Dec 31, 2020

ವ್ಯಾವಹಾರಿಕ ಪತ್ರಲೇಖನ ಬರೆಯುವುದು ಹೇಗೆ? How to write Business letter writing in Kannada?

ವ್ಯಾವಹಾರಿಕ ಪತ್ರಲೇಖನ ಬರೆಯುವುದು ಹೇಗೆ? How to write Business letter writing in Kannada?

 

ಈ ಅಂಕಣದಲ್ಲಿ ವ್ಯಾವಹಾರಿಕ ಪತ್ರ (ಅರ್ಜಿ ಬರವಣಿಗೆ) ಬರೆಯುವ ಬಗ್ಗೆ ತಿಳಿಯೋಣ.


ವ್ಯಾವಹಾರಿಕ ಪತ್ರಗಳಲ್ಲಿ ನಿರ್ದಿಷ್ಟವಾದ ಉದ್ದೇಶವಿರುತ್ತದೆ. ಉಳಿದಂತೆ ಖಾಸಗಿ ಪತ್ರದ ಎಲ್ಲ ನಿಯಮಗಳು ಅನ್ವಯಿಸುತ್ತವೆ. ಆದರೂ ಕೆಲವು ಬದಲಾವಣೆಗಳನ್ನು ಗಮನಿಸಬಹುದು. ಖಾಸಗಿ ಪತ್ರದಲ್ಲಿ ನಾವು ಯಾರಿಗೆ ಪತ್ರ ಬರೆಯುತ್ತೇವೆಯೋ ಅವರ ವಿಳಾಸವನ್ನು ಕೊನೆಯಲ್ಲಿ ಮಾತ್ರ ಬರೆಯುತ್ತೇವೆ. ಆದರೆ ವ್ಯಾವಹಾರಿಕ ಪತ್ರದಲ್ಲಿ ವಿಳಾಸವನ್ನು ಎರಡನೆಯ ಹಂತದಲ್ಲಿ ಬರೆಯುತ್ತೇವೆ.


ಹಂತಗಳು ಯಾವುವು ಎಂದು ನೋಡೋಣ.


ಪ್ರಥಮ ಹಂತ :- 


ಬರೆಯುವವರ ವಿಳಾಸವು / ಶಿರೋನಾಮೆಯು ( ಲೆಟರ್ ಹೆಡ್'ನಲ್ಲಿ ಇದ್ದರೆ ದಿನಾಂಕವನ್ನು ಮಾತ್ರ ಸೂಚಿಸಿದರೆ ಸಾಕು. ಮುದ್ರಿತ ವಿಳಾಸವಿಲ್ಲದಿದ್ದರೆ ಪತ್ರದ ಬಲಭಾಗದಲ್ಲಿ ಅಥವಾ ಎಡಭಾಗದಲ್ಲಿ ವಿಳಾಸ / ಬರೆಯಬೇಕು.


ಎರಡನೆಯ ಹಂತ :- 


ಯಾರಿಗೆ ಪತ್ರ ಬರೆಯುತ್ತೇವೆಯೋ ಅವರ ವಿಳಾಸವನ್ನು ಎಡಭಾಗದಲ್ಲಿ ಬರೆಯಬೇಕು.


ಮೂರನೆಯ ಹಂತ :- 


ಮಾನ್ಯರೆ ಅಥವಾ ಮಹನೀಯರೆ ಎಂದು ಸಂಬೋಧಿಸಬೇಕು.


ನಾಲ್ಕನೆಯ ಹಂತ :- 


ಇಲ್ಲಿ ಪತ್ರದ ವಿಷಯವಿರಬೇಕು. ಖಾಸಗಿ ಪತ್ರದಲ್ಲಿ ವಿಷಯ ಎಂಬ ಹಂತ ಇರುವುದಿಲ್ಲ. ಪತ್ರದ ಸಾರವನ್ನು ಮೂರು ನಾಲ್ಕು ಪದಗಳಲ್ಲಿ ಹೇಳುವ ಕ್ರಮವಿದು.


ಐದನೆಯ ಹಂತ :- 


ಇಲ್ಲಿ ಪತ್ರದ ಒಡಲು ಬರಬೇಕು. ಒಡಲು ಪತ್ರದ ಅತಿಮುಖ್ಯಭಾಗ. ವಿಷಯವನ್ನು ವಿವರಿಸುವುದು ಇಲ್ಲಿಯೇ. ಪತ್ರದಲ್ಲಿ ಹೇಳಬೇಕಾದ ವಿಷಯವನ್ನು ಪೂರ್ತಿಯಾಗಿ ಇಲ್ಲಿ ಬರೆಯಬೇಕು.


