತಿದ್ದೆ. ಬೆಣ್ಣೆಯ ತೂಕ ಕಡಿಮೆಯಿದ್ದರೆ ಅದಕ್ಕೆ ನಾನು ಕಾರಣನಲ್ಲ, ಈ ಬೇಕರಿಯ ಮಾಲಿಕರೇ... ನೀವೇನಿದ್ದರೂ ಅವರನ್ನೇ ಶಿಕ್ಷಿಸಬೇಕು'' ಎಂದುತ್ತರಿಸಿದನು.

ಇಂದು ಎಷ್ಟೋ ಜನರು ವಿಶ್ವಾಸಾರ್ಹ ಬದುಕಿಗೆ ತಿಲಾಂಜಲಿ ನೀಡಿ, ಸುಳ್ಳುಗಳನ್ನು ಸಾರಾಸಗಟಾಗಿ ಹೇಳುವುದನ್ನು ಕಾಣುತ್ತೇವೆ, ಇನ್ನೆಷ್ಟೋ ಮಂದಿಗೆ ಸತ್ಯವೆಂದರೆ ಏನೆಂಬುದೇ ತಿಳಿಯದು. ಆದರೆ ಅವರು ಯಾರನ್ನು ಮೋಸಹೋಗಿಸುತ್ತಾರೆ?. ತಮ್ಮನ್ನು ತಾವೇ...ಅಲ್ಲವೇ!

ಒಬ್ಬ ಉತ್ತಮ ಸ್ನೇಹಿತ ಸತ್ಯವಂತನಿರಲೇಬೇಕು, ಸತ್ಯ ನೋವಿನಿಂದ ತುಂಬಿದ್ದರೆ ಅದನ್ನು ಮರೆಮಾಚಿಡುವವರೂ ಇದ್ದಾರೆ. ವಿಶ್ವಾಸಾರ್ಹ ವಿಮರ್ಶೆ ಕಹಿಯಾಗಿರುವುದೇ ಹೆಚ್ಚು. ಸುಳ್ಳು ಹೇಳುವವರು ತಮ್ಮ ಸುಳ್ಳುಹೇಳಿಕೆಗಳನ್ನು ನೆನಪಿಟ್ಟುಕೊಳ್ಳಬೇಕಲ್ಲವೆ? ಸತ್ಯವಂತನಿಗೆ ಒಂದೇ ದಾರಿ, ಆದರೆ ಒಂದು ಸುಳ್ಳನ್ನು ಮರೆಮಾಚಲು ನೂರು ಸುಳ್ಳುಗಳನ್ನು ಹೇಳಬೇಕಾದ ಪ್ರಮಾದದಿಂದ ತನ್ನನ್ನು ತಾನು ರಕ್ಷಿಸಿಕೊಳ್ಳುವುದು ಸಾಧ್ಯವಿಲ್ಲದ ವಿಚಾರ. "ನೀವು ವಿಶ್ವಾಸಾರ್ಹರಾದರೆ, ಜಗತ್ತಿನಲ್ಲಿ ಒಂದು ಕೆಟ್ಟ ಹುಳು ಕಡಿಮೆಯಾದ೦ತೆ'' ಎನ್ನುತ್ತಾನೆ ಚಿಂತಕ ಥಾಮಸ್‌ ಕಾರ್ಲೈಲ್.

"ತೋಳ, ತೋಳ, ಸಹಾಯಕ್ಕೆ ಬನ್ನಿ' ಎಂದು ಸುಮ್ಮಸುಮ್ಮನೆ ಕೂಗಿ ಕರೆಯುತ್ತಿದ್ದ ಕುರಿಗಾಹಿಯ ಕಥೆ ನಮಗೆಲ್ಲ ತಿಳಿದೇ ಇದೆ. ಹುಡುಗನಿಗೇನೋ ಸ್ವಲ್ಪ ತಮಾಷೆ ಬೇಕಿತ್ತು, ಹಳ್ಳಿಯ ಜನ ಅವನ ಕೂಗಿಗೆ ಸ್ಪಂದಿಸಿ ಓಡೋಡಿ ಬರುತ್ತಿದ್ದರು. ಬಂದಾಗಲೆಲ್ಲ ಅಲ್ಲಿ ತೋಳ ಇರುತ್ತಿರಲಿಲ್ಲ, ಬಾಲಕ ಗಹಗಹಿಸಿ ನಗುತ್ತಿದ್ದ, ಅವರೆಲ್ಲ ಹೊರಟುಹೋಗುತ್ತಿದ್ದರು. ಕೊನೆಗೊಂದು ದಿನ ಬಾಲಕ ಕುರಿಗಳನ್ನು ಕಾಯುತ್ತಿದ್ದಾಗ ನಿಜವಾಗಿಯೂ ತೋಳವೊಂದು ಅಲ್ಲಿಗೆ ಬಂತು, ಬಾಲಕ ಸಹಾಯಕ್ಕಾಗಿ ಕೂಗಿಕೊಂಡ. ಆದರೆ, ಈ ಬಾರಿ ಯಾರೂ ಬರಲಿಲ್ಲ. ಅವರೆಲ್ಲ 'ಇದೂ ಕೂಡಾ ತಮಾಷೆಯಿರಬೇಕು, ವಿನಾಕಾರಣ ಹುಡುಗ ಕೂಗುತ್ತಿದ್ದಾನೆ' ಎಂದುಕೊಂಡರು, ಹುಡುಗ ನಿಸ್ಸಹಾಯಕನಾದ, ಕುರಿಯನ್ನು ಕಳೆದುಕೊಂಡ.

ಪ್ರತಿ ಬಾರಿ ಸುಳ್ಳು ಹೇಳಿದಾಗಲೂ ನೀವು ಒಂದಂಶ ವಿಶ್ವಾಸಾರ್ಹತೆಯನ್ನು ಕಳೆದುಕೊಳ್ಳುತ್ತೀರಿ. ಮುಂದೆ ಸತ್ಯವನ್ನೇ ಹೇಳಿದಾಗಲೂ ಅದಕ್ಕೆ ಬೆಲೆಯಿರುವುದಿಲ್ಲ. ಮಕ್ಕಳೊಂದಿಗೆ ಎಂದೂ ಸುಳ್ಳಾಡದಿರಿ. ನೀವಾಡುವ ಸುಳ್ಳುಗಳನ್ನು ಗ್ರಹಿಸದಿರುವಷ್ಟು ಮಕ್ಕಳು ದಡ್ಡರಲ್ಲ. ಇಂದಲ್ಲ ನಾಳೆ ಎಲ್ಲ ಸತ್ಯವೂ ಪ್ರಚುರಗೊಳ್ಳುತ್ತದೆ. ನಿಮ್ಮನ್ನು ನೋಡಿ ಸುಳ್ಳು ಹೇಳುವುದನ್ನು ಮಕ್ಕಳು ತಮ್ಮ ನಡವಳಿಕೆಯಲ್ಲಿ ಅಳವಡಿಸಿಕೊಳ್ಳುತ್ತಾರೆ. ಸುಳ್ಳು ಹೇಳುವುದರ ಬಗ್ಗೆ ಅವರಿಗೆ ಇನಿತು ನಾಚಿಕೆಯೂ ಇರುವುದಿಲ್ಲ. ಸಟೆಯಾಡುವುದು, ಅಸಭ್ಯ ನಡವಳಿಕೆ, ವಿಶ್ವಾಸದ್ರೋಹ ಈ ಎಲ್ಲಾ ನಾಣ್ಯಗಳು ಅವರ ದೃಷ್ಟಿಯಲ್ಲಿ ಸಂಪೂರ್ಣವಾಗಿ ಮೌಲ್ಯವನ್ನು ಕಳೆದುಕೊಳ್ಳುತ್ತವೆ. ಮುಂದೆ ತಂಡದಲ್ಲಿ ಕಾರ್ಯ ನಿರ್ವಹಿಸಬೇಕಾಗಿ ಬಂದಾಗ ಈ ಎಲ್ಲ ದುರ್ಗುಣಗಳು ಅವರಿಗೆ ಕಂಟಕಪ್ರಾಯವಾಗುತ್ತವೆ. ಕೆಲವೊಮ್ಮೆ ಈ ಕಾರಣಗಳಿಂದ ಉದ್ಯೋಗ ನಷ್ಟವಾದರೂ ಆಗಬಹುದು.

ನಮ್ಮ ಬಾಲ್ಯದಲ್ಲಿ ಸತ್ಯದ ಮೌಲ್ಯವನ್ನು ಅರುಹಲು ಹಿರಿಯರು ಅದೆಷ್ಟೋ ಕಥೆಗಳನ್ನು ಕಣ್ಣಿಗೆ ಕಟ್ಟುವಂತೆ ಹೇಳುತ್ತಿದ್ದರು. ಪುಣ್ಯಕೋಟಿಯ ಕಥೆ, ಸತ್ಯಹರಿಶ್ಚಂದ್ರನ ಕಥೆ, ಶ್ರೀರಾಮನ ಕಥೆ, ಪಂಚತಂತ್ರದ ಕಥೆಗಳು ಮನಸ್ಸಿನ ಮೇಲೆ ಪರಿಣಾಮಕಾರಿ ಪ್ರಭಾವವನ್ನು ಬೀರುತ್ತಿದ್ದವು. ಆದರೆ ಇಂದಿನ ಮಕ್ಕಳು ಕಲುಷಿತ ವ್ಯವಸ್ಥೆಯಲ್ಲಿ ಆಯ್ಕೆಯನ್ನು ಮಾಡಿಕೊಳ್ಳಬೇಕಾಗಿದೆ. ಇದರ ಅರಿವು ಪೋಷಕರಿಗಿರಬೇಕಾದ್ದು ಆತ್ಯವಶ್ಯ. ಮೌಲ್ಯಗಳ ಸಂಘರ್ಷದ ಇಂದಿನ ದಿನಗಳಲ್ಲಿ ಮಕ್ಕಳಿಗೆ ಉತ್ತಮ ಮಾರ್ಗದರ್ಶನದ ಅವಶ್ಯಕತೆ ಇದೆ. ಆದರೆ ಹಿರಿಯರು ಮಾದರಿಗಳಾಗಿದ್ದರೆ ಮಾತ್ರ ಅವರು ನೀಡುವ ಮಾರ್ಗದರ್ಶನಕ್ಕೆ ಅರ್ಥ ಬರುತ್ತದೆ.

Jul 10, 2022

Insects around us PART-1| ನಮ್ಮ ಸುತ್ತಲಿನ ಕೀಟಗಳು ಭಾಗ-1 |

Insects around us PART-1| ನಮ್ಮ ಸುತ್ತಲಿನ ಕೀಟಗಳು ಭಾಗ-1 |

ಜಗವಿದು ಜಾಣ ಚೆಲುವಿನ ತಾಣ ಎಲ್ಲೆಲ್ಲೂ ರಸದೌತಣ ನಿನಗೆಲ್ಲೆಲ್ಲೂ ರಸದೌತಣ... ಅಣ್ಣಾವ್ರ ಈ ಸಾಲು ಎಷ್ಟು ಸೊಗಸಾಗಿದೆ ಅಲ್ವಾ.. ಹೀಗೆ ನಾನು ಸಂಜೆ ಟೀ ಕುಡಿತಾ ನಾನು ಹಾಕಿರೋ ಗಿಡಗಳನ್ನ ನೋಡ್ತಾ ಕೂತಿದ್ದೆ, ಒಂದು ಸೊಳ್ಳೆ ಕಚ್ಚಿಬಿಡೋದಾ!! ಇರೋದ್ ಅಕ್ಕಿ ಕಾಳಿನ ಸೈಜು ಹೆಂಗ್ ಕಚ್ತು ಅಂದ್ರೆ ಉರಿ ಅಂದ್ರೆ ಉರಿ. ಹೂಗ್ಲತಾಗಿ ಅಂತ ಬಿಟ್ಟು ಹಂಗೆ ಗಿಡ ನೋಡುವಾಗ ನನಗೆ ಮಿಡತೆ, ನೊಣ, ಜೇನು, ಜೇಡ, ಇರುವೆ, ಗೆದ್ದಲು ಹೀಗೆ ಹಲವಾರು ಸಣ್ಣ ಜೀವಿಗಳನ್ನು ನೋಡಿದೆ. ಇವುನ್ನೆಲ್ಲ ನಾವು ಕೀಟಗಳು ಅಂತೀವಲ್ಲ... ಅದಿಕ್ಕೆ ಕೆಲವೊಂದು ಕೀಟಗಳ ಬಗ್ಗೆ ತಿಳ್ಕೊಂಡು ಮಾಹಿತಿ ಹಂಚ್ಕೊಳೋಣ ಅಂತ... ಓದಿ ತಿಳ್ಕೊಳಿ ಖುಷಿ ಆದ್ರೆ ಇಷ್ಟ ಪಡಿ.. ಇನ್ನು ಹಲವಾರು ಬರಹಗಳಿವೆ ಓದಿ.. ಹಾರೈಸಿ.  

ಇರುವೆಗಳು (Ants)

ಅತ್ಯುತ್ತಮವಾದ ಸಂಘಜೀವನ ನಡೆಸುವ ಕೀಟಗಳು, ಸಾಮಾನ್ಯವಾಗಿ ಕೆಂಪು, ಕಪ್ಪು, ಕಂದು ಬಣ್ಣಗಳಲ್ಲಿ ಕಂಡುಬರುತ್ತವೆ. 2 ಮೀಸೆಗಳನ್ನು ಹೊಂದಿದ್ದು ಇವುಗಳನ್ನು ಮಾಹಿತಿ ನೀಡಲು ಸಾಧನವಾಗಿ ಬಳಸಿಕೊಳ್ಳುತ್ತವೆ. ಇವುಗಳ ಕುಟುಂಬದಲ್ಲಿ 

1.ಗಂಡು ಇರುವೆಗಳು

2.ಹೆಣ್ಣು ಇರುವೆಗಳು ಹಾಗೂ

3.ಕೆಲಸಗಾರ ಇರುವೆಗಳಿರುತ್ತವೆ.

ಕೆಲಸಗಾರ ಇರುವೆಗಳ ಪ್ರಮುಖ ಕಾರ್ಯವು ಗೂಡನ್ನು ಸ್ವಚ್ಚವಾಗಿಟ್ಟುಕೊಳ್ಳುವುದು, ಆಹಾರವನ್ನು ಹುಡುಕಿ ತರುವುದು, ಪೈರಿಗಳಿಂದ ಗೂಡನ್ನು ರಕ್ಷಿಸುವುದು.

ಕುಟುಂಬದ ಗಾತ್ರವು ಅತಿ ದೊಡ್ಡದಾದ ಮೇಲೆ ರೆಕ್ಕೆಯುಳ್ಳ ರಾಣಿ ಮತ್ತು ರೆಕ್ಕೆಯುಳ್ಳ ಗಂಡು ಇರುವೆಯು ಗೂಡಿನಿಂದ ಹೊರಗೆ ಹಾರಿ ಬರುತ್ತವೆ. ಹಾಗೂ ಸಂತಾನ ಕ್ರಿಯೆಯಲ್ಲಿ ಪಾಲ್ಗೊಳ್ಳುತ್ತವೆ. ಈ ಕ್ರಿಯೆಯ ನಂತರ ಗಂಡು ಇರುವೆಗಳು ಸತ್ತು ಹೋಗುತ್ತವೆ. ಹೆಣ್ಣು ಇರುವ ಹೊಸ ಗೂಡಿನ ನಿರ್ಮಾಣ ಮಾಡತೊಡಗುತ್ತದೆ.

ಮನುಷ್ಯರು ಪ್ರಾಣಿಗಳನ್ನು ಸಾಕುವಂತೆಯೇ ಕೆಲ ಇರುವೆಗಳು ಎಪಿಡ್ಸ್ ಗಳನ್ನು ಸಾಕುತ್ತವೆ. ಎಪಿಡ್ಸ್ ಗಳಿಗೆ ರಕ್ಷಣೆ ನೀಡುತ್ತವೆ ಹಾಗೂ ಅವುಗಳು ಸ್ರವಿಸುವ ಸಿಹಿ ದ್ರವವನ್ನು ತಿನ್ನುತ್ತವೆ.

 

ಅಂಟಿಲಾನ್ಸ್ (ಡೂಡಲ್ ಬಗ್) Antlions (Doodle bug)

ಮೃದುವಾದ ಮಣ್ಣಿನಲ್ಲಿ ಸಣ್ಣ ಕಣಗಳ ಮರಳಿನಿಂದ ಲಾಳಿಕೆಯಾಕಾರದಲ್ಲಿ ತಗ್ಗನ್ನು ನಿರ್ಮಿಸುವ ಕೀಟವಿದು. ನೆಲದ ಮೇಲೆ ಓಡಾಡುವ ಇರುವೆ, ಇತರೇ ಸಣ್ಣ ಸಣ್ಣ ಹುಳುಗಳು ತಗ್ಗಿನೊಳಕ್ಕೆ ಬಿದ್ದೊಡನೆ ಆಹಾರವಾಗಿಸಿಕೊಳ್ಳುವ ಸ್ವಭಾವದ ಕೀಟವಿದು. ಜಾರುವ ಮರಳಿನ ಕಣಗಳಾದ್ದರಿಂದ ಮೇಲೇರಲು ಸಾಧ್ಯವಾಗದೇ ಇರುವೆ ಮುಂತಾದವುಗಳು ಇದರ ಆಹಾರವಾಗಿಬಿಡುತ್ತವೆ. ಈ ಕೀಟವು ಸಾಮಾನ್ಯವಾಗಿ ತನ್ನ ತಲೆಯ ಭಾಗವನ್ನಷ್ಟೆ ಹೊರತೆಗೆದು ದೇಹವನ್ನೆಲ್ಲ ಮರಳಿನಲ್ಲಿ ಅವಿತಿಟ್ಟು ಆಹಾರಕ್ಕಾಗಿ ಕಾಯುತ್ತಿರುತ್ತದೆ. ಈ ತಗ್ಗು ಗೂಡಿನ ಗಾತ್ರವು ಅಗಲ ಮತ್ತು ಆಳದಲ್ಲಿ 3 ರಿಂದ 5 ಸೆಂ.ಮೀ.ನಷ್ಟಿರುತ್ತದೆ.

 

ಕ್ರಿಕೆಟ್ ಕೀಟ (ಜೀರುಂಡೆ) cricket

ಕುಪ್ಪಳಿಸಲು ಸಹಾಯವಾಗುವಂತೆ ದೊಡ್ಡ ಕಾಲುಗಳನ್ನು ಹೊಂದಿರುವ ಕೀಟವಿದು. ಇವುಗಳ ಗಾತ್ರ 1 ರಿಂದ 3 ಸೆಂ.ಮೀ.ನಷ್ಟು, ಇದಕ್ಕೆ ಉದ್ದನೆಯ ಮೀಸೆಗಳೂ ಇವೆ. ಫೀಲ್ಡ್ ಕ್ರಿಕೆಟ್‌ನ ಬಣ್ಣವು ಸಾಮಾನ್ಯವಾಗಿ ಕಪ್ಪು. ಈ ಕೀಟವನ್ನು ಅವುಗಳ ವಿಶಿಷ್ಟವಾದ ಹಾಗೂ ಅತಿಯಾದ ಶಬ್ದದಿಂದ ಗುರ್ತಿಸಬಹುದು.

ಇವುಗಳು ಹೊರಡಿಸುವ ಶಬ್ದವು ವಾತಾವರಣದ ಉಷ್ಣತೆಯನ್ನವಲಂಬಿಸಿರುತ್ತದೆ. ಆದ್ದರಿಂದ ಇವುಗಳ ಶಬ್ದವನ್ನು ಅಧ್ಯಯನ ಮಾಡುವ ಮೂಲಕ ಭೂ ವಾತಾವರಣದ ಉಷ್ಣತೆಯನ್ನು ಕ೦ಡು ಹಿಡಿಯಬಹುದಾಗಿದೆ. ಇವುಗಳು ಸಾಮಾನ್ಯವಾಗಿ ಒಂದು ವರ್ಷದಲ್ಲಿ 1 ರಿಂದ 3 ತಲೆಮಾರುಗಳು ಉತ್ಪತ್ತಿಯಾಗುತ್ತವೆ.

 

ಸಿಕಾಡ (Cicada)

ಸುಗ್ಗಿ ಕಾಲದ ಕೀಟವೆಂದೇ ಹೆಸರಾಗಿದೆ. ಕೀಟಗಳಲ್ಲಿ ಅತಿ ಹೆಚ್ಚು ಶಬ್ಧ ಮಾಡುವ ಕೀಟವೆಂದೂ ಗುರ್ತಿಸಲ್ಪಟ್ಟಿದೆ. ಇದೊಂದು ವಿಚಿತ್ರ ಕೀಟ. ಇದು ತನ್ನ ಬಹುಪಾಲು ಜೀವಿತಾವಧಿಯನ್ನು ಭೂಮಿಯ ಒಳಭಾಗದಲ್ಲಿಯೇ ಕಳೆಯುತ್ತದೆ. ಇವುಗಳ ಜೀವಿತಾವಧಿ 13 ರಿಂದ 17 ವರ್ಷಗಳಾಗಿದ್ದರೂ ಕೇವಲ 30 ರಿಂದ 40 ದಿನಗಳು ಮಾತ್ರ ಭೂಮಿಯ ಮೇಲೆ ಮರಗಳಲ್ಲಿ ವಾಸವಾಗಿರುತ್ತದೆ. ಲಾರ್ವಾವಸ್ಥೆಯಲ್ಲಿರುವಾಗ ಬೇರುಗಳಿಂದ ದ್ರವವನ್ನು ಹೀರಿಕೊಂಡು ಜೀವಿಸುತ್ತದೆ. ಸಂತಾನೋತ್ಪತ್ತಿ ಕಾರ್ಯವು ಭೂಮಿಯ ಮೇಲಿದ್ದಾಗ ನಡೆಯುತ್ತದೆ. ಇದು ಸುಮಾರು 300 ರಿಂದ 600 ಮೊಟ್ಟೆಗಳನ್ನಿಡುತ್ತದೆ.

 

ಡ್ರ್ಯಾಗನ್ ಫ್ಲೈ (Dragon fly)

ಡೈನೋಸಾರ್‌ಗಳಿಗಿಂತಲೂ ಹಿಂದಿನ ಕಾಲದಿಂದ ಜೀವಿಸಿರುವ ಕೀಟಗಳೆಂದು ಪರಿಗಣಿಸಲಾಗಿದೆ. ಇವು 4 ರೆಕ್ಕೆಗಳನ್ನು ಹೊಂದಿವೆ. ಹರಿತವಾದ ದವಡೆಗಳನ್ನು ಹೊಂದಿರುವುದರಿಂದ ಇವುಗಳಿಗೆ ಈ ಹೆಸರು ಬಂದಿದೆ. ಇವು ನೀರಿನಲ್ಲಿ ಮೊಟ್ಟೆಗಳನ್ನಿಡುತ್ತವೆ. ಮೊಟ್ಟೆಗಳಿಂದ ಮರಿಗಳು ಹೊರಬರಲು 15 ದಿನಗಳ ಕಾಲ ಬೇಕು. ಮರಿಗಳು ನೀರಿನಲ್ಲಿ ಜೀವಿಸುತ್ತವೆ. ಬೆಳವಣಿಗೆಯ ಹಂತ ಹೊಂದಿದ ನಂತರ ನೀರಿನಿಂದ ಹೊರಬಂದು ಭೂಮಿಯ ಮೇಲಿನ ಗಿಡದ ಕಾಂಡದ ಮೇಲೆ ವಾಸಿಸತೊಡಗುತ್ತದೆ. ಹೊರಚರ್ಮ ಕಳಚಿ ಮಾರ್ಪಾಡುಗೊಳ್ಳತೊಡಗುತ್ತವೆ. 2 ಗಂಟೆಗಳ ಅವಧಿಯಲ್ಲಿ ತಲೆ, ಹೊಟ್ಟೆ, ಕಾಲು ಹಾಗೂ ರೆಕ್ಕೆಗಳು ಮಾರ್ಪಾಡಾಗುತ್ತವೆ. ಇವು ತಮ್ಮ ರೆಕ್ಕೆಗಳನ್ನು ಮಡಚುವುದಿಲ್ಲ. ಸೊಳ್ಳೆಗಳನ್ನು ಹೆಚ್ಚು ತಿನ್ನುವುದರಿಂದ ಸೊಳ್ಳೆ ಭಕ್ಷಕಗಳೆಂದೂ ಕರೆಯಲ್ಪಡುತ್ತವೆ.

 

ಪ್ರೇಯಿಂಗ್ ಮ್ಯಾಂಟಿಸ್ (Praying Mantis)

ಸಾಮಾನ್ಯವಾಗಿ ಉಷ್ಣ ವಲಯಗಳಲ್ಲಿ ಕಂಡುಬರುವ ಕೀಟವಿದು, ಅಂದಾಜು 1700 ಕ್ಕಿಂತಲೂ ಹೆಚ್ಚು ಪ್ರಬೇಧಗಳಿವೆಯೆಂದು ನಂಬಲಾಗಿದೆ. ಮುಂಗಾಲುಗಳು ಆಹಾರವನ್ನು ಹಿಡಿಯಲು ಹರಿತವಾಗಿವೆ. ವಯಸ್ಕ ಆಗುವುದಕ್ಕೂ ಮುನ್ನ ಸುಮಾರು 12 ಬಾರಿ ತಮ್ಮ ಹೊರ ಚರ್ಮವನ್ನು ಕಳಚಿ ಹಾಕುತ್ತವೆ. ಇವು ಸುಮಾರು 300 ಮೊಟ್ಟೆಗಳನ್ನಿಡುತ್ತವೆ. ಚಿಟ್ಟೆಗಳು, ಜೇನ್ನೊಣ, ಕಪ್ಪೆ, ಜೇಡ.... ಮುಂತಾದವುಗಳು ಇದರ ಆಹಾರ. ಇವು ಮುಂಗಾಲುಗಳನ್ನು ಮೇಲೆತ್ತಿ ಕೈಮುಗಿಯುತ್ತಿರುವಂತೆ ಕಾಣುವುದರಿಂದ ಇವುಗಳಿಗೆ ಈ ಹೆಸರು ಬಂದಿದೆ.

 

ಗೆದ್ದಲು (Termite)

ಸಂಘ ಜೀವಿಗಳಾದ ಇವುಗಳಿಗಿರುವ ಇನ್ನೊಂದು ಹೆಸರು ಬಿಳಿ ಇರುವೆಗಳು. ಇವುಗಳ ಕೆಲ ಕುಟುಂಬದಲ್ಲಿ 20 ಲಕ್ಷದವರೆಗೂ  ಗೆದ್ದಲುಗಳಿರುತ್ತವೆ. ಕುಟುಂಬದಲ್ಲಿ ಅತಿ ದೊಡ್ಡ ಗಾತ್ರದ ರಾಣಿ ಗೆದ್ದಲು, ರಾಜ ಗೆದ್ದಲು, ಹಾಗೂ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಮಿಕ ಗೆದ್ದಲುಗಳಿರುತ್ತವೆ. ಕಾರ್ಮಿಕ ಗೆದ್ದಲುಗಳ ಕಾರ್ಯವು ಆಹಾರ ಸಂಗ್ರಹಣೆ, ಗೂಡನ್ನು ಶುಭ್ರಗೊಳಿಸುವುದು, ವೈರಿಗಳೊಂದಿಗೆ ಹೋರಾಡುವುದು ಇತ್ಯಾದಿ.

ರಾಣಿ ಗೆದ್ದಲುಗಳ ವಾಸಸ್ಥಾನವು ಗೂಡಿನ ಮಧ್ಯಭಾಗದಲ್ಲಿ ವಿಶೇಷವಾಗಿ ನಿರ್ಮಿತವಾಗಿರುತ್ತದೆ. ಗೆದ್ದಲುಗಳ ಗೂಡನ್ನು ಮಾನವ ನಿರ್ಮಿತ ಹವಾ ನಿಯಂತ್ರಣ: ವ್ಯವಸ್ಥೆ (ಎ.ಸಿ.ಸಿಸ್ಟಮ್) ಗಿಂತಲೂ ಅತ್ಯುತ್ತಮವಾದುವೆಂದು ಅಭಿಪ್ರಾಯಪಡಲಾಗುತ್ತದೆ. ರಾಣಿ ಗೆದ್ದಲುಗಳ ಸಂತಾನವನ್ನು ಉತ್ತಮಗೊಳಿಸಲು ಕಾರ್ಮಿಕ ಗೆದ್ದಲುಗಳು ಆವುಗಳಿಗೆ ವಿಶೇಷ ಆಹಾರವನ್ನು ಉಣಬಡಿಸುತ್ತವೆ. ತೇವಾಂಶ ವಾತಾವರಣ ಕಾಲಕ್ಕೆ ಗಂಡು ಮತ್ತು ರಾಣಿ ಗೆದ್ದಲುಗಳು ಗೂಡಿನಿಂದ ಹೊರಬಂದು ಸಂತಾನ ಕ್ರಿಯೆಯಲ್ಲಿ ತೊಡಗುತ್ತವೆ. ನಂತರ ರಾಣಿ ಗೆದ್ದಲು ಹೊಸ ಗೂಡನ್ನು ನಿರ್ಮಿಸಿ ಮೊಟ್ಟೆಗಳನ್ನಿಡುತ್ತದೆ. ಗೆದ್ದಲುಗಳು ಕೊಳೆತ ಮರದ ದಿಮ್ಮಿಗಳನ್ನು ತಿನ್ನುವ ಮೂಲಕ ಪೋಷಕಾಂಶಗಳನ್ನು ನಿಸರ್ಗಕ್ಕೆ ಮರಳಿಸುವ ಕಾರ್ಯ ಮಾಡುತ್ತವೆ.

 

ಸೊಳ್ಳೆ  (Mosquito)

ಸೊಳ್ಳೆಗಳ ಜೀವನ ಚಕ್ರವು 4 ಹಂತಗಳನ್ನು ಹೊಂದಿದೆ.