ಆರನೆಯ ಹಂತ :- 


'ವಂದನಾಪೂರ್ವಕ' , 'ವಂದನೆಗಳೊಂದಿಗೆ' ಎಂದು ಬರೆಯಬೇಕು. ಈ ಪದದೊಂದಿಗೆ ಪತ್ರದ ಮುಕ್ತಾಯವಾಗಬೇಕು. ವ್ಯಾವಹಾರಿಕ ಪತ್ರಗಳಲ್ಲಿ ಸಾಮಾನ್ಯವಾಗಿ ಬಳಸುವ ಪದಗಳೆಂದರೆ ಧನ್ಯವಾದಗಳು, ವಂದನೆಗಳೊಂದಿಗೆ.


ಏಳನೆಯ ಹಂತ :-


ಪತ್ರದ ಕೊನೆಗೆ ಬಲಭಾಗದಲ್ಲಿ ನಿಮ್ಮ ನಂಬುಗೆಯ/ನಿಮ್ಮ ವಿಶ್ವಾಸಿ ಎಂದು ಬರೆದು ಅದರ ಕೆಳಗೆ ಸಹಿ ಹಾಕಬೇಕು. (ಸಹಿ ಮಾಡಿದ ಅನಂತರ ತಮ್ಮ ಹುದ್ದೆಯ ಮೊಹರು ಇದ್ದರೆ ಹಾಕಬೇಕು.)
ವಿಳಾಸವನ್ನು ೨ ನೆಯ ಹಂತದಲ್ಲಿ ಬರೆದಂತೆಯೇ ಲಕೋಟೆಯ ಮೇಲೆಯೂ ಬರೆಯಬೇಕು.


                                   ಮಾದರಿ ಅರ್ಜಿ ಪತ್ರ

ಹಾಳಾಗಿರುವ ರಸ್ತೆಯನ್ನು ದುರಸ್ತಿಗೊಳಿಸಲು ಗ್ರಾಮ ಪಂಚಾಯಿತಿಯವರಿಗೆ ಬರೆದ ಮನವಿಪತ್ರ

                                                           ದಿನಾಂಕ: ೩೧-೧೨-೨೦೨೦
ಇವರಿಂದ
×××××××,
ಗ್ರಾಮಸ್ಥ,
ಮಾಲ್ಗುಡಿ ಅಗ್ರಹಾರ,
ತಿತ್ಲಿಪುರ.


ಇವರಿಗೆ
ಅಧ್ಯಕ್ಷರು,
ಗ್ರಾಮ ಪಂಚಾಯಿತಿ,
ಮಾಲ್ಗುಡಿ ಅಗ್ರಹಾರ.


ಮಾನ್ಯರೇ, 

ವಿಷಯ: ಹಾಳಾಗಿರುವ ರಸ್ತೆಯನ್ನು ದುರಸ್ತಿ ಮಾಡಿಸುವ ಬಗ್ಗೆ.


ಈ ವರ್ಷ ನಮ್ಮ ತಿತ್ಲಿಪುರದಲ್ಲಿ ಅತಿವೃಷ್ಟಿಯಿಂದಾಗಿ ರಸ್ತೆಗಳೆಲ್ಲಾ ಹಾಳಾಗಿವೆ ರಸ್ತೆಯಲ್ಲಿ ಹೊಂಡಗುಂಡಿಗಳು ಉಂಟಾಗಿವೆ. ರಸ್ತೆಯಲ್ಲಿ ಸರಾಗವಾಗಿ ನಡೆದಾಡಲು ಆಗುತ್ತಿಲ್ಲ. ರಾತ್ರಿಯ ವೇಳೆ ನಡೆದಾಡುವಾಗ ಹಲವರು ಬಿದ್ದು ಕೈಕಾಲು ಮುರಿದುಕೊಂಡಿದ್ದಾರೆ. ಇದರಿಂದ ಭಯದ ಸ್ಥಿತಿಯಲ್ಲಿ ಸಾರ್ವಜನಿಕರಿದ್ದಾರೆ. ಈ ವಿಚಾರ ತಮ್ಮ ಗಮನಕ್ಕೂ ಬಂದಿದೆ. ಆದರೆ ಯಾವ ಕ್ರಮವನ್ನೂ ಕೈಗೊಳ್ಳದಿರುವುದು ಬೇಸರ ತಂದಿದೆ.

ಇನ್ನಾದರೂ ಗಮನಹರಿಸಿ ಸೂಕ್ತ ಕ್ರಮ ಕೈಗೊಂಡು, ಹಾಳಾಗಿರುವ ರಸ್ತೆಗಳನ್ನು ಸರಿಪಡಿಸಿ ಅನುಕೂಲ ಮಾಡುವಿರೆಂದು ನಿರೀಕ್ಷಿಸುತ್ತೇನೆ. ಇದರೊಂದಿಗೆ ಸಾರ್ವಜನಿಕರಿಂದ ಸಹಿ ಸಂಗ್ರಹಿಸಿದ ದಾಖಲೆ ಪತ್ರಗಳನ್ನು ಲಗತ್ತಿಸಲಾಗಿದೆ.