1 ಮೊಟ್ಟೆ

2 ಲಾರ್ವಾ  

3 ಪ್ಯೂಪಾ(ಕೋಶಾವಸ್ಥೆ)

4 ವಯಸ್ಕ

ನೀರಿನ ಮೇಲೆ ಮೊಟ್ಟೆಗಳನ್ನಿಡುವ ಮೂಲಕ ಸೊಳ್ಳೆಗಳ ಜೀವನ ಆರಂಭವಾಗುತ್ತದೆ. ಮೊಟ್ಟೆಗಳು 48 ಗಂಟೆಗಳಲ್ಲಿ ಹೊಡೆದು ಹೊರಬರುತ್ತವೆ. ಲಾರ್ವಾಗಳು ಸೂಕ್ಷ್ಮಜೀವಿಗಳನ್ನು ತಿಂದು ಜೀವಿಸುತ್ತವೆ. ಪ್ಯೂಪಾ ಹಂತದಲ್ಲಿ ಅವು ಏನನ್ನೂ ತಿನ್ನುವುದಿಲ್ಲ. 2 ದಿನಗಳ ಅವಧಿಯಲ್ಲಿ ಪ್ಯೂಪಾದ ಹೊರಚರ್ಮವು ಕಳಚಿ ವಯಸ್ಕ ಸೊಳ್ಳೆಯು ನಿರ್ಮಾಣವಾಗುತ್ತದೆ. ವಯಸ್ಕ ಸೊಳ್ಳೆಗಳು ಹಾರಾಟವನ್ನು ಆರಂಭಿಸುವುದಕ್ಕಿಂತ ಮುಂಚಿತವಾಗಿ ನೀರಿನ ಮೇಲೆ ವಿಶ್ರಾಂತಿ ಪಡೆದು, ತಮ್ಮ ರೆಕ್ಕೆಗಳನ್ನು ಒಣಗಿಸಿಕೊಂಡು ಗಟ್ಟಿಗೊಳಿಸಿಕೊಳ್ಳುತ್ತವೆ.

ಹೆಣ್ಣು ಸೊಳ್ಳೆಗಳ ಆಯುಷ್ಯವು 3 ರಿಂದ 100 ದಿನಗಳು. ಗಂಡು ಸೊಳ್ಳೆಗಳು ಆಯುಷ್ಯವು 10 ರಿಂದ 20 ದಿನಗಳು. ಹೆಣ್ಣು ಸೊಳ್ಳೆಗಳು ಮೊಟ್ಟೆಗಳನ್ನಿಡಲು ರಕ್ತದೂಟವನ್ನು ಮಾಡುತ್ತವೆ. ಇವು 100 ರಿಂದ 300 ಮೊಟ್ಟೆಗಳನ್ನಿಡುತ್ತವೆ ಹಾಗೂ ಜೀವಿತಾವಧಿಯಲ್ಲಿ 3000 ದ ವರೆಗೂ ಮೊಟ್ಟೆಗಳನ್ನಿಡುತ್ತವೆ. ಪ್ರಪಂಚದಾದ್ಯಂತ ಸುಮಾರು 140 ಕ್ಕೂ ಅಧಿಕ ವಿಧದ ಸೊಳ್ಳೆಗಳನ್ನು ಗುರ್ತಿಸಲಾಗಿದೆ. ಕೆಲವು ಸೊಳ್ಳೆಗಳು ರೋಗಗಳ ಸಂವಾಹಕಗಳಾಗಿವೆ.

 

ಡೇಮ್ಸ್  ಫ್ಲೈ (Damsefly)

ಪ್ರಪಂಚದಾದ್ಯಂತ ಕ೦ಡುಬರುವ ಕೀಟವಿದು. ಸುಮಾರು 4700 ವಿವಿಧ ಪ್ರಬೇಧಗಳಿವೆಯೆಂದು ನಂಬಲಾಗಿದೆ. ಮೊಟ್ಟೆ ಹಾಗೂ ಲಾರ್ವಾವಸ್ಥೆಯಲ್ಲಿ ನೀರಿನಲ್ಲಿರುತ್ತವೆ. ಈ ಹಂತದಲ್ಲಿ ಗೊದಮಟ್ಟೆ ಹಾಗೂ ಸೂಕ್ಷ್ಮ ಜೀವಿಗಳನ್ನು ತಿಂದು ಜೀವಿಸುತ್ತವೆ.

 

ನೀರಿನಲ್ಲಿ ಕೆಲವು ತಿಂಗಳುಗಳ ಕಾಲವಷ್ಟೇ ಇದ್ದರೂ ಈ ಅವಧಿಯಲ್ಲಿ ಇವು ತನ್ನ ಹೊರಚರ್ಮವನ್ನು ಕಳಚಿ ಹೊಸಚರ್ಮವನ್ನು ಪಡೆಯುತ್ತಿರುತ್ತವೆ. ಕೊನೆಯ ಬಾರಿ ಕಳಚಿದ ನಂತರ ಅದು ನೀರಿನಿಂದ ಹೊರಬಂದು ಗಿಡದ ಕಾಂಡಭಾಗದಲ್ಲಿ ವಾಸಿಸತೊಡಗುತ್ತದೆ. ಈ ಹ೦ತದಲ್ಲಿ ಇದರ ಚರ್ಮವು ತು೦ಡಾಗಿ ಪ್ರೌಢಾವಸ್ಥೆಯನ್ನು ಹೊಂದಿದ ಚೆನ್ನಾಗಿ ಬೆಳೆದ ದೇಹ ಹಾಗೂ ರೆಕ್ಕೆಗಳನ್ನೊಂದಿದ ಕೀಟವಾಗಿ ಹೊರಬರುತ್ತದೆ. ರೆಕ್ಕೆಗಳನ್ನು ಗಟ್ಟಿಗೊಳಿಸಿಕೊಂಡ ನಂತರ ಇವು ಹಾರಲಾರಂಭಿಸುತ್ತವೆ. ಇವು ಬಹುದೂರದವರೆವಿಗೂ ವಲಸೆ ಹೋಗಬಲ್ಲ ಕೀಟಗಳು.

 

ಹರ್ಕ್ಯುಲಸ್ ಬೀಟಲ್ (Hercules Beetle)

ಇವುಗಳು ಸಾಮಾನ್ಯವಾಗಿ ಸಮಭಾಜಕ ವೃತ್ತ ಪ್ರದೇಶದ ಮಳೆ ಕಾಡುಗಳಲ್ಲಿ ಕಂಡುಬರುತ್ತವೆ. 7 ರಿಂದ 18 ಸೆಂ.ಮೀ. ವರೆಗೂ ಇವುಗಳ ಗಾತ್ರವಿರುತ್ತದೆ. ಸುಮಾರು 5 ರಿಂದ 10 ಸೆಂ.ಮೀ. ಉದ್ದದಷ್ಟು ಕತ್ತಿಯಂತಹ ಕೊಂಬುಗಳನ್ನು ಹೊಂದಿವೆ. ಈ ಕೊಂಬುಗಳ ಒಳಭಾಗದಲ್ಲಿರುವ ಗರಗಸದಂತಹ ಆಕಾರವು ಆಹಾರವನ್ನು ಹಿಡಿಯಲು, ವೈರಿಗಳೊಂದಿಗೆ ಹೋರಾಡಲು ಸಹಾಯಕವಾಗಿವೆ. ಹೆಣ್ಣುಗಳಿಗೆ ಈ ಕೊಂಬುಗಳಿರುವುದಿಲ್ಲ. ಇವು ನೆರಳಿನ ಪ್ರದೇಶಗಳಲ್ಲಿ ಹಸಿರಿರುವೆಡೆ ವಾಸಿಸುತ್ತವೆ.

 

ವೀಕ್ಷಕರೇ ಓದಿದಿರಾ, ನಮ್ಮ ಸುತ್ತ ಮುತ್ತಲಿರುವ ಹಲವು ಕೀಟಗಳ ಬಗ್ಗೆ ಮೇಲಿರುವ ಮಾಹಿತಿಗಳನ್ನು?! ಎಷ್ಟು ಸೋಜಿಗ ಅಲ್ವ ನಮ್ಮ ಪರಿಸರ. ಇನ್ನು ಹೆಚ್ಚಿನ ಕೀಟಗಳ ಬಗ್ಗೆ ತಿಳಿದುಕೊಳ್ಳಲು ಯತ್ನಿಸೋಣ. ನಿಮಗೇನಾದರೂ ಹೊಸ ಕೀಟಗಳ ಬಗ್ಗೆ ತಿಳಿದಿದ್ದರೆ ಕಾಮೆಂಟ್ ಮಾಡಿ ತಿಳಿಸಿ. ಮತ್ತೊಂದು ಬರಹದ ಜೊತೆ ಸಿಗುವ... ಓದ್ತಾ ಇರಿ ತಿಳ್ಕೋತಾ ಇರಿ. ಯಾಕಂದ್ರೆ ಅರಿವೇ ಗುರು. 

Jul 9, 2022

The Great Personalities - Albert Einstein PART-4|ಮಹಾನ್ ವ್ಯಕ್ತಿಗಳು - ಅಲ್ಬರ್ಟ್ ಐನ್ ಸ್ಟೀನ್ ಭಾಗ-4|

The Great Personalities - Albert Einstein PART-4|ಮಹಾನ್ ವ್ಯಕ್ತಿಗಳು - ಅಲ್ಬರ್ಟ್ ಐನ್ ಸ್ಟೀನ್ ಭಾಗ-4|


ಅಲ್ಬರ್ಟ್ ಐನ್ಸ್ಟೈನ್ ಅವರ ಜೀವನಗಾಥೆಯನ್ನು ಕಳೆದ 3 ಭಾಗಗಳಿಂದ ಓದಿದ್ದೀರ. ಅವರ ಸಿದ್ದಾಂತಗಳನ್ನು ಈ ಬರಹದಲ್ಲಿ ತಿಳಿದುಕೊಳ್ಳೋಣ.ಅವರ ಜೀವನದ ಸಂಪೂರ್ಣ ಸಾರವನ್ನು ತಿಳಿದುಕೊಳ್ಳೋಣ.

ಈ ಬರಹವು ಭಾಗ ೧ ಭಾಗ 2 ಮತ್ತು ಭಾಗ 3 ರ ನಂತರ ಬರೆದಿರುವುದಾಗಿದೆ.

ಭಾಗ ೧ ಓದಲು click here for part 1 ಬಟ್ಟನ್ ಮೇಲೆ ಒತ್ತಿರಿ.

CLICK HERE FOR PART 1

ಭಾಗ 2 ಓದಲು click here for part 2 ಬಟ್ಟನ್ ಮೇಲೆ ಒತ್ತಿರಿ.

CLICK HERE FOR PART 2

ಭಾಗ 3 ಓದಲು click here for part 3 ಬಟ್ಟನ್ ಮೇಲೆ ಒತ್ತಿರಿ.

CLICK HERE FOR PART 3 

ಸಾಪೇಕ್ಷ ಸಿದ್ಧಾಂತ

''ನೈಸರ್ಗಿಕ ವಿದ್ಯಮಾನಗಳನ್ನು ವಿವರಿಸುವ ನಿಯಮಗಳು ಎಲ್ಲ ವೀಕ್ಷಕರಿಗೂ ಒಂದೇ ತೆರನಾಗಿವೆ'' ಎಂಬುದು ಐನ್ ಸ್ಟೀನ್ ಸಿದ್ಧಾಂತದ ಮೊದಲ ವಾದ. “ವೀಕ್ಷಕರ ವೇಗಗಳು ಏನೇ ಆಗಿರಲಿ, ಬೆಳಕಿನ ವೇಗ ಮಾತ್ರ ಇವರಿಗೆ ಒಂದೇ ಆಗಿರುವುದು, ಅಂದರೆ ಆಕರದ ಚಲನೆ ಬೆಳಕಿನ ವೇಗದ ಮೇಲೆ ಏನೂ ಪರಿಣಾಮ ಮಾಡುವುದಿಲ್ಲ” ಎಂಬುದು ಎರಡನೇ ವಾದ.

ಹೊರನೋಟಕ್ಕೆ ಸಾಮಾನ್ಯವೆಂದು ಕಾಣುವ ಈ ಸಿದ್ಧಾಂತದಿಂದಾದ ಪರಿಣಾಮಗಳು ಮಾತ್ರ ಎಲ್ಲರನ್ನೂ ದಂಗುಬಡಿಸಿದವು.

ಚಲಿಸುತ್ತಿರುವ ವಸ್ತುವಿನ ವೇಗವನ್ನು ಬಲ ಪ್ರಯೋಗದಿಂದ ವೇಗೋತ್ಕರ್ಷ ಗೊಳಿಸಬಹುದು ಎಂಬ ನ್ಯೂಟನ್‌ ಚಲನೆಯ ನಿಯಮ. ಆದರೆ ಎಷ್ಟೇ ಬಲ ಪ್ರಯೋಗಿಸಿದರೂ ಬೆಳಕಿನ ವೇಗಕ್ಕಿಂತ ಹೆಚ್ಚಿನ ವೇಗ ಪಡೆಯುವುದು ಅಸಾಧ್ಯ ಎನ್ನುತ್ತಾರೆ ಐನ್‌ಸ್ಟೀನ್‌: ಇಷ್ಟೇ ಅಲ್ಲ, ಅತಿ ಹೆಚ್ಚಿನ, ಅಂದರೆ ಸೆಕೆಂಡಿಗೆ 3 ಲಕ್ಷ ಕಿ.ಮೀ.ಗೆ ಹತ್ತಿರದ ವೇಗದಲ್ಲಿ ಚಲಿಸಿದಾಗ ಊಹಿಸಲೂ ಆಗದಂತಹ ಭೌತ ಬದಲಾವಣೆಗಳಾಗುತ್ತದೆ. ವಸ್ತುವಿನ ಉದ್ದ ಕಡಿಮೆಯಾಗುತ್ತದೆ, ರಾಶಿ (Mass) ಹೆಚ್ಚಾಗುತ್ತದೆ, ಕಾಲ ನಿಧಾನವಾಗಿ ಓಡುತ್ತದೆ! ಒಂದು ವೇಳೆ ಬೆಳಕಿನ ವೇಗದಲ್ಲೇ ಚಲಿಸಿದರೆ ? ಉದ್ದ ಶೂನ್ಯವಾಗುತ್ತದೆ, ಕಾಲ ಸ್ಥಗಿತವಾಗುತ್ತದೆ, ರಾಶಿ ಅನಂತವಾಗುತ್ತದೆ!

ನಕ್ಷತ್ರಗಳಿಂದ ನಮ್ಮ ಭೂಮಿಯೆಡೆಗೆ ಬರುವ ಬೆಳಕಿನ ಕಿರಣ ಸೂರ್ಯನ ಸಮೀಪ ಹಾದುಬರುವಾಗ ಬಾಗಿ ಚಲಿಸುವುದರಿಂದ ಭೂಮಿಯ ಮೇಲಿನ ವೀಕ್ಷಕರಿಗೆ ನಕ್ಷತ್ರಗಳು ಸ್ಥಳ ಬದಲಾಗಿ ಕಾಣುತ್ತವೆ ಎಂಬುದನ್ನು ಐನ್‌ಸ್ಟೀನ್‌ ವಿವರಿಸಿದರು. ಅಲ್ಲದೆ ಕಿರಣಗಳು ಎಷ್ಟು ಬಾಗುತ್ತವೆ, ನಕ್ಷತ್ರಗಳ ಸ್ಥಳ ಬದಲಾವಣೆ ಎಷ್ಟು ಎಂದು ವಿವರಿಸಿದರು. ಸಾಪೇಕ್ಷ ಸಿದ್ಧಾಂತದ ಭಾಗವಾಗಿ ಈ ಫಲಿತಾಂಶಗಳನ್ನು ಅವರು ವಿವರಿಸಿದ್ದರು. ಈ ವಿವರಗಳೆಲ್ಲ ವಿಜ್ಞಾನಿಗಳಾದ ಕ್ರೋಮೆಲಿನ್ ಮತ್ತು ಎಡಿಂಗ್‌ಟನ್ ಎಂಬುವವರ ಪ್ರಾಯೋಗಿಕ ವೀಕ್ಷಣೆಗಳಿಂದ ಸಿದ್ಧಗೊಳಿಸಲ್ಪಟ್ಟವು. ಈ ಫಲಿತಾಂಶ ಎಲ್ಲರನ್ನೂ ಗಾಬರಿಗೊಳಿಸಿತ್ತು. ಏಕೆಂದರೆ, ಎಲ್ಲ ವಿಜ್ಞಾನಿಗಳು ಬೆಳಕು ಅದರ ಮೂಲದಿಂದ ವೀಕ್ಷಿಸುವವರ ದೃಷ್ಟಿಯಲ್ಲಿ ಒಂದೇ ನೇರದಲ್ಲಿ ಚಲಿಸುವುದೆಂಬ ನಂಬಿಕೆ ಬೇರೂರಿತ್ತು. ಆದರೆ ಐನ್‌ ಸ್ಟೀನ್ ಅವರ ಪ್ರಕಾರ ನಕ್ಷತ್ರಗಳ ಬೆಳಕು ಒಂದೇ ನೇರದಲ್ಲಿ ಚಲಿಸದೆ ಬಾಗಿ ಚಲಿಸುತ್ತದೆ ಎಂಬುದಾಗಿತ್ತು. ಒಂದರ್ಥದಲ್ಲಿ ಬೆಳಕಿನ ಕಿರಣ ಚಲಿಸಿದ ಆಕಾಶವೇ ಬಾಗಿರಬೇಕೆಂಬುದು ಐನ್‌ಸ್ಟೀನ್‌ ಸಿದ್ಧಾಂತದ ಸಲಹೆಯಾಗಿತ್ತು! ಇದೆಲ್ಲವುಗಳೂ ಆವರೆಗಿನ ಭೌತಶಾಸ್ತ್ರದ ಮೂಲಭೂತ ನಿಯಮಗಳಿಗೆ ಸವಾಲಾಗಿತ್ತು. ಐನ್‌ಸ್ಟೀನ್‌ಗೂ ಮೊದಲಿನ ವಿಜ್ಞಾನಿಗಳು ಆಕಾಶ ಚಪ್ಪಟೆಯಾಗಿದೆ ಎಂದೇ ನಂಬಿದ್ದರು. ಐನ್ ಸ್ಟೀನ್‌ ರು ಬ್ರೌನಿಯನ್ ಚಲನಾ ನಿಯಮಗಳನ್ನು ಪರಿಶೋಧಿಸಿದರು. ಅವ ಅಣುಗಳ ಅಸ್ತಿತ್ವವನ್ನು ಸಮರ್ಥಿಸಿದವು, ಅಷ್ಟೇ ಅಲ್ಲ ಅವುಗಳ ಪರಿಮಾಣಗಳನ್ನು ನಿರ್ಧರಿಸಲು ಬಳಸಬಹುದೆಂಬುದನ್ನೂ ತೋರಿದವು.

 

ಶಕ್ತಿ ಹಾಗೂ ದ್ರವ್ಯರಾಶಿಯ ಸಂಬಂಧ

ಶಕ್ತಿ ಹಾಗೂ ದ್ರವ್ಯರಾಶಿ ಎರಡರ ಸಮಾನತೆಯನ್ನು ಐನ್‌ಸ್ಟೀನ್ ರು ಒಂದು ಸರಳವಾದ ಸೂತ್ರದ ಮೂಲಕ ತಿಳಿಸಿಕೊಟ್ಟರು. ಆ ಸೂತ್ರವೇ

E = ಎಂದರೆ ಶಕ್ತಿ

m = ಎಂದರೆ ದ್ರವ್ಯರಾಶಿ

C = ಎಂದರೆ ಬೆಳಕಿನ ವೇಗ

 

ಆಕಾಶ ಬಾಗಿದೆ ಎಂಬ ಕಲ್ಪನೆ

ಪ್ರಾಯೋಗಿಕ ಪರೀಕ್ಷೆಗಳಿಂದ ಆಲ್ಬರ್ಟ್ ಐನ್‌ಸ್ಟೀನ್‌ರ ಸಾಪೇಕ್ಷ ಸಿದ್ಧಾಂತಕ್ಕೆ ಸ್ಪಷ್ಟ ಪುರಾವೆಗಳು ದೊರಕಿದೊಡನೆ ವಿಶ್ವದೆಲ್ಲೆಡೆ ಐನ್‌ಸ್ಟೀನ್ ರ ಕೀರ್ತಿ ಮತ್ತಷ್ಟು ಹಬ್ಬಿತು. ನಿಧಾನವಾಗಿ ಐನ್‌ಸ್ಟೀನ್‌ ರ ಸಿದ್ಧಾಂತಗಳು ಇನ್ನೂ ಹೆಚ್ಚು ಅರ್ಥವಾಗತೊಡಗಿದವು. ಇವುಗಳನ್ನು ವಿಶ್ವದ ಕುರಿತ ಅನೇಕ ಆವಿಷ್ಕಾರಗಳಿಗಾಗಿ ಉಪಯೋಗಿಸಲಾಯಿತು. ಖಗೋಳ ಶಾಸ್ತ್ರಜ್ಞರು 'ಕೃಷ್ಣ ರಂಧ್ರ' ಮತ್ತು ‘ಶ್ವೇತ ಕುಬ್ಜ’ ಗಳೆಂಬ ಅದ್ಭುತಗಳನ್ನು ಕಂಡುಹಿಡಿದರು. ಈ ವಿಶ್ವದ ಸೃಷ್ಟಿಯ ಕುರಿತು ಮೂಲಭೂತವಾದ ಪ್ರಶ್ನೆಗಳನ್ನು ಕೇಳುವ ಧೈರ್ಯ ಮಾಡತೊಡಗಿದರು. ವಿಶ್ವಕ್ಕೆ ಆರಂಭವಿದೆಯೆ ? ಅಂತ್ಯವೆಂಬುದು ಇದೆಯೇ ? ಅವಕಾಶದ ಆಚೆಗೂ ಏನಾದರೂ ಇದೆಯೇ? ಇತ್ಯಾದಿ ಪ್ರಶ್ನೆಗಳು ಚಾಲ್ತಿಗೆ ಬಂದವು. ಐನ್‌ಸ್ಟೀನ್ ನರು ಸಾದರಪಡಿಸಿದ ವಿಶ್ವದ ಕುರಿತ ಮೂಲಭೂತ ನಿಯಮಗಳು ಪರೋಕ್ಷವಾಗಿ ಬೈಜಿಕ ಅಸ್ತ್ರಗಳಿಗೆ, ಬೈಜಿಕ ವಿದ್ಯುತ್‌, ಬೈಜಿಕ ಔಷಧೋಪಚಾರ ಇವುಗಳ ಅಭಿವೃದ್ಧಿಗೆ ಸಹಾಯಕವಾದವು.

 

ಪ್ರಭಾ-ವಿದ್ಯುತ್‌ ಪರಿಣಾಮ

ಕೆಲವು ಲೋಹಗಳ ಮೇಲೆ ಬೆಳಕು ಬಿದ್ದಾಗ, ಆ ಲೋಹದ ಮೇಲ್ಮೈಯಿಂದ ಎಲೆಕ್ಟ್ರಾನುಗಳು ಹೊರಚಿಮ್ಮುತ್ತವೆ ಎಂದು ವಿಜ್ಞಾನಿ ಆಲ್ಬರ್ಟ್ ಐನ್‌ಸ್ಟೀನ್‌ ಪ್ರಾಯೋಗಿಕದಾಗಿ ತೋರಿಸಿದರು. ಲೋಹದಿಂದ ಚಿಮ್ಮುವ ಈ ಎಲೆಕ್ಟ್ರಾನ್‌ ಗಳನ್ನು ಬಳಸಿ ವಿದ್ಯುತ್‌ ಉತ್ಪಾದಿಸಬಹುದು ಎಂದು ತೋರಿಸಿದ ಐನ್‌ಸ್ಟೀನ್‌ ಈ ವಿದ್ಯಮಾನಕ್ಕೆ ಪ್ರಭಾ ವಿದ್ಯುತ್ ಪರಿಣಾಮ (Photo-Electric Effect) ಎಂದು ಕರೆದರು. ಲೋಹದ ಮೇಲೆ ಬೆಳಕಿನ ಕಿರಣ ಬಿದ್ದಾಗ, ಎಲೆಕ್ಟ್ರಾನ್‌ ಗಳು ಹೊರಚಿಮ್ಮುವ ವಿದ್ಯಮಾನವನ್ನು ವಿವರಿಸಲು ಐನ್ ಸ್ಟೀನ್ ಬಳಸಿಕೊಂಡಿದ್ದು ವಿಜ್ಞಾನಿ 'ಮ್ಯಾಕ್ಸ್ ಪ್ಲಾಂಕ್' ನ ಕ್ವಾಂಟಮ್ ಸಿದ್ಧಾಂತವನ್ನು ಬೆಳಕಿನ ಕಿರಣದಲ್ಲಿ ಹರಿದು ಬರುವ ಬೆಳಕಿನ ಕಣ (Photon)ದಿಂದ ನಿರ್ದಿಷ್ಟ ಶಕ್ತಿ ಪಡೆದ ಎಲೆಕ್ಟ್ರಾನ್ ಪರಮಾಣುಗಳು ಪರಿಧಿಯಿಂದ ತಪ್ಪಿಸಿಕೊಂಡು ಹೊರಚಿಮ್ಮುತ್ತವೆ ಎಂದು ಸಾರಿದರು. ಹಾಗಾಗಿಯೇ ಬೆಳಕಿನಿಂದುಂಟಾದ ವಿದ್ಯುತ್ತಿಗೆ ಪ್ರಭಾ ವಿದ್ಯುತ್‌ ಎಂಬ ಹೆಸರು ಇಡಲಾಯಿತು. ಅಂದರೆ ಬೆಳಕಿನಿಂದಾದ ವಿದ್ಯುತ್‌ ಎಂಬ ಅರ್ಥದಲ್ಲಿ.

1921ರಲ್ಲಿ ಈ ಶೋಧನೆಗೆ 'ನೊಬೆಲ್ ಪುರಸ್ಕಾರ' ನೀಡಲಾಯಿತು.



ಆಲ್ಬರ್ಟ್ ಐನ್ ಸ್ಟೀನ್‌ರ ಬದುಕಿನ ಮಹತ್ವದ ದಿನಗಳು

 

1979 ಮಾರ್ಚ್ 14:-  ಜರ್ಮನಿಯ ಉಲ್ಮ್ ಎಂಬಲ್ಲಿ ಆಲ್ಬರ್ಟ್ ಐನ್‌ಸ್ಟೀನ್‌ರ ಜನನ

1880:- ಐನ್‌ಸ್ಟೀನ್ ಕುಟುಂಬ ಮ್ಯೂನಿಚ್‌ಗೆ ಪಯಣ.

1884:- ಐನ್‌ಸ್ಟೀನ್‌ಗೆ ಕೊಟ್ಟ ದಿಕ್ಕೂಚಿಯಿಂದ, ಅವನ ಮೊದಲನೇ ವೈಜ್ಞಾನಿಕ ಆವಿಷ್ಕಾರ.

1891:- 12 ವರ್ಷದವನಿದ್ದಾಗ ಒಂದು ಜ್ಯಾಮಿತಿಯ ಪುಸ್ತಕ ಕೊಟ್ಟಾಗ ಅವನ ಎರಡನೇ ಅನುಭವ, ಅದೂ ಪ್ರಕೃತಿಯ ರಹಸ್ಯಗಳ ಕುರಿತು.

1894:- ಆಲ್ಬರ್ಟ್‌ನನ್ನು ಮ್ಯೂನಿಚ್ನಲ್ಲಿ ಬಿಟ್ಟು ಐನ್‌ ಸ್ಟೀನ್ ಕುಟುಂಬ ಇಟಲಿಗೆ ಹೊರಟಿದ್ದು, ಅದೇ ವರ್ಷ ಶಾಲೆ ಬಿಟ್ಟು ಆಲ್ಬರ್ಟನು ಅವರ ಜತೆಗಿರಲು ಹೋದದ್ದು.

1895:- ಜೂರಿಕ್, (ಸಿಟ್ಟರ್ಲೆಂಡ್)ನ ತಾಂತ್ರಿಕ ಸಂಸ್ಥೆಗೆ ಪ್ರವೇಶ ಪರೀಕ್ಷೆಗೆ ಹಾಜರಾಗಿ, ಪ್ರವೇಶ ಪಡೆಯದೆ, ಆರೂವ್‌ಗೆ ಅಧ್ಯಯನಕ್ಕೆ ಸೇರಿದ್ದು.

1896:- ಹದಿನೇಳು ವರ್ಷದ ಐನ್‌ ಸ್ಟೀನ್ ಜರ್ಮನ್ ಪೌರತ್ವ ತ್ಯಜಿಸಿ, ಪ್ರವೇಶ ಪರೀಕ್ಷೆ ಮುಗಿಸಿ ಜೂರಿಕ್ ತಾಂತ್ರಿಕ ಸಂಸ್ಥೆಯನ್ನು ಸೇರಿದ್ದು.

1900:- ತಾಂತ್ರಿಕ ಸಂಸ್ಥೆಯಿಂದ ಪದವೀಧರನಾಗಿ ಕೆಲಸಕ್ಕೆ ಹುಡುಕಾಟ. ಮೊದಲನೇ ವೈಜ್ಞಾನಿಕ ಪ್ರಬಂಧದ ಪ್ರಕಟಣೆ.

1901:- ಇಪ್ಪತ್ತೆರಡು ವರ್ಷದ ಐನ್‌ ಸ್ಟೀನ್ ಸ್ವಿಸ್ ಪೌರನಾಗಿದ್ದು.

1902:- ಸ್ವಿಟ್ಟರ್ಲೆಂಡ್‌ನ ಬರ್ನ್ಸ್‌ನಲ್ಲಿ ಪೇಟೆಂಟ್ ಕಛೇರಿಯಲ್ಲಿ ಗುಮಾಸ್ತೆ ಕೆಲಸ ಪ್ರಾರಂಭ.

1903:- ಜನವರಿ 6 ರಂದು ಐನ್‌ಸ್ಟೀನ್ - ಮಿಲೇವಾರ ವಿವಾಹ.

1914:- ಮೇ 14ರಂದು ಮೊದಲ ಮಗ ಹ್ಯಾನ್ಸ್‌ ಆಲ್ಬರ್ಟಿನ ಜನನ.

1905:- ಪಿಎಚ್.ಡಿ. ಮುಗಿಸಿ, ಸಾಮಾನ್ಯ ಸಾಪೇಕ್ಷ ಸಿದ್ಧಾಂತವೂ ಸೇರಿದಂತೆ ಅನೇಕ ಪ್ರಬಂಧಗಳ ಪ್ರಕಟಣೆ ಪ್ರಬಂಧವೊಂದರಲ್ಲಿ ಅವರ ಮಹತ್ವದ  ಸಮೀಕರಣವೂ ಸೇರಿತ್ತು.

1906:-  ಕ್ವಾಂಟಂ ಸಿದ್ಧಾಂತದ ಕುರಿತು ಮೊದಲನೇ ಪ್ರಬಂಧದ ರಚನೆ. ಮುಂದಿನ 20 ವರ್ಷಗಳಲ್ಲಿ ಹೊಸ ವೈಜ್ಞಾನಿಕ ವಿಚಾರಗಳ ಕುರಿತು ಕೆಲಸ ಮಾಡಿದುದೆಲ್ಲಾ ಅನೇಕ ಪ್ರಬಂಧಗಳಾಗಿ ಪ್ರಕಟವಾದವು.