                        ವಂದನೆಗಳೊಂದಿಗೆ,

                                                                             ತಮ್ಮ ವಿಶ್ವಾಸಿ,        
                                                                                                                                                                                                                                     ಸಹಿ
                                                                        ( ×××××××× )

Dec 28, 2020

ಪ್ರಬಂಧ ರಚಿಸುವಾಗ ನೆನಪಿನಲ್ಲಿಡಬೇಕಾದ ಅಂಶಗಳು| Factors to keep in mind when creating an essay|

ಪ್ರಬಂಧ ರಚಿಸುವಾಗ ನೆನಪಿನಲ್ಲಿಡಬೇಕಾದ ಅಂಶಗಳು| Factors to keep in mind when creating an essay|

 ಪ್ರಬಂಧ ರಚಿಸುವಾಗ ನೆನಪಿನಲ್ಲಿಡಬೇಕಾದ ಅಂಶಗಳು| Factors to keep in mind when creating an essay|



ಅರ್ಥಪೂರ್ಣ ವಾಕ್ಯಗಳಲ್ಲಿ ನಿರ್ದಿಷ್ಟ ವಿಷಯವನ್ನು ಕ್ರಮಬದ್ಧವಾಗಿ ನಿರೂಪಿಸಿದರೆ ಅದನ್ನು ಪ್ರಬಂಧ ಎನ್ನುವರು. 


ಒಂದೇ ವಿಷಯವನ್ನು ಕುರಿತಾದ ಅನೇಕ ವಾಕ್ಯಗಳ ಸಮುಚ್ಚಯವೇ ಪ್ರಬಂಧವೆನಿಸುತ್ತದೆ. 


ಹೀಗೆ ಹಲವಾರು ವ್ಯಾಖ್ಯಾನಗಳನ್ನು ನಾವು ನೀಡಬಹುದು.


ಪ್ರಬಂಧ ಬರೆಯುವ ಮೊದಲು ಕೆಲವು ಸೂಚನೆಗಳನ್ನು ಅನುಸರಿಸಬೇಕು.


ವಿಷಯ ಸಂಗ್ರಹ: 

ಬರೆಯಬೇಕಾಗಿರುವ ಪ್ರಬಂಧದ ವಿಷಯದಲ್ಲಿ ಸಾಧ್ಯವಾದಷ್ಟು ವಿಚಾರ - ಸಂಗತಿಗಳನ್ನು ಸಂಗ್ರಹಿಸಬೇಕು.


ಕ್ರಮ ಬದ್ಧತೆ: 

ಸಂಗ್ರಹಿಸಿದ ವಿಷಯಗಳನ್ನು ಕ್ರಮವಾಗಿ ಜೋಡಿಸಿಕೊಳ್ಳಬೇಕು. ಅಂದರೆ ಯಾವ ವಿಷಯ ಮೊದಲು, ಯಾವ ವಿಷಯ ಅನಂತರ ಎಂಬುದನ್ನು ಮೊದಲೇ ನಿರ್ಧರಿಸಬೇಕು. 


ಭಾಷೆ ಮತ್ತು ಶೈಲಿ: 

ಆರಿಸಿಕೊಂಡಿರುವ ಪ್ರಬಂಧದ ವಿಷಯಕ್ಕೆ ತಕ್ಕಂತೆ ಸಮರ್ಥ ಶಬ್ದಗಳ ಬಳಕೆ, ಶುದ್ಧವಾದ ವಾಕ್ಯರಚನೆ, ಇವುಗಳಿಗೆ ಗಮನ ಕೊಡಬೇಕು. ಪ್ರಬಂಧಗಳಲ್ಲಿ ಸಂಭಾಷಣೆಯ ಶೈಲಿ ಇರುವುದಿಲ್ಲ. ಗ್ರಾಂಥಿಕ ಪದಗಳನ್ನೇ ಬಳಸಬೇಕು. ವಾಕ್ಯಗಳು ಚಿಕ್ಕದಾದಷ್ಟು ತಪ್ಪುಗಳು ಕಡಿಮೆಯಾಗುತ್ತವೆ. 


ಪ್ರಬಂಧದಲ್ಲಿ ಸಾಮಾನ್ಯವಾಗಿ ಪ್ರಸ್ತಾವನೆ, ವಿಷಯ ವಿವರಣೆ ಮತ್ತು ವಿಷಯದ ಸಮಾಪ್ತಿ ಅಥವಾ ಉಪಸಂಹಾರ ಎಂಬ ಮೂರು ಪ್ರಧಾನ ಹಂತಗಳಿರುತ್ತವೆ. 


ಇವೆಲ್ಲವನ್ನು ಗಮನದಲ್ಲಿಟ್ಟುಕೊಂಡು ಪ್ರಬಂಧ ರಚನೆ ಮಾಡಬೇಕು. ಆಗ ಅದೊಂದು ಉತ್ತಮ ಪ್ರಬಂಧವಾಗಬಲ್ಲದು.