1909:- ಪೇಟೆಂಟ್ ಕಛೇರಿಗೆ ರಾಜೀನಾಮೆ. ಜೂರಿಕ್ ವಿಶ್ವವಿದ್ಯಾನಿಲಯದ ಸಹಾಯಕ ಪ್ರಾಧ್ಯಾಪಕನಾಗಿ ಸೇರ್ಪಡೆ.

1910:- ಜುಲೈ 28, ಎರಡನೇ ಮಗ ಎಡ್ವರ್ಡನ ಜನನ.

1911:- ಜೆಕೊಸ್ಲೋವಾಕಿಯಾದ ಪ್ರಾಗ್ಯೂ ವಿಶ್ವವಿದ್ಯಾನಿಲಯದಲ್ಲಿ ಪ್ರಾಧ್ಯಾಪಕ. ಆಗಲೇ ಬೆಳಕು ಬಾಗುವುದನ್ನು ಸೂರ್ಯಗ್ರಹಣ ಕಾಲದಲ್ಲಿ ನೋಡಬಹುದೆಂದು ಭವಿಷ್ಯ ನುಡಿದರು.

1912:- ತಾನು ಓದಿದ ಜೂರಿಕ್ ತಾಂತ್ರಿಕ ಸಂಸ್ಥೆಯಲ್ಲೇ ಪ್ರಾಧ್ಯಾಪಕನಾಗಿ ಪುನಃ ಬಂದದ್ದು. ಮಾರ್ಸೆಲ್‌ ಗ್ರಾಸ್‌ಮನ್‌ ಜತೆ ಸಾಮಾನ್ಯ ಸಾಪೇಕ್ಷಸಿದ್ದಾಂತ ಕುರಿತು ಕೆಲಸ.

1914:- ಬರ್ಲಿನ್‌ಗೆ ಪ್ರಯಾಣ. ಅಲ್ಲಿನ ವಿಶ್ವವಿದ್ಯಾನಿಲಯದಲ್ಲಿ ಪ್ರಾಧ್ಯಾಪಕ. ಆದರೆ ಪತ್ನಿ ಮಿಲೇವಾ ಐನ್‌ಸ್ಟೀನ್‌ರಿಂದ ಬೇರೆಯಾಗಿ, ಮಕ್ಕಳೊಂದಿಗೆ ಜೂರಿಕ್‌ಗೆ ಹಿಂತಿರುಗಿದಳು.

1917:- ಐನ್‌ಸ್ಟೀನ್ ಖಾಯಿಲೆಯಿಂದಿದ್ದಾಗ ಅವರ ಸೋದರ ಸಂಬಂಧಿ 'ಎಲ್ಸಾ' ಅವನನ್ನು ನೋಡಿಕೊಂಡಳು. ಆಗ ಐನ್ ಸ್ಟೀನ್, ಬರ್ಲಿನ್ ನ ಕೈಸೆರ್ ವಿಲ್ಹೆಲ್ಮ್ ಸಂಸ್ಥೆಯ ನಿರ್ದೇಶಕ.

1919:- ಯೂರೋಪಿನಾದ್ಯಂತ ವೈಜ್ಞಾನಿಕ ಭಾಷಣ ಮಾಡುತ್ತಾ ಪಯಣ. ಮಿಲೇವಾಳನ್ನು ವಿಚ್ಛೇದನ ಮಾಡಿ ಎಲ್ಸಾಳೊಂದಿಗೆ ಮರುಮದುವೆ. ಖಗೋಳ ವೀಕ್ಷಣಾಲಯದ ಫಲಿತಾಂಶಗಳು, ಐನ್‌ಸ್ಟೀನ್‌ನ ಬೆಳಕು ಬಾಗುವುದನ್ನು ನಿಖರಗೊಳಿಸಿದ್ದು, ತಕ್ಷಣವೇ ಐನ್‌ಸ್ಟೀನ್ ಪ್ರಸಿದ್ಧರಾದರು. ಯಹೂದಿಗಳೊಂದಿಗೆ ಚರ್ಚೆಯಲ್ಲಿ ತೊಡಗಿದ್ದು.

1920:- ಐನ್‌ಸ್ಟೀನ್‌ ವಿರುದ್ಧ ಪ್ರದರ್ಶನ. ಇದರ ಹಿಂದೆ ಯಹೂದಿ ವಿರೋಧಿಗಳ ಕೈವಾಡ. ಅವನ ವೈಜ್ಞಾನಿಕ ಕಾರ್ಯಕ್ಕಾಗಿ ಅನೇಕ ಅಂತರರಾಷ್ಟ್ರೀಯ ಬಹುಮಾನಗಳು. ರಾಷ್ಟ್ರಗಳ ಒಕ್ಕೂಟದಲ್ಲಿ ಅಂತರರಾಷ್ಟ್ರೀಯ ಸಹಕಾರ ಸಮಿತಿಯ ಸದಸ್ಯರಾದರು.

1921:- ಭೌತಶಾಸ್ತ್ರಕ್ಕೆ ಕೊಡುವ 'ನೊಬೆಲ್ ಪಾರಿತೋಷಕ ' ಪಡೆದದ್ದು.

1924:- ಬರ್ಲಿನ್ ಯಹೂದಿ ಸಮಿತಿಯ ಸದಸ್ಯನಾಗಿ ಸೇರಿದ್ದು.

1925:- ವೈಜ್ಞಾನಿಕ ಕಾರ್ಯದ ಮುಂದುವರಿಕೆ, ಮಹಾತ್ಮಾ ಗಾಂಧಿ ಮುಂತಾದವರ ಜೊತೆ ಸೇರಿ ಸೈನಿಕ ಪಡೆಗಳ ವಿರುದ್ಧ ನೀತಿಗೆ ಸಹಿ.

1929:- ಐವತ್ತು ವರ್ಷದ ಐನ್ ಸ್ಟೀನ್‌ ರಿಗೆ ಭೌತಶಾಸ್ತ್ರದ ಅತಿ ಮಹತ್ವದ 'ಮ್ಯಾಕ್ಸ್‌ ಪ್ಲಾಂಕ್'' ಪದಕದ ಕೊಡುಗೆ.

1930:- ಶಸ್ತ್ರತ್ಯಾಗ ಕುರಿತು ಕರೆ ನೀಡುವ ಒಪ್ಪಂದಕ್ಕೆ ಸಹಿ.

1932:- ಪ್ರಿನ್ಸ್‌ಟನ್ ಉನ್ನತ ಅಧ್ಯಯನ ಸಂಸ್ಥೆಯಲ್ಲಿ ಪ್ರಾಧ್ಯಾಪಕ, ಜರ್ಮನಿಯಿಂದ ಸಂಪೂರ್ಣ ವಲಸೆ.

1933:- ಯೂರೋಪಿಗೆ ಹಿಂದಿರುಗಿ ಬೆಲ್ಜಿಯಂನಲ್ಲಿ ರಕ್ಷಣೆಯಲ್ಲಿದ್ದು, ಅಕ್ಟೋಬರ್ 17ರಂದು ಕುಟುಂಬದವರೆಲ್ಲರೊಂದಿಗೆ ಯೂರೋಪು ಬಿಟ್ಟಿದ್ದು.

1936:- ಅಮೆರಿಕಾದಲ್ಲಿ ಎಲ್ಸಾಳ ಮರಣ.

1939:- ಐನ್‌ಸ್ಟೀನ್‌ ರ ತಂಗಿ 'ಮಾಜಾ' ಇಟಲಿಯಿಂದ ಬ೦ದು ಐನ್‌ಸ್ಟೀನ್‌ರ ಜತೆ ಸೇರಿದ್ದು, ಐನ್‌ಸ್ಟೀನ್‌ ಬೈಜಿಕ ಅಸ್ತ್ರಗಳನ್ನೂ ಮಾಡುವ ಸಾಧ್ಯತೆ ಕುರಿತು ಅಧ್ಯಕ್ಷ ರೂಸ್‌ ವೆಲ್ಟ್ರಿಗೆ ಪತ್ರ ಬರೆದದ್ದು

1940:- ಸ್ವಿಸ್‌ ಪೌರತ್ವ ಉಳಿಸಿಕೊಂಡೇ ಅಮೆರಿಕಾದ ಪೌರನಾಗಿದ್ದು.

1943:- ಅಮೆರಿಕಾದ ನೌಕಾ ಪಡೆಗೆ ಯುದ್ಧದ ಶಸ್ತ್ರಾಸ್ತ್ರ ಸಲಹೆಗಾರ.

1946:- ಸಂಯುಕ್ತ ರಾಷ್ಟ್ರಗಳು ಮತ್ತು ಇತರೆ ರಾಷ್ಟ್ರಗಳಿಗೆ ಮುಂದೆ ಯುದ್ಧಗಳನ್ನು ತಡೆಯುವಂತೆ ಮನವಿ.

1948:- ತೀವ್ರವಾಗಿ ಖಾಯಿಲೆಗೆ ಒಳಗಾದದ್ದು.

1952:- ಇಸ್ರೇಲ್‌ನ ಅಧ್ಯಕ್ಷರಾಗಿ ಆಹ್ವಾನ, ತಿರಸ್ಕಾರ,

1955:- ತುಂಬಾ ಅಸ್ವಸ್ಥರಾಗಿಯೂ ಯುದ್ಧಶಸ್ತ್ರಗಳ ವಿರುದ್ಧ ಶಾಂತಿಗಾಗಿ ಪ್ರದರ್ಶನ, ವೈಜ್ಞಾನಿಕ ಚಟುವಟಿಕೆಯಲ್ಲಿ ಮುಂದುವರಿಕೆ. ಏಪ್ರಿಲ್ 18 ರಂದು, ಎಪ್ಪತ್ತಾರು ವರ್ಷದ ಆಲ್ಬರ್ಟ್‌ ಐನ್‌ ಸ್ಟೀನ್‌ ರ ಮರಣ.

 

ಪ್ರಿಯ ಓದುಗರೇ ನೋಡಿದಿರಲ್ಲ ನಮ್ಮ ಅಲ್ಬರ್ಟ್ ಐನ್‌ ಸ್ಟೀನ್‌ ಅವರ ಜೀವನ ಯಶೋಗಥೆಯನ್ನ. ಮುಂದಿನ ಬರಹದಲ್ಲಿ ಇದೆ ರೀತಿಯ ಉಪಯುಕ್ತ ಮಾಹಿತಿಯೊಂದಿಗೆ ನಾವು ಸಿಗೋಣ. 

ಭಾಗ ೧ ಓದಲು click here for part 1 ಬಟ್ಟನ್ ಮೇಲೆ ಒತ್ತಿರಿ.

CLICK HERE FOR PART 1

ಭಾಗ 2 ಓದಲು click here for part 2 ಬಟ್ಟನ್ ಮೇಲೆ ಒತ್ತಿರಿ.

CLICK HERE FOR PART 2

ಭಾಗ 3 ಓದಲು click here for part 3 ಬಟ್ಟನ್ ಮೇಲೆ ಒತ್ತಿರಿ.

CLICK HERE FOR PART 3 

Jul 8, 2022

The Great Personalities - Albert Einstein PART-3|ಮಹಾನ್ ವ್ಯಕ್ತಿಗಳು - ಅಲ್ಬರ್ಟ್ ಐನ್ ಸ್ಟೀನ್ ಭಾಗ-3|

The Great Personalities - Albert Einstein PART-3|ಮಹಾನ್ ವ್ಯಕ್ತಿಗಳು - ಅಲ್ಬರ್ಟ್ ಐನ್ ಸ್ಟೀನ್ ಭಾಗ-3|


ಜೀವನದಲ್ಲಿ ಯಶಸ್ಸು ಲಭಿಸಿದಮೇಲೆ ಪ್ರಶಸ್ತಿಗಳು ಆರಸುತ್ತಾ ಬರುತ್ತವೆ. ಐನ್‌ಸ್ಟೀನ್‌ ಅವರ ಜೀವನದಲ್ಲೂ ಸಹ ಹಲವಾರು ಪ್ರಶಸ್ತಿಗಳು ಅರಸಿ ಬಂದವು, ಅದರಲ್ಲೂ ನೊಬೆಲ್ ಪ್ರಶಸ್ತಿ ದೊರಕಿರುವುದು ಒಂದು ಮಹಾಸಾಧಕತೆಯನ್ನು ಪ್ರತಿನಿದಿಸುತ್ತದೆ.

ಈ ಬರಹವು ಭಾಗ ೧ ಮತ್ತು ಭಾಗ 2 ರ ನಂತರ ಬರೆದಿರುವುದಾಗಿದೆ.

ಭಾಗ ೧ ಓದಲು click here for part 1 ಬಟ್ಟನ್ ಮೇಲೆ ಒತ್ತಿರಿ.

CLICK HERE FOR PART 1

ಭಾಗ 2 ಓದಲು click here for part 2 ಬಟ್ಟನ್ ಮೇಲೆ ಒತ್ತಿರಿ.

CLICK HERE FOR PART 2

1921ರಲ್ಲಿ ಐನ್‌ಸ್ಟೀನ್‌ರು, ಪೌರಾತ್ಯ ರಾಷ್ಟ್ರಗಳಲ್ಲಿ ಪ್ರವಾಸ ಮಾಡುತ್ತಿದ್ದಾಗ ಸಂತೋಷದ ಸುದ್ದಿಯೊಂದು ಪ್ರಕಟಗೊಂಡಿತು. ಅವರ ಪ್ರಖ್ಯಾತ ಸಂಶೋಧನೆಗಳಲ್ಲೊಂದಾದ 'ದ್ಯುತಿವಿದ್ಯುತ್‌ ಪರಿಣಾಮ' (Photo-Electric Effect) ಕಂಡುಹಿಡಿದುದಕ್ಕೆ “ನೊಬೆಲ್ ಪ್ರಶಸ್ತಿ”  ಘೋಷಿಸಲಾಯಿತು. ವಿಶೇಷವೆಂದರೆ ಈ ಸಂಶೋಧನೆಯನ್ನು ಐನ್ ಸ್ಟೀನ್ ಪ್ರಕಟಿಸಿ 17 ವರ್ಷಗಳಾಗಿತ್ತು. ಆಗಲೇ ಈ ಪ್ರಶಸ್ತಿ ಐನ್ಸ್ಟೀನ್‌ರಿಗೆ ದೊರಕಬೇಕಿತ್ತು. ಆದರೆ, ಅವರೊಬ್ಬ ಯಹೂದಿ ಎಂಬ ಕಾರಣವೋ, ಎಲ್ಲರೂ ಅಸೂಯೆಪಡುವಷ್ಟು ಮೇಧಾವಿ ಎಂಬ ಕಾರಣಕ್ಕೋ ಈ ಪ್ರಶಸ್ತಿ ದೊರೆಯಲು ಇಷ್ಟು ತಡವಾಗಿಹೋಯಿತು. ಕೊನೆಗೂ ನಿಜವಾದ ಪ್ರತಿಭೆಗೆ, ಮೇಧಾವಿತನಕ್ಕೆ ಪ್ರಶಸ್ತಿ ಅರಸಿ ಬಂದಿತ್ತು. ಆಲ್ಬರ್ಟ್ ಐನ್‌ಸ್ಟೀನ್‌ ರಿಗೆ ನೊಬೆಲ್ ಪ್ರಶಸ್ತಿ ಘೋಷಣೆಯಾಗುತ್ತಿದ್ದಂತೆ ವಿಶ್ವದೆಲ್ಲೆಡೆಯಿಂದ ಅಭಿನಂದನೆಯ ಸುರಿಮಳೆಯಾಯಿತು. ಈ ಪ್ರಶಸ್ತಿಗಿಂತ ಮೊದಲೇ ಸಾಪೇಕ್ಷ ಸಿದ್ಧಾಂತದ ಮೂಲಕ ಅವರ ಹೆಸರು ಪ್ರಖ್ಯಾತಿಗೊಂಡಿತ್ತು. ವಿಶ್ವದ ಎಲ್ಲ ವಿಶ್ವವಿದ್ಯಾನಿಲಯಗಳಲ್ಲಿ ದಿನನಿತ್ಯ ಅವರ ಸಿದ್ಧಾಂತದ ಪ್ರಸ್ತಾಪ ನಡೆಯುತ್ತಿತ್ತು. ನೊಬೆಲ್ ಪ್ರಶಸ್ತಿಯನ್ನು ಐನ್‌ಸ್ಟೀನ್‌ ರಿಗೆ ನೀಡಿದ್ದರಿಂದಾಗಿ, ಆ ಪ್ರಶಸ್ತಿಗೆ ಹೆಚ್ಚಿನ ಮೌಲ್ಯ ಸಂದಂತಾಗಿತ್ತು. ಐನ್‌ಸ್ಟೀನ್‌ರ ಹೆಸರು ವಿಶ್ವದೆಲ್ಲೆಡೆ ಮನೆಮಾತಾಯಿತು.

ಅಮೆರಿಕಾದ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾನಿಲಯವು ತನ್ನಲ್ಲಿ ಕಾರ್ಯ ನಿರ್ವಹಿಸಲು ಅಲ್ಬರ್ಟ್ ಐನ್‌ಸ್ಟೀನ್‌ರಿಗೆ ಆಹ್ವಾನ ನೀಡಿತ್ತು. ಸರ್ಕಾರದ ಕಿರುಕುಳದಿಂದ ತೀವ್ರವಾಗಿ ನೊಂದಿದ್ದ ಐನ್‌ಸ್ಟೀಸ್‌ರು, ತಮ್ಮ ಕುಟುಂಬಸಮೇತ ತಾಯ್ನಾಡನ್ನು ತೊರೆದು ಅಮೆರಿಕಾಗೆ ತೆರಳಿದರು. ಜರ್ಮನಿಯನ್ನು ತೊರೆದ ಐನ್‌ಸ್ಟೀನ್‌ ಬಗ್ಗೆ ಹಲವು ವಿಜ್ಞಾನಿಗಳೇ ಅಪಪ್ರಚಾರ ಮಾಡತೊಡಗಿದರು. ಐನ್‌ಸ್ಟೀನ್‌ರ ಸಂಶೋಧನೆಗಳೆಲ್ಲಾ ಕಟ್ಟುಕತೆಗಳೆಂದು, ಜರ್ಮನಿಯಲ್ಲೇ ಉಳಿದಿದ್ದರೆ ಗೆಲಿಲಿಯೋನಂತೆ ಐನ್ ಸ್ಟೀನ್‌ ನನ್ನು ಜೈಲಿಗೆ ತಳ್ಳಬೇಕಾಗಿತ್ತೆಂದು ಆಡಿಕೊಂಡರು. ಅದೇ ವೇಳೆಗೆ 1933ರಲ್ಲಿ ಜರ್ಮನಿಯಲ್ಲಿ ನಾಜೀ ಪಕ್ಷದ ಸರ್ವಾಧಿಕಾರಿ ಹಿಟ್ಲರ್ ಅಧಿಕಾರಕ್ಕೆ ಬಂದಿದ್ದ. ಕ್ಯಾಲಿಫೋರ್ನಿಯಾದಲ್ಲಿ ತಮ್ಮ ಕೆಲಸ ಮುಗಿಸಿ ಯುರೋಪಿಗೆ ಹಿಂದಿರುಗಿದ ಐನ್‌ ಸ್ಟೀನ್ ಬೆಲ್ಲಿಯಂನ ಲಾಕಾಕ್ ಪಟ್ಟಣಕ್ಕೆ ಬಂದು ನೆಲೆಸಿದಾಗಲೂ ಅವರಿಗೆ ನಾಜೀಗಳ ಕಿರುಕುಳ ತಪ್ಪಲಿಲ್ಲ. ಬೆಲ್ಲಿಯಂನ ರಾಣಿ ಐನ್‌ ಸ್ಟೀನ್‌ರ ಪ್ರಾಣರಕ್ಷಣೆಗಾಗಿ ಸದಾ ಎಚ್ಚರಿಕೆ ವಹಿಸಿದಳು. ಆ ಹೊತ್ತಿಗೆ ಪುನಃ ಅಮೆರಿಕಾದಿಂದ ಐನ್ ಸ್ಟೀನ್‌ ರಿಗೆ ಆಹ್ವಾನ ಬಂದಿತ್ತು.

 

1926ರಲ್ಲಿ, ಅವರನ್ನು ಅಲ್ಲಿಯವರೆಗೆ ಅತ್ಯಂತ ಪ್ರೀತಿಯಿಂದ ಸಲಹಿದ ಅವರ ಎರಡನೇ ಪತ್ನಿಯಾಗಿದ್ದ 'ಎಲ್ಸಾ’ ತೀರಿಕೊಂಡಳು. ಅವರಿಗದು ತೀವ್ರ ನೋವಿನ ಸಂಗತಿಯಾಗಿತ್ತು, ಈ ನೋವು ಮರೆಯಾದದ್ದು, ತಮ್ಮ ಬಾಲ್ಯದ ಪ್ರೀತಿಯ ತಂಗಿ 'ಮಾಜಾ' ಬಂದು ಆ ಇಳಿ ವಯಸ್ಸಿನಲ್ಲಿ ಅವರ ಜೊತೆ ಸೇರಿಕೊಂಡಾಗ. 1934ರಲ್ಲಿ ಐನ್‌ ಸ್ಟೀನ್‌ ರು ಪುನಃ ಅಮೆರಿಕಾದ ಪ್ರಿನ್ಸ್‌ಟನ್‌ ವಿಶ್ವವಿದ್ಯಾನಿಲಯದಲ್ಲಿ ಪ್ರಾಧ್ಯಾಪಕ ವೃತ್ತಿ ಪ್ರಾರಂಭಿಸಿದರು. ಆ ದಿನಗಳಲ್ಲಿ ಐನ್ಸ್ಟೀನ್ ನೆಮ್ಮದಿಯಿಂದಿದ್ದರು.

 

ಆಲ್ಬರ್ಟ್ ಐನ್ಸ್ಟೀನ್ ಅವರ ಜೀವನಗಾಥೆಯಲ್ಲಿ ಸರಳತೆ

ಆಲ್ಬರ್ಟ್ ಐನ್ಸ್ಟೀಸ್ ರು ಪ್ರಖ್ಯಾತಿಯ ಉತ್ತುಂಗಕ್ಕೇರಿದ್ದರೂ ತಮ್ಮ ಸರಳತೆ, ಸಂಭಾವಿತ ಗುಣ ಮತ್ತು ಮಾನವೀಯತೆಗಳನ್ನು ಎಂದೂ ಬಿಟ್ಟುಕೊಡಲಿಲ್ಲ. ಅಮೆರಿಕಾದಂತಹ ಶ್ರೀಮಂತ ಜೀವನಶೈಲಿಯ ನೆಲದಲ್ಲಿದ್ದರೂ, ಐನ್‌ಸ್ಟೀನ್, ಸರಳಜೀವನ ಶೈಲಿ ರೂಪಿಸಿಕೊಂಡಿದ್ದರು. ಸದಾ ಸೂಟುಬೂಟುಗಳಲ್ಲಿ ಚಾಕುಠೀಕಾಗಿರುತ್ತಿದ್ದ ಜನರ ನಡುವೆ ಐನ್‌ಸ್ಟೀನ್‌ ಕಾಲುಚೀಲವಿಲ್ಲದೆ ಸಾಧಾರಣ ಚಪ್ಪಲಿ ಹಾಕಿಕೊಂಡು, ತಲೆಗೆ ಹ್ಯಾಟಿಲ್ಲದೆ ಕೆದರಿದ ಕೂದಲಿನಲ್ಲಿ ಒಬ್ಬಂಟಿಯಾಗಿ ತಿರುಗಾಡುತ್ತಿದ್ದರು. ಅವರನ್ನು ಸರಳರು ಎಂಬುದಕ್ಕೆ ಅಂದಿನ ಎರಡು ಘಟನೆಗಳು ಇಂದಿಗೂ ಪ್ರಚಲಿತದಲ್ಲಿವೆ.

ಒಮ್ಮೆ ಪ್ಯಾರಿಸ್‌ ನ ಪ್ರಖ್ಯಾತ ಸಭಾಂಗಣವೊಂದರಲ್ಲಿ ಅವರ ಉಪನ್ಯಾಸ ಏರ್ಪಾಡಾಗಿತ್ತು. ಈ ವಿಶ್ವವಿಖ್ಯಾತರನ್ನು ಸ್ವಾಗತಿಸಲು ನೂರಾರು ಜನ ರೈಲು ನಿಲ್ದಾಣದಲ್ಲಿ ಹೂಗುಚ್ಛ ಹಿಡಿದು ಕಾಯುತ್ತಿದ್ದರು. ಇನ್ನೇನು ರೈಲು ಬಂದು ನಿಂತಿತು. ಕಾದಿದ್ದವರೆಲ್ಲ ಪ್ರಥಮ ದರ್ಜೆಯ ರೈಲು ಡಬ್ಬಿಯ ಕಡೆಗೆ ಐನ್‌ಸ್ಟೀನ್‌ರನ್ನು ಸ್ವಾಗತಿಸಲು ಓಡಿದರು, ಅಲ್ಲಿ ಐನ್ ಸ್ಟೀನ್ ಇರಲಿಲ್ಲ. ಮೂರನೇ ದರ್ಜೆಯ ಡಬ್ಬಿಯಲ್ಲಿ ಪ್ರಯಾಣಿಸಿ ಬಂದಿದ್ದ ಐನ್‌ಸ್ಟೀನ್‌ ಆಗಲೇ ರೈಲು ನಿಲ್ದಾಣದಿಂದ ಹೊರನಡೆದು ಹೋಗಿದ್ದರು!

ವಿಯೆನ್ನಾದಲ್ಲಿ ನಡೆದ ಇನ್ನೊಂದು ಘಟನೆ ಉಡುಪಿನ ಬಗೆಗೆ ಐನ್‌ಸ್ಟೀನ್‌ ತುಂಬಾ ಸರಳರು. ಎಲ್ಲಿಗೆ ಹೋದರೂ ಎರಡು ಜೊತೆ ಉಡುಪನ್ನು ಮಾತ್ರ ತೆಗೆದುಕೊಂಡು ಹೋಗುತ್ತಿದ್ದರು. ವಿಯೆನ್ನಾದಲ್ಲಿ ಬಹಳ ದಿನ ಉಳಿದಿದ್ದರಿಂದ ಉಡುಪಿನ ಇಸ್ತ್ರಿಯೆಲ್ಲವೂ ಹಾಳಾಗಿಹೋಗಿ ಸುಕ್ಕಾಗಿತ್ತು. ಐನ್‌ಸ್ಟೀನ್ ಉಳಿದುಕೊಂಡಿದ್ದ ಗೆಸ್ಟ್‌ಹೌಸ್‌ನಲ್ಲಿ ಹೊಸ ಉಡುವನ್ನು ತರಿಸಿ ಅವರಿಗೆ ಕಾಣುವಂತೆ ಇಡಲಾಗಿತ್ತು, ಆದರೆ ಐನ್‌ಸ್ಟೀನ್ ತಮ್ಮದೇ ಬಟ್ಟೆಯಲ್ಲಿ ಉಪನ್ಯಾಸ ನೀಡಲು ಹೋಗಿಬಿಟ್ಟಿದ್ದರು. ಹೊಸ ಚಪ್ಪಲಿ ತರಿಸಿ ಇಟ್ಟಾಗಲೂ ಐನ್ ಸ್ಟೀನ್ ಅವನ್ನು ಬಳಸಿರಲಿಲ್ಲ.

ಐನ್‌ ಸ್ಟೀನ್‌ ಸರಳವಾಗಿದ್ದರೇ ಹೊರತು ಜಿಪುಣರಾಗಿರಲಿಲ್ಲ. ತನ್ನ ಉಪನ್ಯಾಸಗಳಿಂದ, ಸಂಬಳದಿಂದ ಬಂದ ಬಹುತೇಕ ಹಣವನ್ನು ಅಗತ್ಯ ಕಂಡುಬಂದ ಬಡವರಿಗೆ, ವಿದ್ಯಾರ್ಥಿಗಳಿಗೆ, ಕಷ್ಟದಲ್ಲಿದ್ದ ಯಹೂದಿಗಳಿಗೆ ನೀಡುತ್ತಿದ್ದರು. ತಮಗೆ ನೊಬೆಲ್ ಬಹುಮಾನ ಬಂದಾಗ ವಿಚ್ಛೇದನ ಪಡೆದಿದ್ದ ತಮ್ಮ ಮೊದಲ ಹೆಂಡತಿಯ ಇಬ್ಬರು ಮಕ್ಕಳಿಗೂ ಬಹುಮಾನದ ಹಣವನ್ನು ಹಂಚಿದ್ದರು ಐನ್‌ ಸ್ಟೀನ್.

ಮೊದಲನೇ ಮಹಾಯುದ್ಧದ ಕಹಿನೆನಪು ಆರುವ ಮೊದಲೇ ಐನ್‌ಸ್ಟೀನ್‌ ರದೇ ಆದ 'ವಸ್ತು-ಚೈತನ್ಯ ಸಂಬಂಧ’ ಸಿದ್ಧಾಂತವನ್ನು ಬಳಸಿಕೊಂಡು ಬೇರೆ ಬೇರೆ ಸಂಶೋಧನೆಗಳು ನಡೆದವು. ಎನ್ರಿಕೋ ಫರ್ಮಿ ಮತ್ತು ಲಿಯೋಸಿಲಾಡರ್ ಎಂಬ ವಿಜ್ಞಾನಿಗಳು ಇಟಲಿ ಮತ್ತು ಜರ್ಮನಿಗಳಲ್ಲಿ ಸಂಶೋಧನೆ ನಡೆಸುತ್ತಿದ್ದವರು. ಇವರು ನಡೆಸಿದ ಪ್ರಯೋಗಗಳಿಂದ “ಅಣು ಬಾಂಬು (Atom Bomb)'' ಸೃಷ್ಟಿಸುವುದು ಸಾಧ್ಯವೆಂದು ಸಾಬೀತಾಯಿತು. ಸರ್ಕಾರಗಳ ಕಿರುಕುಳ ತಡೆಯಲಾರದೆ ಈ ವಿಜ್ಞಾನಿಗಳು ಅಮೆರಿಕಾಕ್ಕೆ ಓಡಿಹೋದರು. ಅವರು ಐನ್‌ಸ್ಟೀನ್‌ ರಿಗೆ ಆಟಮ್ ಬಾಂಬಿನ ರಹಸ್ಯ ವಿವರಿಸಿದರು. ಆಲ್ಬರ್ಟ್ ಐನ್‌ಸ್ಟೀನ್ ರಿಗೂ, ಆಗ ಅಮೇರಿಕಾದ ಅಧ್ಯಕ್ಷರಾಗಿದ್ದ ರೂಸ್‌ವೆಲ್ಟರಿಗೂ ಅಪಾರ ಸ್ನೇಹವಿತ್ತು. ಆಟಂ ಬಾಂಬಿನ ಅದ್ಭುತ ರಹಸ್ಯವನ್ನು ಅಧ್ಯಕ್ಷ ರೂಸ್‌ವೆಲ್ಟಗೆ ವಿಜ್ಞಾನಿ ಐನ್‌ಸ್ಟೀನ್‌ ರ ಮೂಲಕ ತಿಳಿಸಿ ಮಹಾಯುದ್ಧದಲ್ಲಿ ಮಿತ್ರರಾಷ್ಟ್ರಗಳಿಗೆ ಜಯ ದೊರಕಿಸಬೇಕೆಂಬುದೇ ಈ ವಿಜ್ಞಾನಿಗಳ ಆಕಾಂಕ್ಷೆಯಾಗಿತ್ತು. ಅಣುಬಾಂಬಿನ ಸೃಷ್ಟಿಯೇ ವಿಜ್ಞಾನಿ ಐನ್‌ ಸ್ಟೀನ್ ರಿಗೆ ಸರಿಕಾಣಲಿಲ್ಲ. ಆದರೆ, ಯೂರೋಪಿನ ಹಿಟ್ಲರ್ ನಂತಹ ಸರ್ವಾಧಿಕಾರಿಗಳು ಮೊದಲು ಆಟಂ ಬಾಂಬನ್ನು ಕಂಡುಹಿಡಿದರೆ ಇಡೀ ಜಗತ್ತೇ ಸಾವಿನ ಮನೆಯಾದೀತೆಂದು, ಆ ಮಾರಕಾಸ್ತ್ರವನ್ನು ಬಳಸದೆಯೇ ನಾಜೀಗಳಿಗೆ ಗೊಡ್ಡುಬೆದರಿಕೆ ಹಾಕಲೆಂದು ಐನ್‌ಸ್ಟೀನ್‌, ಅಧ್ಯಕ್ಷ ರೂಸ್‌ವೆಲ್ಟರಿಗೆ ಅಣುಬಾಂಬ್ ಸೃಷ್ಟಿಯ ಬಗ್ಗೆ ಕಾಗದ ಬರೆದರು. ಆದರೆ, ಐನ್‌ಸ್ಟೀನ್ ಎಣಿಸಿದಂತೆ ಯಾವುದೂ ಆಗಲಿಲ್ಲ. ಹಿರೋಶಿಮಾ, ನಾಗಸಾಕಿಗಳು ಅಣುಬಾಂಬಿನ ರುದ್ರಪ್ರಳಯಕ್ಕೆ ಬಲಿಯಾದವು. ಅಲ್ಲಿಗೆ ದ್ವಿತೀಯ ಮಹಾಯುದ್ಧ ಮುಕ್ತಾಯಗೊಂಡಿತು. ಐನ್‌ಸ್ಟೀನರ ಮನಸ್ಸು ತಲ್ಲಣಗೊಂಡಿತು. ಯುದ್ಧಗಳು ತರುವ ಸಾವು ನೋವುಗಳ ಬಗ್ಗೆ ತಾವು ಕೈಗೊಂಡ ಹೋರಾಟ, ತೋರಿದ ಎಚ್ಚರಿಕೆ ಫಲಿಸದೇ ಹೋದದ್ದನ್ನು ಕಂಡು ಬಹಳ ನೊಂದುಕೊಂಡರು. ಆನಂತರವೂ ಪ್ರಮುಖ ರಾಷ್ಟ್ರಗಳ ಎಲ್ಲ ಮುಖಂಡರುಗಳಿಗೆ ಐನ್‌ಸ್ಟೀನ್‌ ಮಾರಕಾಸ್ತ್ರಗಳ ಬಳಕೆಯನ್ನು ವಿರೋಧಿಸಿ ಪತ್ರ ಬರೆದರು.

ಐನ್‌ ಸ್ಟೀನ್‌ ತಮ್ಮ ಇಳಿವಯಸ್ಸಿನಲ್ಲೂ ಸ್ವಾತಂತ್ರ್ಯ ಮತ್ತು ನ್ಯಾಯಕ್ಕಾಗಿ ಆಂದೋಲನ ಮಾಡುವುದನ್ನು ಮುಂದುವರಿಸಿದರು. ಅತ್ಯಂತ ಸೂಕ್ಷ್ಮ ವಿಚಾರಗಳಾದ ಅಣ್ವಸ್ತ್ರಗಳ ಕುರಿತ ತೀರ್ಮಾನಗಳ ಬಗೆಗೆ ತಿಳಿದುಕೊಳ್ಳಲು ಸಾರ್ವಜನಿಕರಿಗೆ ಇರುವ ಹಕ್ಕನ್ನು, ಇರಬೇಕಾದ ಜವಾಬ್ದಾರಿಯನ್ನು ಸದಾ ಒತ್ತಿ ಹೇಳುತ್ತಿದ್ದರು. ಐನ್‌ಸ್ಟೀನ್‌ ರ ಈ ನಡವಳಿಕೆ ಎಷ್ಟೋ ಬಾರಿ ಅಮೇರಿಕಾದ ಅಧಿಕಾರಿಗಳಿಗೆ ಹಿಡಿಸುತ್ತಿರಲಿಲ್ಲ. ಆದರೇನು, ತಮ್ಮ ಜೀವನದ ಕೊನೆಯ ದಿನಗಳವರೆಗೂ ಯುದ್ಧವಿರೋಧಿ ನಿಲುವು, ಆಂದೋಲನ ರೂಪಿಸಲು ಐನ್‌ ಸ್ಟೀನ್ ಶ್ರಮಿಸಿದರು. ಆಲ್ಬರ್ಟ್ ಐನ್ಸ್ಟೀನ್ 1955ರ ಏಪ್ರಿಲ್ 18ರಂದು ಅನಾರೋಗ್ಯದಿಂದ ಕೊನೆಯುಸಿರೆಳೆದರು. ಮರುದಿನ ಎಲ್ಲ ಪತ್ರಿಕೆಗಳಲ್ಲೂ ಐನ್‌ಸ್ಟೀನ್‌ ತೀರಿಕೊಂಡದ್ದೇ ಮುಖ ಪುಟದ ಪ್ರಮುಖ ಸುದ್ದಿಯಾಯಿತು. ಎಲ್ಲ ಪತ್ರಿಕೆಗಳೂ 20 ನೇ ಶತಮಾನದ ಅತ್ಯಂತ ಮೇಧಾವಿಯ ಮರಣ '' ಎಂದು ದಾಖಲಿಸಿದ್ದವು.

ವಿಜ್ಞಾನಿ ಆಲ್ಬರ್ಟ್ ಐನ್‌ಸ್ಟೀನ್‌ರ ಜೀವನ ಇಂದಿಗೂ ಮನುಕುಲಕ್ಕೆ ಕುತೂಹಲದ, ವಿಸ್ಮಯದ ಸಂಗತಿ. ಅವರ ಸಾಧನೆ ಎಲ್ಲರಿಗೂ ಮಾರ್ಗದರ್ಶಿ, ಅವರು ತೋರಿದ ಮಾನವೀಯತೆ ಇಡೀ ಮನುಕುಲಕ್ಕೆ ದಾರಿದೀಪ. ಅವರ ಜೀವನದ ಸಂಕ್ಷಿಪ್ತ ಮಾಹಿತಿ ತಿಳಿದಿರಿ. ನನ್ನ ಮುಂದಿನ ಬರಹದಲ್ಲಿ ಅವರ ಅನ್ವೇಷಣೆಗಳ ಬಗ್ಗೆ ತಿಳಿಸಲಿಚ್ಚಿಸುತ್ತೇನೆ.


ಭಾಗ ೧ ಓದಲು click here for part 1 ಬಟ್ಟನ್ ಮೇಲೆ ಒತ್ತಿರಿ.

CLICK HERE FOR PART 1

ಭಾಗ 2 ಓದಲು click here for part 2 ಬಟ್ಟನ್ ಮೇಲೆ ಒತ್ತಿರಿ.

CLICK HERE FOR PART 2

Jul 7, 2022

The Great Personalities - Albert Einstein PART-2|ಮಹಾನ್ ವ್ಯಕ್ತಿಗಳು - ಅಲ್ಬರ್ಟ್ ಐನ್ ಸ್ಟೀನ್ ಭಾಗ-2|

The Great Personalities - Albert Einstein PART-2|ಮಹಾನ್ ವ್ಯಕ್ತಿಗಳು - ಅಲ್ಬರ್ಟ್ ಐನ್ ಸ್ಟೀನ್ ಭಾಗ-2|

ಕಷ್ಟ ಕಳೆದ ನಂತರ ಸುಖ ಬರಲೇಬೇಕು. ಹಾಗೆಯೇ ಐನ್‌ಸ್ಟೀನ್‌ ಅವರ ಜೀವನದಲ್ಲೂ ಕಷ್ಟದ ದಿನಗಳು ಕಳೆದು ಸುಖದ ಜೀವನ ಸಮೀಪಿಸುತ್ತಿತ್ತು. ಈ ಬರಹದಲ್ಲಿ ಅವರ ಏಳಿಗೆಯ ದಿನಗಳನ್ನು ನೋಡೋಣ.

ಮೊದಲ ಭಾಗ ಓದಿಲ್ಲದಿದ್ದರೆ ಕೆಳೆಗೆ ಕಾಣುತ್ತಿರುವ click here ಬಟ್ಟನ್ ಅನ್ನು ಒತ್ತಿ.

CLICK HERE

ವಿಶ್ವವಿದ್ಯಾನಿಲಯ ಮತ್ತು ನಂತರದ ಜೀವನ

ಜ್ಯೂರಿಕ್ ವಿಶ್ವವಿದ್ಯಾನಿಲಯದಲ್ಲಿ ಆಲ್ಬರ್ಟ್ ಐನ್‌ಸ್ಟೀನ್ ಅವರು ತುಂಬಾ ಸರಳ ಜೀವನ ನಡೆಸಬೇಕಾಯಿತು. ಮನೆಯಿಂದ ಬರುತ್ತಿದ್ದ ಹಣಕಾಸಿನ ಬೆಂಬಲ ತುಂಬಾ ಕಡಿಮೆಯಿತ್ತು. ಊಟಕ್ಕೂ ಪರದಾಡುವ ಸ್ಥಿತಿ ಅವರದಾಗಿತ್ತು. ಕಡಿಮೆ ಹಣಕ್ಕೆ ದೊರೆಯುವ ಅತೀ ಸಾಧಾರಣ ಊಟ ಅವರದಾಗಿತ್ತು. ತುಂಬಾ ಕಡಿಮೆ ಬಾಡಿಗೆಯುಳ್ಳ ಪುಟ್ಟ ಕೊಠಡಿಯೊಂದನ್ನು ಅವರು ಬಾಡಿಗೆಗೆ ಪಡೆದರು. ಇದ್ದ ಎರಡು ಜೊತೆ ಬಟ್ಟೆಯಲ್ಲಿಯೇ ಕಾಲ ಕಳೆಯಬೇಕಾಯಿತು. ವಾಹನಗಳಲ್ಲಿ ಅವರು ಪ್ರಯಾಣಿಸುತ್ತಿರಲಿಲ್ಲ. ಕಾಲು ನಡಿಗೆಯಲ್ಲೇ ತಿರುಗಾಡುತ್ತಿದ್ದರು. ಐನ್‌ಸ್ಟೀನ್‌ರ ಈ ಎಲ್ಲಾ ಸ್ವಭಾವಗಳನ್ನು ಗಮನಿಸುತ್ತಿದ್ದ ಅವರ ಗೆಳೆಯರು ಅವನೊಬ್ಬ ಜಿಪುಣನೆಂದೇ ತೀರ್ಮಾನಿಸಿದ್ದರು. ಚಿಕ್ಕಂದಿನಂತೆಯೇ ಈ ಕಾಲೇಜಿಗೆ ಬಂದ ಮೇಲೂ ಐನ್‌ಸ್ಟೀನ್ ಅವರಿಗೆ ಗುಂಪು ಗೌಜಲುಗಳೆಂದರೆ ಆಗುತ್ತಿರಲಿಲ್ಲ. ಅವರ ಏಕಾಂಗಿ ಗುಣ ನೋಡಿ ಇತರೇ ಹುಡುಗರು ಅವರ ಜೊತೆ ಸೇರುತ್ತಿರಲಿಲ್ಲ. ಒಬ್ಬಿಬ್ಬರು ಗಂಭೀರ ಸ್ವಭಾವದ ಸ್ನೇಹಿತರು ಮಾತ್ರ ಅವರಿಗಿದ್ದರು. ಕೊನೆಗೂ ತಂದೆ ತಾಯಿಗಳು ಇಷ್ಟಪಟ್ಟಂತೆಯೇ ಐನ್‌ ಸ್ಟೀನ್‌ ಪದವಿ ವ್ಯಾಸಂಗ ಮುಗಿಸಿದರು.

ಕಾಲೇಜು ವಿದ್ಯಾಭ್ಯಾಸಕ್ಕಾಗಿ ಐನ್‌ಸ್ಟೀನ್‌ರಿಗೆ ಆವರೆವಿಗೂ ಬರುತ್ತಿದ್ದ ಸಹಾಯಧನ ನಿಂತುಹೋಯಿತು. ಊರಿಗೆ ವಾಪಸ್ಸು ಹೋಗಿ ತಂದೆತಾಯಿಗಳಿಗೆ ಹೊರೆಯಾಗುವುದು ಐನ್‌ಸ್ಟೀನ್‌ ಅವರಿಗೆ ಇಷ್ಟವಿರಲಿಲ್ಲ. ಪುಟ್ಟದಾದರೂ ಒಂದು ನೌಕರಿ ಹುಡುಕಿ ಜೀವನ ಸಾಗಿಸಲು ಐನ್‌ಸ್ಟೀನ್‌ ನಿರ್ಧರಿಸಿದರು. ಸ್ನೇಹಿತರೊಬ್ಬರ ಸಹಾಯದಿಂದ ಪೇಟೆಂಟ್ ಕಛೇರಿಯಲ್ಲೊಂದು ನೌಕರಿ ಪಡೆದರು, ಅದು 1902ನೇ ಇಸವಿ. ಅದೂ ಮೂರನೇ ದರ್ಜೆಯ ಗುಮಾಸ್ತನ ಸ್ಥಾನ. ಪೇಟೆಂಟ್ ಕಛೇರಿಯಲ್ಲಿ ಸಾಕಷ್ಟು ಸಮಯಾವಕಾಶ ಸಿಗುತ್ತಿದ್ದುದರಿಂದ ಗಣಿತ ಮತ್ತು ಭೌತಶಾಸ್ತ್ರಗಳ ಮುಂದುವರೆದ ಅಧ್ಯಯನಕ್ಕೆ ಸಹಾಯವಾಯಿತು. ಕಾಲೇಜಿನಲ್ಲಿ ಓದುವಾಗಲೇ ಪರಿಚಯವಿದ್ದ ಮಿಲೇದಾ ಎಂಬ ಗೆಳತಿಯನ್ನು ಆಲ್ಬರ್ಟ್ ಐನ್ ಸ್ಟೀನ್ ಮದುವೆಯಾದರು, ಮಿಲೇವಾ ಕೂಡಾ ಭೌತಶಾಸ್ತ್ರದ ಅಧ್ಯಯನದಲ್ಲಿ ಅಪಾರ ಆಸಕ್ತಿ ಹೊ೦ದಿದವರೇ ಆಗಿದ್ದರು.

ಬದಲಾದ ಜೀವನ ಘಟ್ಟ

ಪೇಟೆಂಟ್ ಕಛೇರಿಯಲ್ಲಿ ಸಾಧಾರಣ ಮೂರನೇ ದರ್ಜೆ ಗುಮಾಸ್ತನಾಗಿ ಕೆಲಸಕ್ಕೆ ಸೇರಿದ ಆಲ್ಬರ್ಟ್ ಐನ್‌ಸ್ಟೀನ್ ಮೂರು ವರ್ಷ ಕಳೆಯುವುದರೊಳಗೆ ಅಂದರೆ, 1905ರಲ್ಲಿ. ಇದ್ದಕ್ಕಿದ್ದಂತೆ "ವಿಜ್ಞಾನಿ ಐನ್‌ಸ್ಟೀನ್' ಆಗಿ ಪ್ರಖ್ಯಾತಿಗೊಂಡರು. ಇದು ಕೆಲವೇ ದಿನಗಳಲ್ಲಿ ನಡೆದುಹೋಯಿತು. ಅದಕ್ಕೆ ಕಾರಣ, ಭೌತಿಕ ಜಗತ್ತಿನ ಬಗೆಗೆ ತಮ್ಮ ಚಿಂತನೆಯಲ್ಲಿ ರೂಪುಗೊಂಡಿದ್ದ ವಿಜ್ಞಾನದ ಸಿದ್ಧಾಂತಗಳನ್ನು 5 ಲೇಖನಗಳನ್ನಾಗಿ ಬರೆದು ಪ್ರಕಟಿಸಿದರು ಐನ್‌ಸ್ಟೀನ್. ಅಚ್ಚರಿಯ ಸಂಗತಿಯೆಂದರೆ ಐನ್‌ಸ್ಟೀನ್ ಬರೆದ ಲೇಖನಗಳಿಂದಾಗಿ 200 ವರ್ಷಗಳಿಂದ ವಿಜ್ಞಾನಿಗಳೆಲ್ಲರೂ ನಂಬಿಕೊಂಡು ಬಂದಿದ್ದ ಸಿದ್ಧಾಂತಗಳೆಲ್ಲಾ ತಲೆಕೆಳಗಾಗಿ ಹೋದವು ! ಬಹುತೇಕ ಭೌತವಿಜ್ಞಾನದ ಪುಸ್ತಕಗಳನ್ನೆಲ್ಲಾ ಹೊಸದಾಗಿ ಬರೆಯಬೇಕಾದ ಪರಿಸ್ಥಿತಿ ಬಂದಿತು. ಜಗತ್ತಿನ ಪ್ರಖ್ಯಾತ ವಿಜ್ಞಾನಿಗಳೆಲ್ಲಾ ನಿಸರ್ಗದ ನಿಯಮಗಳಿಗೆ ಹೊಸ ಭಾಷ್ಯ ಬರೆದ ಇಂಥಾ ಮೇಧಾವಿ ಐನ್‌ಸ್ಟೀನ್ ಯಾರೆಂದು ಹುಡುಕಹತ್ತಿದರು. ದೇಶದ ಪ್ರಸಿದ್ಧ ಪ್ರಯೋಗಾಲಯಗಳಲ್ಲಿ ವಿಶ್ವವಿದ್ಯಾನಿಲಯಗಳಲ್ಲಿ ತಡಕಾಡಿದರು. ಕೊನೆಗೆ ಈತ ಪೇಟೆಂಟ್ ಕಛೇರಿಯಲ್ಲಿರುವ ಮೂರನೇ ದರ್ಜೆಯ ಸಾಮಾನ್ಯ ಗುಮಾಸ್ತ, 26 ವರ್ಷದ ಹುಡುಗ ಎಂದು ತಿಳಿದಾಗ ಅವರೆಲ್ಲ ಕಕ್ಕಾಬಿಕ್ಕಿಯಾದರು. ಐನ್‌ಸ್ಟೀನ್‌ ಚಿಂತನೆಯ ಲಹರಿ ಕಂಡು ಬೆಕ್ಕಸಬೆರಗಾದರು. ಐನ್‌ಸ್ಟೀನ್ ಜಗತ್ತಿನಾದ್ಯಂತ ದಿನರಾತ್ರಿ ಕಳೆಯುವುದರೊಳಗೆ ಪ್ರಖ್ಯಾತಿ ಪಡೆದುಬಿಟ್ಟರು!

ಐನ್‌ಸ್ಟೀನ್‌ರ ಖ್ಯಾತಿ ಮುಗಿಲೆತ್ತರ ಏರುತ್ತಿದ್ದಂತೆ ಹಲವಾರು ದೇಶಗಳು ಐನ್‌ಸ್ಟೀನ್‌ ರನ್ನು ತಮ್ಮ ವಿಶ್ವವಿದ್ಯಾಲಯಗಳಲ್ಲಿ, ಪ್ರೊಫೆಸರ್ ಆಗಿ ಕೆಲಸ ಮಾಡಲು ಕೋರಿಕೊಂಡವು, ಐನ್‌ಸ್ಟೀನ್‌ ರನ್ನು ಸೆಳೆದುಕೊಳ್ಳಲು ಯುರೋಪ್‌ ರಾಷ್ಟ್ರಗಳ ಮಧ್ಯೆ ದೊಡ್ಡ ಪೈಪೋಟಿಯೇ ನಡೆಯಿತು. ಎಲ್ಲರೂ ಐನ್‌ಸ್ಟೀನ್ ರನ್ನು ಯುಗಪುರುಷನೆಂದು ಹೊಗಳಲು ಪ್ರಾರಂಭಿಸಿದರು. 1909ರಲ್ಲಿ ಐನ್‌ಸ್ಟೀನ್ ಜ್ಯೂರಿಕ್‌ನಲ್ಲಿ ಸಹಾಯಕ ಪ್ರೊಫೆಸರ್ ಆಗಿ ಅಧ್ಯಾಪಕ ವೃತ್ತಿಗೆ ಸೇರಿಕೊಂಡರು. ಇದಾದ ನಂತರ ಜಗತ್ತಿನ ಪ್ರಖ್ಯಾತ ಸಂಶೋಧನಾಲಯಗಳಲ್ಲಿ ಒಂದಾದ ಬರ್ಲಿನ್ ವಿಶ್ವವಿದ್ಯಾನಿಲಯದಲ್ಲಿ 5 ವರ್ಷಗಳ ಪ್ರೊಫೆಸರ್ ಹುದ್ದೆಗೆ ಐನ್‌ಸ್ಟೀನ್‌ರು ಆಹ್ವಾನಿಸಲ್ಪಟ್ಟರು. ಆ ಹೊತ್ತಿಗೆ ಅವರ ಪತ್ನಿ ತನ್ನ ಮಕ್ಕಳನ್ನು ಕರೆದುಕೊಂಡು ಸ್ವಿಟ್ಜರ್ಲೆಂಡ್‌ ಗೆ ಹಿಂದಿರುಗಿದರು. ಆದೇ ಸಮಯದಲ್ಲೇ ಜರ್ಮನಿಯಲ್ಲಿ ಮೊದಲನೇ ಮಹಾಯುದ್ಧದ ಕಾವು ಏರತೊಡಗಿತ್ತು. ದೂರವಾದ ಹೆಂಡತಿ, ಮಕ್ಕಳು ಅಥವಾ ಮಹಾಯುದ್ದ ಬಿಸಿ ಯಾವುದರಿಂದಲೂ ಏನ್‌ಸ್ಟೀನ್ ಕಂಗೆಡಲಿಲ್ಲ, ಸದಾ ಸಮಾಧಾನಚಿತ್ತರಾಗಿ ಐನ್‌ಸ್ಟೀನ್ ತಮ್ಮ ಸಂಶೋಧನೆಯನ್ನು ಮುಂದುವರಿಸಿದ್ದರು. ಇದರಿಂದಾಗಿಯೇ ಎರಡು ವರ್ಷ ಕಳೆಯುವುದರಲ್ಲಿ ತಮ್ಮ 'ಸಾಮಾನ್ಯ ಸಾಪೇಕ್ಷತಾ ಸಿದ್ಧಾಂತ' (General Theory of Relativity) ವನ್ನು ಪ್ರಕಟಿಸಿದರು.

ಮೊದಲನೇ ಪ್ರಪಂಚ ಮಹಾಯುದ್ಧ ನಡೆದು ಹೋಯಿತು. ಎಲ್ಲೆಲ್ಲೂ ಸಾವುನೋವುಗಳು ಸಂಭವಿಸಿದವು. ವಿಜ್ಞಾನಿ ಐನ್‌ಸ್ಟೀನ್ ಯುದ್ಧವನ್ನು ಕಂಡು ತುಂಬಾ ನೊಂದುಕೊಂಡರು. ಜರ್ಮನಿಯ ಕೆಲವು ಮುಖಂಡರು ಮೊದಲನೇ ಮಹಾಯುದ್ಧಕ್ಕೆ ಜರ್ಮನಿ ದೇಶ ಕಾರಣವಲ್ಲವೆಂದು, ಅನಿವಾರ್ಯವಾಗಿ ಆತ್ಮರಕ್ಷಣೆಗಾಗಿ ಯುದ್ಧದಲ್ಲಿ ಪಾಲ್ಗೊಳ್ಳಬೇಕಾಯಿತೆಂದು ಸಾರತೊಡಗಿದರು. ಈ ಹೇಳಿಕೆಯನ್ನು ಬೆಂಬಲಿಸಲು ಗಣ್ಯರ ಸಹಿ ಸಂಗ್ರಹಣೆಗೆ ತೊಡಗಿದರು. ಐನ್‌ಸ್ಟೀನ್ ಇಂತಹ ಹೇಳಿಕೆಯನ್ನು ನಾನು ಬೆಂಬಲಿಸುವುದಿಲ್ಲ ಎಂದು ತಮ್ಮ ಕಟುವಾದ ನಿರ್ಧಾರ ಪ್ರಕಟಿಸಿದರು. ಇದರಿಂದ ಜರ್ಮನಿಯ ಮುಖಂಡರು ಕುಪಿತಗೊಂಡರು. ಐನ್‌ಸ್ಟೀನ್‌ ರ ವಿರುದ್ಧ ಸೇಡು ತೀರಿಸಿಕೊಳ್ಳಲು ಸಿದ್ಧರಾದರು. ಮೊದಲನೇ ಮಹಾಯುದ್ಧದ ನಂತರ ಜರ್ಮನಿ ಕುಸಿಯಲಾರಂಭಿಸಿತು. ಯಹೂದಿ ಜನಾಂಗದವರು ದೇಶದ್ರೋಹಿಗಳೆಂದು ಸರ್ಕಾರವೇ ಕಿರುಕುಳ ಕೊಡಲು ಪ್ರಾರಂಭಿಸಿತು. ಯಹೂದಿಗಳು ಹಲವಾರು ದೇಶಗಳಲ್ಲಿ ನೆಲೆಸಿದ್ದ ಜನರಾಗಿದ್ದರು. ಐನ್‌ಸ್ಟೀನ್ ಕೂಡ ಯಹೂದಿ ಜನಾಂಗದಿಂದ ಬಂದವರಾದ್ದರಿಂದ ಯಹೂದಿಯರಿಗೆ ಸರ್ಕಾರದಿಂದಾಗುತ್ತಿದ್ದ ವಿನಾಕಾರಣ ಕಿರುಕುಳವನ್ನು ಪ್ರತಿಭಟಿಸಿದರು. ಐನ್‌ಸ್ಟೀನ್‌ರಿಗೂ ನಾಜೀ ಸರ್ಕಾರದ ಕಿರುಕುಳ ಪ್ರಾರಂಭವಾಯಿತು.

ಆಗಲೇ ವಿಶ್ವಖ್ಯಾತಿ ಪಡೆದಿದ್ದ ಆಲ್ಬರ್ಟ್ ಐನ್‌ಸ್ಟೀನ್‌ ರಿಗೆ ಯಾವ ದೇಶಕ್ಕೆ ಹೋದರೂ ಆಶ್ರಯ ಸಿಗುವಂತಿತ್ತು, ಜಗತ್ತಿನ ಎಲ್ಲ ರಾಷ್ಟ್ರಗಳೂ ಅವರನ್ನು ಖುದ್ದು ಆಹ್ವಾನಿಸಿ ಗೌರವಿಸಲು ತಮ್ಮಲ್ಲಿ ಉಳಿಸಿಕೊಳ್ಳಲು ಬೇಡಿಕೆಯನ್ನಿಟ್ಟಿದ್ದವು. ಸರ್ಕಾರದ ದೌರ್ಜನ್ಯ ಹೆಚ್ಚಾದಂತೆ ಐನ್‌ಸ್ಟೀನ್ ಜರ್ಮನಿ ಬಿಡಬೇಕಾದ ಸಂದರ್ಭ ಬಂದೊದಗಿತು. ಪ್ರೀತಿ ಆದರಗಳಿಂದ ಆಹ್ವಾನ ನೀಡಿದ ವಿಶ್ವದ ಹಲವಾರು ದೇಶಗಳಿಗೆ ವಿಜ್ಞಾನಿ ಆಲ್ಬರ್ಟ್ ಐನ್‌ಸ್ಟೀನ್ ಭೇಟಿ ನೀಡಿದರು. ಹೋದೆಡೆಯಲ್ಲೆಲ್ಲಾ ಆ ದೇಶಗಳ ವಿಜ್ಞಾನದ ಪ್ರಗತಿಯನ್ನು ನೋಡಿ ಮೆಚ್ಚಿದರು, ಅಭಿವೃದ್ಧಿಗಾಗಿ ಸೂಕ್ತ ಸಲಹೆ ಕೊಟ್ಟರು. ಜನ ಸೇರಿದಡೆಯಲ್ಲೆಲ್ಲಾ ಐನ್‌ಸ್ಟೀನರು ತಮ್ಮ ನೆಚ್ಚಿನ ಖ್ಯಾತ ಸಂಶೋಧನೆಗಳ ಕುರಿತು ಉಪನ್ಯಾಸ ನೀಡಿದರು. ಜಗತ್ತಿನ ವಿವಿಧ ದೇಶಗಳ ಸುತ್ತಾಟ ಐನ್‌ಸ್ಟೀನ್ ಒಬ್ಬ ವಿಜ್ಞಾನಿಯಷ್ಟೇ ಅಲ್ಲ ಅವರೊಬ್ಬ ಮಾನವೀಯ ಅಂತಃಕರಣದ ಮೇರುವ್ಯಕ್ತಿ ಎಂಬುದನ್ನು ಸಾರಿತು. ಜನಸಾಮಾನ್ಯರ ಬಡತನ, ಅಸಹಾಯಕತೆ ಮತ್ತು ಮೌಡ್ಯಗಳ ವಿರುದ್ಧ ಜಾಗತಿಕ ಹೋರಾಟಕ್ಕೆ ಐನ್‌ ಸ್ಟೀನ್ ಕರೆ ನೀಡಿದರು.

 ಮೊದಲ ಭಾಗ ಓದಿಲ್ಲದಿದ್ದರೆ ಕೆಳೆಗೆ ಕಾಣುತ್ತಿರುವ click here ಬಟ್ಟನ್ ಅನ್ನು ಒತ್ತಿ.

CLICK HERE

ಹೆಚ್ಚಿನ ಮಾಹಿತಿಯನ್ನು ಮುಂದಿನ ಬರಹದಲ್ಲಿ ತಿಳಿಯೋಣ.